ಹಾಸನ

ನಮ್ ಹಳ್ಳಿಗೆ ಮದ್ಯದಂಗಡಿ ಬೇಡ ಸ್ವಾಮೀ...

Published On :

ಕ.ಪ್ರ.ವಾರ್ತೆ  ಹಾಸನ  ಜ. 31
ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಕೂಡಲೇ ಆಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುವಂತೆ ಆಗ್ರಹಿಸಿ ಸಕಲೇಶಪುರ ತಾಲೂಕಿನ ಯಡಕೆರೆ ಗ್ರಾಮಸ್ಥರು ಹಾಗೂ ನಾನಾ ಮಹಿಳಾ ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಆಕ್ರೋಶ: ಸಕಲೇಶಪುರ ತಾಲೂಕಿನ ಯಡಕೆರೆ ಗ್ರಾಮಸ್ಥರು ತೀರಾ ಬಡವರಾಗಿದ್ದು, ಹೇಮಾವತಿ ಜಲಾಶಯದಲ್ಲಿ ಜಮೀನುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು, ಹೆಚ್ಚಿನ ಭಾಗದಲ್ಲಿ ಕೂಲಿ ಕಾರ್ಮಿಕರೇ ಆಗಿದ್ದಾರೆ. ಕೂಲಿಯಿಂದ ಜೀವನ ನಡೆಸುವತ್ತಿದ್ದಾರೆ.
ಆದರೆ ಯಡಕೆರೆ ಗ್ರಾಮದಲ್ಲಿ ಲೈಸೆನ್ಸ್ ಇರುವ ಮದ್ಯದ ಅಂಗಡಿಯಾಗಲೀ, ಬ್ರಾಂದಿ ಅಂಗಡಿಯಾಗಲಿ ಇಲ್ಲ. ಆದರೆ ಯಡಕೆರೆ ಗ್ರಾಮದ ದಿನಸಿ ಅಂಗಡಿಗಳಲ್ಲಿ ಮತ್ತು ಖಾಲಿ ಮಳಿಗೆ ಇಟ್ಟುಕೊಂಡಿರುವ ಖಾಸಗಿಯವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರವಾನಗಿ ಇಲ್ಲ: ಅಂಗಡಿಗಳಲ್ಲಿ ಅಕ್ರಮವಾಗಿ ಬ್ರಾಂದಿ ಅಂಗಡಿ ನಡೆದಂತೆ ವ್ಯಾಪಾರ ಮಾಡಿ, ನಮ್ಮ ಗ್ರಾಮದ ಗಂಡಸರು ಕೂಲಿ ಮಾಡಿದ ಹಣ ಹೆಂಡಕ್ಕೆ ಸುರಿಯುವಂತಾಗಿದೆ. ಇದರಿಂದ ಗ್ರಾಮದ ಮಹಿಳೆಯರು ತೊಂದರೆ ಉಂಟಾಗಿದೆ.
ಗ್ರಾಮದ ಖಾಸಗಿ ಮದ್ಯದ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವ ಮೂಲಕ ಗ್ರಾಮಸ್ಥರಿಗೆ ತೊಂದರೆಯನ್ನು ನೀಡುತ್ತಿದ್ದಾರೆ. ಇಲ್ಲಿ ಮದ್ಯದ ಅಂಗಡಿಯನ್ನು ನಡೆಸಲು ಯಾವುದೇ ಪರವಾನಗಿ ಇಲ್ಲದಿದ್ದರೂ ಸಹ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಶಾಂತಿ ವಾತಾವರಣ: ಅಕ್ರಮ ಮದ್ಯದ ಅಂಗಡಿಯಿಂದಾಗಿ ಗ್ರಾಮಸ್ಥರು ನೆಮ್ಮದಿಯ ಜೀವನ ನಡೆಸುವುದು ಆಸಾಧ್ಯವಾಗಿದೆ. ಮದ್ಯದ ಅಂಗಡಿಯಿಂದಾಗಿ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡುಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಮದ ಗಂಡಸರು ಮದ್ಯದ ಅಂಗಡಿಯತ್ತ ಮುಖ ಮಾಡಿದ್ದಾರೆ.
ಇದರಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಅಲವತ್ತುಕೊಂಡರು.
ವಿರೋಧವಿದ್ದರೂ ಅಂಗಡಿ: ಕುಡಿತದಿಂದಾಗಿ ಸಾಕಷ್ಟು ಕುಟುಂಬಗಳು ಬೀದಿಗೆ ಬಿದ್ದಿವೆ.
ಇದರೊಂದಿಗೆ ಮತ್ತಷ್ಟು ಕುಟುಂಬಗಳು ಬೀದಿಗೆ ಬೀಳಲಿವೆ. ನೆಮ್ಮದಿಯ ಜೀವನ ನಡೆಸಲು ಕಡಿವಾಣ ಹಾಕಿದಂತಾಗಿದೆ.
ಗ್ರಾಮದ ಸುತ್ತುಮುತ್ತು ಪರವಾನಗಿ ಇರುವ ಮದ್ಯದ ಅಂಗಡಿಗಳು ಇಲ್ಲವಾದರೂ ಸಹ ಈಗ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮದ್ಯದ ಅಂಗಡಿಯನ್ನು ತೆರೆದು ಮದ್ಯ ಮಾರಾಟ ಮಾಡುತ್ತಿದ್ದಾರೆ.
ಗ್ರಾಮಸ್ಥರೇ ಮದ್ಯದ ಅಂಗಡಿ ಬೇಡ ಅಂತ ಹೇಳುತ್ತಿರುವಾಗ ಒತ್ತಾಯದಿಂದ ಇಲ್ಲಿ ಅಕ್ರಮವಾಗಿ ಅಂಗಡಿ ತೆರೆದು ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಯನ್ನು ಬಂದ್ ಮಾಡಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದೇವರಾಜ್, ವೆಂಕಟೇಶ್, ನಾಗರಾಜ್, ಅಪ್ಪಸ್ವಾಮಿಗೌಡ, ಅರ್ಜುನ್, ನಾಗರಾಜ್, ಶಶಿ, ಭಾಗ್ಯಲಕ್ಷ್ಮಿ, ಭಾರತಿ, ಜಯಲಕ್ಷ್ಮಿ, ಚಂದ್ರಮ್ಮ, ರಂಗಮ್ಮ, ಮೀನಾಕ್ಷಿ, ಸರೋಜ, ಲೀಲಾವತಿ, ಯಶೋದ, ವಿಮಲ, ಕಮಲಮ್ಮ, ಚಂದ್ರಕಲಾ, ತುಂಗಮ್ಮ, ಕಮಲಮ್ಮ, ದೇವಮ್ಮ, ಪಾರ್ವತಮ್ಮ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.