ಹಾಸನ

ತಹಸೀಲ್ದಾರ್ ಹತ್ಯೆಗೆ ಯತ್ನಿಸಿದವರ ಬಂಧಿಸಿ

Published On :

ಕ.ಪ್ರ. ವಾರ್ತೆ ಟಿ ಚನ್ನರಾಯಪಟ್ಟಣ ಟಿ ಜ. 31
ಅಕ್ರಮ ಜಲ್ಲಿ ಹಾಗೂ ಮರಳು ಸಾಗಿಸುವ ಲಾರಿಯವರಿಗೆ ಸಿಂಹ ಸ್ವಪ್ನವಾಗಿದ್ದ ತಹಸೀಲ್ದಾರ್ ಡಾ.ಎಚ್.ಎಲ್ ನಾಗರಾಜು ಅವರ ಜೀಪಿನ ಮೇಲೆ ಲಾರಿ ಹತ್ತಿಸಿ ಅವರನ್ನು ಹತ್ಯೆ ಮಾಡಲು ಹೋದವರನ್ನು ಬಂಧಿಸುವಂತೆ ಆಗ್ರಹಿಸಿ ಚನ್ನರಾಯಪಟ್ಟಣದ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಮೆರವಣಿಗೆ ನಡೆಸಿ ಮನವಿ ನೀಡಿದರು.
ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸರ್ಕಾರ ಭದ್ರತೆ ನೀಡಬೇಕು ಹಾಗೂ ಅಕ್ರಮ ತಡೆಯಲು ಹೋದ ಸಂದರ್ಭದಲ್ಲಿ ಅವರ ಜೀಪಿನ ಮೇಲೆ ಲಾರಿ ಹತ್ತಿಸಲು ಹೋದ ಲಾರಿ ಚಾಲಕರಿಗೆ ಕೆಲವರ ಬೆಂಬಲವಿದೆ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದರು.
ಸರ್ಕಾರ ನೌಕರರ ಸಂಘ ಕರೆದಿದ್ದ ಪ್ರತಿಭಟನಾ ಸಭೆಗೆ ತಾಲೂಕಿನ ಕನ್ನಡ ಪರ ಸಂಘಟನೆಗಳು, ರೈತ ಸಂಘ ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿ ಸರ್ಕಾರಿ ನೌಕರರ ಸಂಘದ ಬಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೆ.ಆರ್. ವೃತ್ತದಲ್ಲಿ ಮಾನವ ಸರಪಳಿ ಸೃಷ್ಠಿಸಿ ನಂತರದಲ್ಲಿ ತಾಲೂಕು ಕಚೇರಿಗೆ ತೆರಳಿ ಗ್ರೇಡ್ ಬಿ. ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ರೈತ ಸಂಘದ ಸಂಚಾಲಕ ದೊಡ್ಡೇರಿ ಶ್ರೀಕಂಠ ಮಾತನಾಡಿ, ಅಕ್ರಮವನ್ನು ತಡೆಯಲು ಮುಂದಾದ ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರ ಜೀಪಿಗೆ ಬೆಂಕಿ ಹಾಕಿ ಅವರ ಮೇಲೆ ಲಾರಿ ಹತ್ತಿಸಿ ಎಂದು ಹೇಳಿಕೆ ನೀಡಿದ್ದರಿಂದ ಪ್ರೇರೇಪಣೆಯಾಗಿ ಈ ಕೆಲಸವನ್ನು ಲಾರಿ ಚಾಲಕರು ಮಾಡಿದ್ದಾರೆ ಎಂದು ಪರೋಕ್ಷವಾಗಿ ಹಾಲಿ ಶಾಸಕರೊಬ್ಬರನ್ನು ಟೀಕಿಸಿದರು.
ಅಂಗರಕ್ಷಕರ ನಿಯೋಜನೆಗೆ ಒತ್ತಾಯ: ಈ ಬಗ್ಗೆ ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ ಸಾರ್ವಜನಿಕರು, ಜಿಲ್ಲೆಯಲ್ಲಿ ರೌಡಿ ಸಾಮ್ರಾಜ್ಯದ ಆಡಳಿತದ ಪರಮಾವದಿ ಕೊನೆಗಂಡಂತೆ ಕಾಣುತ್ತಿಲ್ಲ. ಇಂದಿಗೂ ಹಾಸನ ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳು ಕಾರ್ಯನಿರ್ವಹಿಸಲು ಕಷ್ಟಕರವಾಗುತ್ತಿದೆ. ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಡಾ. ಎಚ್.ಎಲ್. ನಾಗರಾಜು ಅವರಿಗೆ ಅಂಗರಕ್ಷಕರನ್ನು ಸರ್ಕಾರ ಕೂಡಲೇ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಆಗ್ರಹ: ಜಿಲ್ಲೆಯಲ್ಲಿ ಮರಳು ಹಾಗೂ ಜಲ್ಲಿಯನ್ನು ಸಾಗಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 27 ಪ್ರದೇಶಗಳನ್ನು ಗುರುತಿಸಿ, ಅಲ್ಲಿಂದ ಸಾಗಣೆ ಮಾಡಲು 314 ಲಾರಿಗಳಿಗೆ ಮಾತ್ರ ಅನುಮತಿ ನೀಡಿ ಜಿಲ್ಲೆಯೊಳಗೆ ಮಾತ್ರ ಸಾಗಣೆ ಮಾಡುವಂತೆ ಆದೇಶಿಸಿ ಅನುಮತಿ ನೀಡಲಾಗಿದೆ. ಆದರೆ, ರಾತ್ರಿ ಸಮಯದಲ್ಲಿ ಸಾವಿರಕ್ಕೂ ಹೆಚ್ಚು ಲಾರಿಗಳು ಬೆಂಗಳೂರು ಕಡೆಗೆ  ಮರಳು ಹಾಗೂ ಜಲ್ಲಿ ಸಾಗಿಸುತ್ತಿದ್ದಾರೆ. ಇದನ್ನು ತಡೆಯಲು ಸಂಬಂದಪಟ್ಟ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಒತ್ತಾಯ: ಜಿಲ್ಲೆಯಲ್ಲಿನ ಖನಿಜ ಸಂಪತ್ತನ್ನು ಲೂಟಿ ಹೊಡೆಯುತ್ತಿರುವದನ್ನು ತಡೆಯಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಡಾ.ಎಚ್. ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಪಡೆದ ಮರುದಿನವೇ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಹೋದವರ ಮೇಲೆ ಲಾರಿ ಹತ್ತಿಸುವಲ್ಲಿ ಮುಂದಾಗಿದ್ದಾರೆ. ಅವರಿಗೆ ಸೂಕ್ತ ಭತ್ರತೆ ನೀಡುವುದರ ಜತೆಗೆ ಅವರಿಗೆ ಮುಂಬಡ್ತಿ ದೊರೆತಿದ್ದು, ಅವರನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಂಡು ಅವರಿಗೆ ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್. ಲೋಕೇಶ್ ಮಾತನಾಡಿ, ಅಕ್ರಮವಾಗಿ ಸಾಗಿಸುತ್ತಿರುವ ಖನಿಜ ಸಂಪತ್ತನ್ನು ತಡೆಯುವ ಜವಾಬ್ದಾರಿ ಕೇವಲ ತಹಸೀಲ್ದಾರ್ ಅವರಿಗೆ ಮಾತ್ರವಿಲ್ಲ. ಎಲ್ಲಾ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದಾಗ ಮಾತ್ರ ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರಿಗೆ ಕಾರ್ಯ ನಿರ್ವಹಿಸಲು ಸುಲಭವಾಗುತ್ತದೆ.
ಭ್ರಷ್ಟತೆ ತಡೆಯಬೇಕು: ಹಾಸನದಿಂದ ಹೊರಟ ಒಂದು ಲಾರಿ ಮರಳು ಬೆಂಗಳೂರು ತಲುಪವಷ್ಟರಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಲಾರಿ ಚಾಲಕರಿಂದ ಕನಿಷ್ಠ 10 ಸಾವಿರ ರು. ಲಂಚ ಕೀಳುತ್ತಿದ್ದಾರೆ ಎಂಬುದು ಲಾರಿ ಮಾಲಿಕರಿಂದ ತಿಳಿದು ಬಂದಿದ್ದು, ಭ್ರಷ್ಠತೆಯನ್ನು ತಡೆಯುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮುಂದಾದಾಗ ಮಾತ್ರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವವರಿಗೆ ಉತ್ಸಾಹ ಬರುತ್ತದೆ ಎಂದು ತಿಳಿಸಿದರು.
ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಸಾವು ಇನ್ನೂ ಮಾಸುವ ಮುನ್ನವೇ ತಹಸೀಲ್ದಾರ್ ಅವರ ಮೇಲೆ ಮಾರಾಣಾಂತಿಕ ಹಲ್ಲೆಗೆ ಮುಂದಾಗಿರುವುದನ್ನು ಗಮನಿಸಿದರೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಾಗಿದೆ ಅವರಿಗೆ ಸೂಕ್ತ ರಕ್ಷಣೆ ನೀಡಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪರಿಸರ ಪ್ರೇಮಿ ಅಶೋಕ್, ಜಿಲ್ಲಾ ಬಿಜೆಪಿ ಮುಖಂಡ ಪಟೇಲ್ ಮಂಜುನಾಥ್, ಕರ್ನಾಟಕ ಸಮರಸೇನೆ ಜಿಲ್ಲಾಧ್ಯಕ್ಷ ಭರತ್‌ಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್‌ಕುಮಾರ್, ರೈತ ಸಂಘದ ಸತ್ತಿಗೌಡ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.