ಹಾಸನ

ಅಂತ್ಯ ಕಾಣದ ಕಾಡಾನೆಗಳ ಕಾಡಾಟ

Published On :

ಆಲೂರು: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಇತ್ತೀಚಿನ ದಿನಗಳು ಕಾಡಾನೆಗಳ ಗ್ರಾಮಗಳ ಬಳಿಯೇ ಕಾದಾಟ ನಡೆಸುತ್ತಿರುವದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ.
ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಗ್ರಾಮದ ಕಮಲಮ್ಮ (60) ಗಾಯಗೊಂಡವರು. ಅವರನ್ನು ಹಾಸನದ ಆಸ್ಪತ್ರೆಗೆ  ದಾಖಲಿಸಲಾಗಿದೆ. ಬೆಳಗ್ಗೆ 6ರಲ್ಲಿ ಬಹಿರ್ದೆಸೆಗೆಂದು ಮನೆಯ ಪಕ್ಕದ ಹಿತ್ತಲಿಗೆ ಹೋಗುತ್ತಿದ್ದಾಗ ಏಕಾಏಕಿ ಎದುರಾದ ಕಾಡಾನೆಯನ್ನು ಕಂಡು ಗಾಬರಿಗೊಂಡ ಮಹಿಳೆ ಓಡುವ ಸಂದರ್ಭದಲ್ಲಿ ಬಿದ್ದು, ಆಕೆಯ ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದೆ.
ಕಳೆದ 20 ದಿನಗಳಿಂದ ಹಿಂದೆ ತಾಲೂಕಿನ ದೊಡ್ಡಬೆಟ್ಟ ಅರಣ್ಯ ಪ್ರದೇಶದ ನಾಗಾವರ ಎಂಬಲ್ಲಿ ಮರಿಯಾನೆಯೊಂದನ್ನು ಹಿಡಿದ ಸಂದರ್ಭದಲ್ಲಿ ಹಾಗೂ ಅದರ ಹಿಂದೆ ಪುರಭೈರವನಹಳ್ಳಿ ಗ್ರಾಮದಲ್ಲಿ ಸರೋಜಮ್ಮ ಎಂಬುವರು ಬಹಿರ್ದೆಸೆಗೆಂದು ಹೋಗುವ ಸಂದರ್ಭದಲ್ಲೇ ಒಂಟಿ ಸಲಗದ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.  ಈ ಭಾಗದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳು ಮನಸೋ ಇಚ್ಛೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಗೊಳಿಸುತ್ತಿರುವುದಲ್ಲದೆ, ಗ್ರಾಮಗಳಿಗೆ ನುಗ್ಗಿ ಹಗಲು ಹೊತ್ತಿನಲ್ಲೇ ದಾಂಧಲೆ ನಡೆಸುತ್ತಿದ್ದು, ಈ ಭಾಗದ ಜನ ಇದರಿಂದಾಗಿ ಭಯಭೀತರಾಗಿದ್ದಾರೆ.   
ಆನೆಗಳ ಕಾಳಗ: ಮೂರು ದಿನಗಳಿಂದ ಎಡೆಬಿಡದೆ ದೊಡ್ಡಬೆಟ್ಟ, ಕರಡಿ ಬೆಟ್ಟ, ರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ಆನೆಗಳ  ಹಾವಳಿ ತೀವ್ರಗೊಂಡಿದ್ದು, ಹಾಡಹಗಲೇ ಆನೆಗಳು ಗ್ರಾಮಸ್ಥರ ಕಣ್ಣಿಗೆ ಗೋಚರಿಸುತ್ತಿದೆಯಲ್ಲದೆ, ಮದವೇರಿರುವ ಒಂಟಿ ಸಲಗಗಳು ಎಲ್ಲೆಂದರಲ್ಲಿ ತಿರುಗುತ್ತಿವೆ. ಗ್ರಾಮಸ್ಥರನ್ನು ಕಂಡರೆ ಸಾಕು ಅವರ ಮೇಲೆ ದಾಳಿಗೆ ಮುಂದಾಗುತ್ತಿವೆ. ಅಲ್ಲದೆ, ಕಾಡಿನಿಂದ  ಹೊರಬಂದು ಹೇಮಾವತಿ ಹಿನ್ನೀರಿನ ಪ್ರದೇಶದಲ್ಲಿ ಕಾಳಗಕ್ಕೆ ಬೀಳುತ್ತಿದ್ದು, ಕಾಳಗದಲ್ಲಿ ಸೋತ ಒಂಟಿ ಆನೆ ಎಲ್ಲೆಂದರಲ್ಲಿ ದಾಳಿ ನಡೆಸುತ್ತಿದೆ.
ಇದರಿಂದಾಗಿ ಹೊನ್ನವಳ್ಳಿ, ಕಾಗನೂರು, ಕಾಣಗೆರೆ, ಕಲ್ಲಾರೆ, ಮಾದಿಹಳ್ಳಿ, ನಾಗಾವರ, ಅಡಿಬೈಲು, ಪುಡಿದೆಲೆ, ಕಾಗನೂರು, ಮಾಗಡಿಹಳ್ಳಿ ಸುತ್ತಮುತ್ತಲ ಪ್ರದೇಶದ ಜನ ಮನೆಯಿಂದ ಹೊರಬರಲು ಹಗಲು ಹೊತ್ತಿನಲ್ಲೇ ಹೆದರುವಂತಾಗಿದೆ.
