ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ
ಹಾಸನ: ಬೇಸಿಗೆ ಪ್ರಾರಂಭವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಹಣ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ರು. 35 ಕೋಟಿ ಹಣ ಮೀಸಲಿಟ್ಟಿದ್ದು, ಈವರೆಗೆ ಕೇವಲ ರು. 13 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಉಂಟಾಗುತ್ತಿರುವುದರಿಂದ ಅಧಿಕಾರಿಗಳು ಹಣ ವ್ಯರ್ಥವಾಗದಂತೆ ಕ್ರಮಕೈಗೊಳ್ಳಬೇಕು ಎಂದರು. ಸಾಕಷ್ಟು ಕಡೆಗಳಲ್ಲಿ ಬೋರ್ವೆಲ್ಗಳನ್ನು ತೆಗೆಯದೇ ವಿಳಂಬ ಮಾಡಲಾಗಿದೆ.
ಹಣವ್ಯರ್ಥವಾಗಕೂಡದು: ಅಧಿಕಾರಿಗಳು ಬೋರ್ವೆಲ್ಗಳನ್ನು ಕೊರೆಯುವಾಗ ಯಾವುದೇ ಕಾರಣಕ್ಕೂ ಹಣ ವ್ಯರ್ಥವಾಗದಂತೆ ಕ್ರಮಕೈಗೊಳ್ಳಬೇಕು. ಜೊತೆಗೆ ಬೇಸಿಗೆ ಪ್ರಾರಂಭವಾಗಿರುವುದರಿಂದ ವಿಬಂಳ ಮಾಡದಂತೆ ಬೋರ್ವೆಲ್ಗಳನ್ನು ಕೊರೆಯಬೇಕು. ಜಿಲ್ಲೆಯ ನಾನಾ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಬೋರ್ವೆಲ್ ಕೊರೆಯಲು ಸೂಚನೆ: ಉಪಾಧ್ಯಕ್ಷ ಬಿಳಿ ಚೌಡಯ್ಯ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಅಧಿಕಾರಿಗಳು ಸಮಯ ವ್ಯರ್ಥ ಮಾಡದೇ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಬೇಕು. ಅರಸೀಕೆರೆ- ಚನ್ನರಾಯಪಟ್ಟಣ ಸೇರಿದಂತೆ ನಾನಾ ಕಡೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಇರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಿಳಂಬ ಮಾಡದೆ ಬೋರ್ವೆಲ್ಗಳನ್ನು ಕೊರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್ತನ್ನು ನೀಡಬೇಕು: ನಾನಾ ಇಲಾಖೆಗಳು ಹೊಂದಿರುವ ಗುರಿ ತಕ್ಕಂತೆ ಸಾಧನೆಯಾಗಿಲ್ಲ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕೂಡಲೇ ನಿರ್ದಿಷ್ಟ ಗುರಿ ಸಾಧಿಸಬೇಕು ಎಂದ ಅವರು, ಚೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳನ್ನು ಅಳವಡಿಸಲು ಹಣವನ್ನು ಪಡೆಯುತ್ತಾರೆ. ಆದರೆ, ಅಧಿಕಾರಿಗಳು ಸರಿಯಾಗಿ ಕಂಬಗಳನ್ನು ಅಳವಡಿಸುತ್ತಿಲ್ಲ. ಮತ್ತೆ ಆ ಕಂಬಗಳನ್ನು ರಸ್ತೆಯಿಂದ ಪಕ್ಕಕ್ಕೆ ಅಳವಡಿಸಲು ಮತ್ತೆ ಹಣವನ್ನು ಪಡೆಯುತ್ತಾರೆ. ಆದ್ದರಿಂದ ಮೊದಲೇ ಕಂಬಗಳನ್ನು ಅಳವಡಿಸುವಾಗ ಸರಿಯಾಗಿ ಅಳವಡಿಸಬೇಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ವಿದ್ಯುತ್ತನ್ನು ನೀಡಬೇಕು ಎಂದು ಹೇಳಿದರು.
ಅರಣ್ಯ ಇಲಾಖೆಯಲ್ಲಿ ಗಿಡ ಬೆಳೆಸುವ ಪ್ರಗತಿ ಕಡಿಮೆಯಾಗಿದೆ. ಅರಸೀಕೆರೆಯಲ್ಲಿ ಗಿಡ ಬೆಳೆಸಲು ನೀರಿಲ್ಲ ಮತ್ತು ಬೆಳೆದ ನಂತರ ರೈತರಿಗೆ ನೀಡಿದರೂ ಸಹ ನೀರು ಇಲ್ಲ. ಜೊತೆಗೆ ಕಳೆದ ಸಾಲಿನಲ್ಲಿ ಸುಮಾರು 40 ಸಾವಿರ ಗಿಡಗಳು ಅರಣ್ಯ ಇಲಾಖೆಯಲ್ಲಿಯೇ ಉಳಿದಿವೆ. ಆದ್ದರಿಂದ, ಅಧಿಕಾರಿಗಳು ಬೆಳೆಸಿದ ಗಿಡಗಳನ್ನು ರೈತರಿಗೆ ವಿತರಣೆ ಮಾಡಬೇಕು. ಗಿಡ ಬೆಳೆಸಿ ಇಲಾಖೆ ಬಾಕಿ ಉಳಿಸಿಕೊಂಡರೆ ಪ್ರಯೋನವಾದರೂ ಏನು ಎಂದು ಪ್ರಶ್ನಿಸಿದರು.
