ಹಾಸನ

ಹಾಸನ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅಕ್ರಮ ವಿಧಾನಸಭೆಯಲ್ಲಿ ಚರ್ಚೆ

Published On :

ವಿಧಾನಸಭೆ: ಅನೇಕ ಜಿಲ್ಲೆಗಳಲ್ಲಿ ಅಕ್ರಮ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಹಾಸನ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಕುರಿತು ಸದನದಲ್ಲಿ ಗಮನಾರ್ಹ ಚರ್ಚೆ ನಡೆಯಿತು.
ಜೆಡಿಎಸ್ನ ಎಚ್.ಕೆ. ಕುಮಾರಸ್ವಾಮಿ ಆಯುಕ್ತ ಕೃಷ್ಣಮೂರ್ತಿ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದಂತೆ ವಿಷಯ ಗಂಭೀರ ಸ್ವರೂಪಕ್ಕೆ ತಿರುಗಿತು. ಆಗ ಕೃಷ್ಣ ಮೂರ್ತಿ ಸೇವೆ ಸಲ್ಲಿಸಿದ ವಿವಿಧ ಜಿಲ್ಲೆಗಳ ಅನೇಕ ಸದಸ್ಯರು ಕೃಷ್ಣಮೂರ್ತಿ ವಿರುದ್ಧ ಆರೋಪಗಳ ಸುರಿಮಳೆ ಗೈದರು. ಮೊದಲಿಗೆ ಕುಮಾರಸ್ವಾಮಿ ಮಾತನಾಡಿ, ಕೃಷ್ಣಮೂರ್ತಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಮೀಸಲಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಒಂದು ನಾಯಿ ಶಸ್ತ್ರ ಚಿಕಿತ್ಸೆಗೆ ನಿಗದಿತ 550 ಬದಲು 953 ವೆಚ್ಚ ಮಾಡಿದ್ದಾರೆ. ಇಂಥ ಚಿಕಿತ್ಸೆಯನ್ನು 2000 ನಾಯಿಗಳಿಗೆ ನಡೆಸಿ 6000 ನಾಯಿಗಳಿಗೆ ವೆಚ್ಚ ಮಾಡಿರುವುದಾಗಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು. ಇದಕ್ಕೆ ಜೆಡಿಎಸ್ನ ಎಚ್.ಡಿ.ರೇವಣ್ಣ ದನಿಗೂಡಿಸಿ, ದಾಖಲೆಗಳನ್ನು ಪ್ರದರ್ಶಿಸಿದರು.
ಬಿಜೆಪಿಯ ಸಿಟಿ ರವಿ ಮಾತನಾಡಿ, ಕೃಷ್ಣಮೂರ್ತಿ ನಮ್ಮ ಜಿಲ್ಲೆಯಲ್ಲಿ ಭಾರೀ ಅಕ್ರಮ ನಡೆಸಿದ್ದಾರೆ. ಸುಮಾರು 5ಕೋಟಿ ದುರ್ಬಳಕೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಆದ್ದರಿಂದ ಇವರ ಬಗ್ಗೆ ಕ್ರಮಕೈಗೊಳ್ಳಿ ಎಂದರು. ನಂತರ ಜೆಡಿಎಸ್ನ ಚಲುವರಾಯಸ್ವಾಮಿ, ಇವರು ಮಂಡ್ಯದಲ್ಲೂ ಸಾಕಷ್ಟು ಅಕ್ರಮ ಎಸಗಿದ್ದಾರೆ. ಇದೇರೀತಿ ಪ್ರತಿಪಕ್ಷದ ಇನ್ನೂ ಅನೇಕ ಸದಸ್ಯರು ಕೃಷ್ಣಮೂರ್ತಿ ಚಾಮರಾಜನಗರದಲ್ಲಿ ಟೆಂಡರ್ ಅಕ್ರಮ ನಡೆಸಿರುವುದನ್ನು ವಿವರಿಸಿದರು. ಕೂಡಲೇ ಕೃಷ್ಣಮೂರ್ತಿ ಅಮಾನತುಗೊಳಿಸಬೇಕು. ಕನಿಷ್ಟ ವರ್ಗಾವಣೆಯನ್ನಾದರೂ ಮಾಡಬೇಕೆಂದು ಆಗ್ರಹಿಸಿದರು. ಇದೆಲ್ಲವನ್ನೂ ಆಲಿಸಿದ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಕೃಷ್ಣಮೂರ್ತಿ ವಿರುದ್ಧ ಆರೋಪಗಳು ಇರುವುದು ನಿಜ. ಆದರೆ ತನಿಖಾ ವರದಿ ಇನ್ನೂ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ತಕ್ಷಣ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.