ಏನಾಯ್ತು ಸಚಿವರ ಭರವಸೆ?: ಸದನದಲ್ಲಿ ಮೂರು ದಿನಗಳ ಹಿಂದೆ ಶಾಸಕ ಎಚ್.ಕೆ. ಕುಮಾರಸ್ವಾಮಿ ಈ ಭಾಗದಲ್ಲಿ ಆಗುತ್ತಿರುವ ಕಾಡಾನೆಗಳ ದಾಳಿ ಬಗ್ಗೆ ಹಾಗೂ ಕಾಡಾನೆ ಹಿಡಿಯುವ ಕಾರ್ಯಾಚರಣೆಯನ್ನು  ಶೀಘ್ರವೇ ಪ್ರಾರಂಭಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಅರಣ್ಯ ಸಚಿವ ರಮಾನಾಥ ರೈ ಜ. 30ರಂದು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ, ಫೆ. 5ರಂದು ಕಾಡಾನೆ  ಹಿಡಿಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಎಲ್ಲ ಆನೆಗಳನ್ನು ಹಿಡಿದು, ಸಾಗಿಸುವ ಭರವಸೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳನ್ನು  ಪ್ರಶ್ನಿಸಿದರೆ, ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.   
ಫೆ. 5ರಿಂದ ಕಾರ್ಯಾಚರಣೆ ಪ್ರಾರಂಭಿಸಬೇಕಾದರೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಆದರೆ, ಜಿಲ್ಲಾ ಅರಣ್ಯಾಧಿಕಾರಿ ಆಗಲಿ ಅಥವಾ ಆರ್‌ಎಫ್‌ಓ  ದೇವರಾಜ್ ಆಗಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ರೀತಿಯಾದರೆ ಸದನದಲ್ಲಿ ಅರಣ್ಯ ಸಚಿವರು ನೀಡಿರುವ ಭರವಸೆಯೂ ಸುಳ್ಳೇ ಎಂಬ ಪ್ರಶ್ನೆ ಈ ಭಾಗದ ಜನರನ್ನು ಕಾಡುತ್ತಿದೆ.
ಅಲ್ಲದೇ, ಕಳೆದ ಬಾರಿ ಆನೆ ಹಿಡಿಯುವ ಸಂದರ್ಭದಲ್ಲಿ ಇಲ್ಲಿರುವ ಆನೆಗಳ ಪೈಕಿ ಅತ್ಯಂತ ಹೆಚ್ಚು ತೊಂದರೆ ನೀಡುತ್ತಿರುವ 14 ಅಡಿ ಎತ್ತರವಿರುವ ಬಲಿಷ್ಠವಾದ ಮೂರು ಒಂಟಿ ಸಲಗಗಳು ಹಾಗೂ ಮಕ್ನಾ ಆನೆಯನ್ನು ಹಿಡಿಯುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಹಿಡಿದಿದ್ದು ಮರಿಯಾನೆಯನ್ನು ಮಾತ್ರ.
ಆನೆ ಹಿಡಿಯಲು ಕ್ಯಾಂಪ್‌ನಲ್ಲಿದ್ದ ಕಬ್ಬಿಣದ ಸರಪಳಿಯನ್ನು ಯಾರೋ ಕಳವು ಮಾಡಿದ್ದು, ಪುನ- ಒಂದು ಕಬ್ಬಿಣದ ಸರಪಳಿಯನ್ನು ಸಿದ್ಧಗೊಳಿಸಿಕೊಳ್ಳಲಾಗಿಲ್ಲ. ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಅರಣ್ಯ ಇಲಾಖೆಯವರು ಮರಿಯಾನೆಯನ್ನು ಹಿಡಿದ ಸಂದರ್ಭದಲ್ಲೇ ಈ ರೀತಿ ಪಾಡು ಪಡಬೇಕಾಯಿತು.ಇನ್ನೇನಾದರೂ ದೊಡ್ಡ ಆನೆ ಹಿಡಿಯುವುದಾದರೆ ಇದೇ ಸೆಣಬಿನ ಹಗ್ಗದಿಂದ ದೊಡ್ಡ ಆನೆಯನ್ನು ಕಟ್ಟಿ ಹಾಕಲು ಸಾಧ್ಯವೇ ಇಲ್ಲ.
ಆದ್ದರಿಂದ, ಜಿಲ್ಲಾಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ ಆನೆ ಹಿಡಿಯುವ ಕಾರ್ಯಾಚರಣೆ ಯಾವಾಗ ಪ್ರಾರಂಭವಾಗುತ್ತದೆ. ಅದಕ್ಕೆ  ಅರಣ್ಯ ಇಲಾಖೆಯವರು ಏನೇನು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದನ್ನು ಹಾಗೂ ನಿರ್ದಿಷ್ಟ ಯಾವ ಆನೆಯನ್ನು  ಹಿಡಿಯುತ್ತಾರೆ ಎಂಬುದನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸಿ, ನಂತರ ಕಾರ್ಯಾಚರಣೆ ಪ್ರಾರಂಭಿಸಲಿ ಎಂದು ಆಗ್ರಹಿಸಲಾಗಿದೆ.

 ಎಚ್.ವಿ. ರಾಘವೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.