'ಬಲಿಷ್ಠ ಭಾರತಕ್ಕಾಗಿ ಮೋದಿ ಪ್ರಧಾನಿಯಾಗಬೇಕು'
ಅರಸೀಕೆರೆ: ಭ್ರಷ್ಟಾಚಾರ ಮುಕ್ತ ಬಲಿಷ್ಠ ಭಾರತದ ನಿರ್ಮಾಣಕ್ಕೆ ಯುವಜನತೆ ಸಂಕಲ್ಪ ಮಾಡುವ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕ ನರೇಂದ್ರ ಮೋದಿ ಅವರನ್ನು ಪ್ರಧಾನಿಯವರನ್ನಾಗಿ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಎ.ಎಸ್. ಬಸವರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಪಿ.ಪಿ. ವೃತ್ತದಲ್ಲಿ ನರೇಂದ್ರ ಮೋದಿ ಅಭಿಮಾನಿಗಳ ವೇದಿಕೆ ಶುಕ್ರವಾರ ಆಯೋಜಿಸಲಾಗಿದ್ದ ಚಹಾ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸಚಿವರೊಬ್ಬರು ಮೋದಿಯವರನ್ನು ಚಹಾ ಮಾರಾಟ ಮಾಡುವ ಸಾಮಾನ್ಯ ವ್ಯಕ್ತಿಯೆಂದು ಹೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.
ಒಗ್ಗಟ್ಟಿನಿಂದ ಬೆಂಬಲಿಸಬೇಕು: ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರ ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಧೋರಣೆ ಅನುಸರಿಸುವ ಮೂಲಕ ಜನವಿರೋಧಿ ಸರ್ಕಾರವಾಗಿದೆ. ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿದ್ದು, ಶ್ರೀಸಾಮಾನ್ಯರ ಬದುಕು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಲಿಷ್ಠ ಭಾರತದ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ಮಾಡುವ ಮೂಲಕ ಬಿಜೆಪಿ ನಾಯಕ ನರೇಂದ್ರ ಮೋದಿ ಅವರನ್ನು ಒಗ್ಗಟ್ಟಿನಿಂದ ಬೆಂಬಲಿಸಬೇಕು ಎಂದರು.
ಕರೆ: ಕಳೆದ 10 ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ತನ್ನ ವರ್ಚಸ್ಸು ಕಳೆದುಕೊಂಡಿದೆ. ಪ್ರತಿಯೊಬ್ಬರೂ ದೇಶದ ಏಳಿಗೆಯನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ಪರ ಮತ ಚಲಾಯಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಅನ್ಯ ಮಾರ್ಗವಿಲ್ಲ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀರಂಗಯ್ಯ ಮಾತನಾಡಿ, ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ ದೇಶ ಪ್ರಗತಿಪಥದತ್ತ ಹೆಜ್ಜೆ ಇಡದಿರುವುದು ದುರದೃಷ್ಟಕರ ಸಂಗತಿ. ಸರ್ದಾರ್ ವಲ್ಲಬಾಯಿ ಪಟೇಲ್ ಅವರಂತಹ ಸಮರ್ಥ ನಾಯಕತ್ವ ಇಲ್ಲದ ಕಾರಣ ದೇಶದ ಚುಕ್ಕಾಣಿ ಹಿಡಿದಿದ್ದ ನಾಯಕರ ಧೋರಣೆ ಫಲವಾಗಿ ಅಭಿವೃದ್ಧಿಶೀಲ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಉಳಿದಿದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನರೆಂದ್ರ ಮೋದಿ ಬೆಂಬಲಿಸುವುದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ ಎಂದರು.
ನಮೋ ಬ್ರಿಗೇಡ್ ಸಂಚಾಲಕ ಶಿವರಾಜ್ ಕುಮಾರ್, ನರೇಂದ್ರ ಮೋದಿ ಅಭಿಮಾನಿಗಳ ವೇದಿಕೆ ತಾ. ಅಧ್ಯಕ್ಷ ಸಿ. ರಾಮಚಂದ್ರ, ಪರಶಿವಮೂರ್ತಿ, ಶಾನುಭೋಗ್ ನಾರಾಯಣ್, ಎನ್.ಸಿ. ಗೋವಿಂದರಾಜು, ಎ.ಎಲ್. ನಾರಾಯಣ್, ಶ್ರೀಕಾಂತ್, ಬಿ.ಆರ್. ಮಹಾಲಿಂಗಪ್ಪ, ಎಸ್.ಬಿ. ಭದ್ರಪ್ಪ, ಮರಟಗೆರೆ ಪ್ರೇಮ್ ಕುಮಾರ್, ಸೋನಿ, ಕಟ್ಟೆಹಳ್ಳಿ ನವೀನ್, ಪುರಿ ನಾಗೇಶ್, ಬೆಂಡೇಕೆರೆ ಗಂಗಾಧರ್, ಕರಡಿಹಳ್ಳಿ ಶಶಿಧರ, ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