ಭರವಸೆ: ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣ ಪ್ರಸಾದ್ ಹಾಗೂ ನಾಗರಾಜ್, ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿ, ಬೋರ್ವೆಲ್ಗಳನ್ನು ಸಕಾಲದಲ್ಲಿ ಕೊರೆಯುವುದಾಗಿ ತಿಳಿಸಿದರು.
ನರ್ಸರಿಗಳಿಂದ ಗಿಡ ವಿತರಣೆ: ಅರಣ್ಯ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, ರೈತರಿಗೆ ಬೇಕಾದ ತೇಗ, ಬೇವು, ನೇರಳೆ, ಹಲಸು ಸೇರಿದಂತೆ ಇತರೆ ಗಿಡಗಳನ್ನು ಬೆಳೆದು ರೈತರಿಗೆ ನೀಡಲಾಗುತ್ತಿದೆ. ಹಾಸನದಲ್ಲಿ 2 ನರ್ಸರಿಗಳು, ಬೇಲೂರಿನಲ್ಲಿ 2, ಸಕಲೇಶಪುರದಲ್ಲಿ 3, ಆಲೂರಿನಲ್ಲಿ 1, ಅರಕಲಗೂಡಿನಲ್ಲಿ 2, ಅರಸೀಕೆರೆಯಲ್ಲಿ 2 ಹಾಗೂ ಹೊಳೆನರಸೀಪುರದಲ್ಲಿ ನರ್ಸರಿಗಳಿದ್ದು, ಗಿಡ ಬೆಳೆಸಲಾಗುತ್ತಿದೆ. ಅರಸೀಕೆರೆ ತಾಲೂಕು ಒಂದರಲ್ಲಿಯೇ 20 ಸಾವಿರ ಗಿಡಗಳು ಬಾಕಿ ಉಳಿದಿವೆ. ಆದ್ದರಿಂದ, ಉಳಿದ ಗಿಡಗಳನ್ನು ರೈತರಿಗೆ ಕೂಡಲೇ ವಿತರಣೆ ಮಾಡುವುದಾಗಿ ಹೇಳಿದರು.
ಆಸ್ಪತ್ರೆ ಬೇಕು: ಪಶುಸಂಗೋಪನಾ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ 258 ಜಾನುವಾರುಗಳು ಕಾಲುಬಾಯಿ ರೋಗದಿಂದ ಸಾವನ್ನಪ್ಪಿವೆ. ಚನ್ನರಾಯಪಟ್ಟಣದಲ್ಲಿ 110, ಆಲೂರಿನಲ್ಲಿ 2, ಅರಕಲಗೂಡಿನಲ್ಲಿ 29, ಅರಸೀಕೆರೆಯಲ್ಲಿ 39, ಬೇಲೂರಿನಲ್ಲಿ 11, ಹಾಸನದಲ್ಲಿ 37, ಹೊಳೆನರಸೀಪುರದಲ್ಲಿ 22 ಮತ್ತು ಸಕಲೇಶಪುರದಲ್ಲಿ 7 ಜಾನುವಾರುಗಳು ಸಾವನ್ನಪ್ಪಿದ್ದು, ಈಗ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಗೆ 4 ಆಸ್ಪತ್ರೆಗಳ ನಿರ್ಮಾಣಕ್ಕೆ ಕೇಂದ್ರದಿಂದ ಅನುಮತಿ ಲಭ್ಯವಾಗಿದ್ದು, ಶ್ರವಣಬೆಳಗೊಳ, ಮಲ್ಲಿಮಟ್ಟಣ, ರಾಯರಕೊಪ್ಪಲಿನಲ್ಲಿ ಆಸ್ಪತ್ರಗಳು ನಿರ್ಮಾಣವಾಗದೆ. ಜೊತೆಗೆ ವೈದ್ಯರ ನೇಮಕಾತಿಯು ಸಹ ನಡೆಯುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪುರುಷೋತ್ತಮ್ ಮಾತನಾಡಿ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು 59 ಇದ್ದು, 3938 ವಿದ್ಯಾರ್ಥಿಗಳಿಗೆ 3200 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಶೇ. 81.3ರಷ್ಟು ಗುರಿ ಸಾಧಿಸಲಾಗಿದೆ. ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳು 23 ಇದ್ದು, 2543 ವಿದ್ಯಾರ್ಥಿಗಳ ಗುರಿ ಹೊಂದಿದ್ದು, ಶೇ. 100ರಷ್ಟು ಗುರಿ ಸಾಧಿಸಲಾಗಿದೆ. ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಠ ಜಾತಿ ಕಾಲೋನಿಗಳ ಮೂಲಭೂತ ಸೌಕರ್ಯ ಕಲ್ಪಿಸಲು 69 ಕಾಮಗಾರಿಗಳ ಪೈಕಿ 35 ಕಾಮಗಾರಿಗಳನ್ನು ಪೂರೈಸಲಾಗಿದೆ. ಪರಿಶಿಷ್ಠ ಜಾತಿ ಕುಟುಂಬಗಳಿಗೆ ಸಹಾಯ ಮಾಡಲು 569 ಗುರಿ ಹೊಂದಿದ್ದು, ಈ ಪೈಕಿ 183 ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅರಸೀಕೆರೆಯ ಕೆಲವು ಹಾಸ್ಟೆಲ್ಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಬಾಕಿ ಉಳಿದಂತಹ ಎಲ್ಲಾ ತಾಲೂಕುಗಳ ಹಾಸ್ಟೆಲ್ಗಳು ಉತ್ತಮವಾ ಕಾರ್ಯನಿರ್ವಹಿಸುತ್ತಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಗೂ ನಾನಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

