ಒಂದೇ ಸ್ಥಳದಲ್ಲಿ ಎರಡು ಚರಂಡಿ!
ಅ.ರಾ.ಸುಬ್ಬರಾವ್
ಅರಕಲಗೂಡು: ತಾಲೂಕಿನ ರಾಮನಾಥಪುರ ಗ್ರಾಪಂ ವತಿಯಿಂದ ನಡೆಸಿರುವ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಇಲ್ಲಿನ ಅರಣ್ಯ ಇಲಾಖೆಗೆಯ ಟೋಲ್ಗೇಟ್ ಬಳಿಯಿಂದ ರಾಮೇಶ್ವರ ದೇವಾಲಯದ ಕಡೆ ತೆರಳುವ ರಸ್ತೆಗೆ ಲೋಕೋಪಯೋಗಿ ಇಲಾಖೆ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಟೆಂಡರ್ ಕರೆದು 55 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭವಾಗುವ ವಿಷಯ ತಿಳಿದ ನಂತರವೂ ಅದೇ ರಸ್ತೆಯಲ್ಲಿ ಸುಮಾರು 80 ಸಾವಿರ ವೆಚ್ಚ ಮಾಡಿ ಅವೈಜ್ಞಾನಿಕವಾಗಿ ಇಲ್ಲಿನ ಗ್ರಾಪಂ 30 ಮೀಟರ್ ಚರಂಡಿ ನಿರ್ಮಿಸಿದೆ. ಅತ್ಯಂತ ಕಳಪೆ ಕಾಮಗಾರಿ ಇದಾಗಿದೆ. ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಟೆಂಡರ್ ಆದ ನಂತರವೂ ಗ್ರಾಪಂ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಕಾರಣ ಏನೆಂಬುದು ಇನ್ನೂ ನಿಗೂಢವಾಗಿಯೇ ಇದೆ.
ಪ್ರಸ್ತುತ ಅದೇ ಸ್ಥಳದಲ್ಲಿ ಇಲ್ಲಿನ ಲೋಕೋಪಯೋಗಿ ಇಲಾಖೆಯೂ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಆರಂಭಿಸಿದೆ. ಆದರೂ ಇತ್ತೀಚೆಗಷ್ಟೇ ಗ್ರಾಪಂನಿಂದ ಕಾಮಗಾರಿ ನಡೆದಿರುವ ಸ್ಥಳದಲ್ಲಿ ಚರಂಡಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂಬುದು ಲೋಕೋಪಯೋಗಿ ಅಧಿಕಾರಿಗಳ ನಿಲುವು. ಆದರೆ ಗ್ರಾಪಂ ಮಾಡಿರುವ ಚರಂಡಿ ಕಾಮಗಾರಿ ಮತ್ತು ಲೋಕೋಪಯೋಗಿ ಇಲಾಖೆಯ ಚರಂಡಿ ಕಾಮಗಾರಿಗಳ ನಡುವೆ ಹೊಂದಾಣಿಕೆ ಆಗದೇ ಚರಂಡಿಯಲ್ಲಿ ನೀರು ಹರಿಯದೇ ನಿಲ್ಲುತ್ತಿದೆ. ಇದರಿಂದ ಮುಂದೆಯೂ ಗ್ರಾಮಸ್ಥರಿಗೆ ತೊಂದರೆ ಆಗುವುದರಲ್ಲಿ ಸಂದೇಹವಿಲ್ಲ.
ಈ ಎರಡೂ ಇಲಾಖೆಗಳ ಅವೈಜ್ಞಾನಿಕ ಕಾಮಗಾರಿ ಸಾರ್ವಜನಿಕರಿಗೆ ಮತ್ತು ಆ ಪ್ರದೇಶದ ಜನರಿಗೆ ಅನುಕೂಲ ಆಗುವುದಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. 22 ದಿನಗಳಿಂದ ಚರಂಡಿಯಲ್ಲಿ ನೀರು ನಿಂತಿದ್ದು, ಸುತ್ತಲು ಮನೆಗಳ ಜನ ಟೈಫಾಯಿಡ್ನಂತಹ ಜ್ವರದಿಂದ ಬಳಲುತ್ತಿದ್ದಾರೆ. ಒಂದೇ ಮನೆಯಲ್ಲಿ ಐದು ಜನ ಜ್ವರದ ಬಾಧೆಗೆ ಸಿಲುಕಿದ್ದಾರೆ.
ಬಾಗಿಲು ತೆರೆಯದ ಕ್ಷೌರದ ಅಂಗಡಿ: ಬೆಳಗ್ಗೆ ದುಡಿದು ಮಧ್ಯಾಹ್ನದ ಅನ್ನ ಕಂಡುಕೊಳ್ಳುತ್ತಿದ್ದ ಇಲ್ಲಿನ ಕ್ಷೌರದ ಅಂಗಡಿಯ ಮಾಲೀಕನೊಬ್ಬ 22 ದಿನಗಳಿಂದ ಅಂಗಡಿ ಬಾಗಿಲು ತೆರೆದಿಲ್ಲ. ಈ ಅಂಗಡಿಯ ಮುಂದೆ ಚರಂಡಿ ಕಾಮಗಾರಿ ಹೆಸರಿನಲ್ಲಿ ಗುಂಡಿ ತೋಡಿರುವ ಗುತ್ತಿಗೆದಾರರು ಅಂಗಡಿಗೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಈ ಗುಂಡಿ ತುಂಬಾ ನೀರು ತುಂಬಿರುವುದರಿಂದ ಜನರೂ ಅಲ್ಲಿಗೆ ತೆರಳಲು ಸಾಧ್ಯವಿಲ್ಲ. ಕಾಲುವೆ ದಾಟಿ ಹೋಗುವುದೇ ದುಸ್ಥರವಾಗಿದೆ. ಇದೇ ಪರಿಸ್ಥಿತಿ ಗ್ರಾಮದ ವಾಸದ ಮನೆಗಳ ಮುಂದೆಯೂ ಆಗಿದ್ದು, ಈ ವಾಸದ ಮನೆಗಳ ಸದಸ್ಯರ ಪಾಡು ನಿಜಕ್ಕೂ ನರಕ ಸದೃಶವಾಗಿದೆ.
ಪಿಡಿಒ ವಿರುದ್ಧ ಆಕ್ರೋಶ: ಈ ಎಲ್ಲಾ ಅವಾಂತರಗಳಿಗೆ ಇಲ್ಲಿನ ಗ್ರಾಪಂ ಪಿಡಿಒ ನಟರಾಜ್ ಅವರೇ ಕಾರಣ ಎಂಬುದು ಇಲ್ಲಿನ ಗ್ರಾಮಸ್ಥರ ಆರೋಪ. ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿದ್ದೇ ಅಲ್ಲದೆ ಲೋಕೋಪಯೋಗಿ ಇಲಾಖೆ ಕಾಮಗಾರಿ ನಡೆಯುವ ವಿಷಯ ತಿಳಿದಿದ್ದರೂ ಕಾಮಗಾರಿ ಮಾಡಿಸಿ ಹೊಸ ಅವಾಂತರಗಳಿಗೆ ಕಾರಣರಾಗಿದ್ದಾರೆ ಎಂಬುದು ಆರೋಪ. ಕಾಮಗಾರಿ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕ ಅನುಕೂಲ ಕಲ್ಪಿಸದಿದ್ದಲ್ಲಿ ತಾಪಂ ಮತ್ತು ಜಿಪಂ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

