ಹಾಸನ

ಟಿಇಟಿ ಪ್ರಶ್ನೆ ಪತ್ರಿಕೆ ಬಹಿರಂಗ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಹಾಸನ: ಟಿಇಟಿ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮುನ್ನ ಬಹಿರಂಗಗೊಂಡಿರುವುದರ ವಿರುದ್ಧ ಕ್ರಮಕೈಗೊಳ್ಳುವಂತೆ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ. ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ರಾಜ್ಯ ಸರ್ಕಾರ ನೂತನವಾಗಿ ಆಯೋಜಿಸಿದ್ದ ಟಿಇಟಿ ಪರೀಕ್ಷೆ ಕಳೆದ ಜೂ.22ರಂದು ಮೊದಲ ಪರೀಕ್ಷೆ ನಡೆದಿದ್ದು, ಆ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಯಲಾದ ಪ್ರಕರಣ ಜಗಜಾಹೀರಾಗಿದೆ. ಪ್ರಶ್ನೆಪತ್ರಿಕೆ ಬಯಲಾಗಿರುವ ವಿಜಾರ ರಾಜ್ಯ ಸರ್ಕಾರಕ್ಕೆ ತಿಳಿದಿದ್ದರೂ ಕ್ರಮ ಕೈಗೊಳ್ಳದೆ ಅದೇ ಪತ್ರಿಕೆಯನ್ನು ಮುಂದುವರೆಸಿ ತನಗೂ ಇದಕ್ಕೂ ಸಂಬಂಧವಿಲ್ಲದಂತೆ ಕೈಕಟ್ಟಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಇಟಿ ಪ್ರಶ್ನೆ ಪತ್ರಿಕೆಯನ್ನು ಲಕ್ಷಾಂತರ ಅಭ್ಯರ್ಥಿಗಳು ಬರೆದಿದ್ದು, ಯಾರೋ ಮಾಡಿದ ದುಷ್ಕೃತ್ಯದಿಂದ ಎಲ್ಲಾ ಅಭ್ಯರ್ಥಿಗಳಿಗೆ ವಂಚನೆಯಾದಂತಾಗಿದೆ. ಈಗಾಗಲೇ ಪ್ರಶ್ನೆ ಪತ್ರಿಕೆ ಬಯಲಾದ ವಿಚಾರದ ವಿರುದ್ಧ ಸಾಕಷ್ಟು ಹೋರಾಟಗಳು ನಡೆದಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಮತ್ತು ಕ್ರಮ ಕೈಗೊಳ್ಳುವುದಾಗಿಯೂ ಹೇಳಿಲ್ಲ. ಇದರಿಂದ ಲಕ್ಷಾಂತರ ಅಭ್ಯರ್ಥಿಗಳಿಗೆ ಮೋಸವಾಗಿದೆ ಎಂದು ಆರೋಪಿಸಿದರು.
ಅಕ್ರಮ ಎಸಗಿರುವುದರಿಂದ ಪ್ರಾಮಾಣಿಕವಾಗಿ ಓದಿದ್ದ ಅಭ್ಯರ್ಥಿಗಳಿಗೆ ವಂಚನೆಯಾಗಿದೆ. ಸಾಕಷ್ಟು ಕನಸು ಹೊಂದಿರುವ ಅಭ್ಯರ್ಥಿಗಳಿಗೆ ನಿರಾಸೆ ಉಂಟಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರಶ್ನೆ ಪತ್ರಿಕೆ ಬಯಲಿನ ಪ್ರಕರಣವನ್ನು ಸರ್ಕಾರ  ಉದಾಸೀನ ತೋರುವುದು ಸರಿಯಲ್ಲ. ಪ್ರಾಮಾಣಿಕ ಹಾಗೂ ಅರ್ಹ ಅಭ್ಯರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಕ್ರಮದ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದರು.
ಟಿಇಟಿ ಪರೀಕ್ಷೆಯಲ್ಲಿ ಇಷ್ಟೆಲ್ಲ ಲೋಪದೋಷವಿರುವುದರಿಂದ ಈ ಪರೀಕ್ಷೆಯನ್ನು ಮರು ಪರೀಕ್ಷೆ ನಡೆಸಿ ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಲಕ್ಷ್ಮೀಕೇಶವ್, ಪ್ರದೀಪ್, ಸಿದ್ದೇಶ್, ವಿನಯ್, ಅರುಣ್, ಮಂಜುನಾಥ್, ಪ್ರವೀಣ್ಕುಮಾರ್, ಸಂತೋಷ್, ಚಂದ್ರು, ರಾಜಶೇಖರ್, ಕುಮಾರ್, ಕಿರಣ್, ನವೀನ್ಕುಮಾರ್, ಸಾಗರ್, ಪ್ರಕಾಶ್, ಮೂರ್ತಿ, ರಾಜು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.