ಹಾಸನ

ವಿದ್ಯಾರ್ಥಿನಿಯರ ಭದ್ರತೆಗೆ ಒತ್ತಾಯ

Published On :

ಕನ್ನಡಪ್ರಭ ವಾರ್ತೆ, ಹಾಸನ, ಜು.15
ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಹಾಗೂ ವಿದ್ಯಾರ್ಥಿನಿಯರ ಭದ್ರತೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯಕರ್ತರು ಮಂಗಳವಾರ ಪ್ರದರ್ಶನ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರದರ್ಶನ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಗುಣಮಟ್ಟ: ರಾಷ್ಟ್ರದ ಪ್ರಗತಿಗೆ ಕಾರಣವಾಗುವ ಪ್ರಮುಖ ವಿಷಯಗಳಲ್ಲಿ ಶಿಕ್ಷಣವು ಒಂದಾಗಿದೆ. ನಮ್ಮ ದೇಶದ ಜನಸಂಖ್ಯೆಯ ಬಹುಸಂಖ್ಯಾತ ವಿಭಾಗವು ಯುವ ಜನಾಂಗವೇ ಆಗಿರುವಾಗ ಇದನ್ನು ಸರಿಯಾಗಿ ಬಳಕೆ ಮಾಡದೆ ನಮ್ಮ ದೇಶದಲ್ಲಿ ಒಂದು ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ಶಿಕ್ಷಣದಲ್ಲಿ ಗುಣಮಟ್ಟ, ಶಿಕ್ಷಣದ ವಿಸ್ತರಣೆ, ಶಿಕ್ಷಣದಲ್ಲಿ ಸಮಾನತೆಯಂತಹ ವಿಷಯಕ್ಕೆ ಗಮನ ನೀಡಬೇಕಾಗಿದೆ ಎಂದರು. ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಸರ್ಕಾರಗಳು ಶಿಕ್ಷಣಕ್ಕೆ ಯಾವುದೇ ಮಹತ್ವವನ್ನು ನೀಡಿಲ್ಲ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿನ ಬಹುತೇಕ ಶಾಲಾ-ಕಾಲೇಜುಗಳಲ್ಲಿ ಕನಿಷ್ಟ ಮೂಲಭೂತ ಸೌಲಭ್ಯಗಳು ಇಲ್ಲದೆ ನರಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ಯೂಷನ್ ಹಾವಳಿ: ವಿಜ್ಞಾನ ವಿಷಯ ಕಲಿಕೆಗೆ ಪ್ರಯೋಗಾಲಯಗಳೇ ಇಲ್ಲದ ಪರಿಣಾಮ ವಿದ್ಯಾರ್ಥಿಗಳ ಕಲಿಕಾಸಕ್ತಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಇಂದು ಟ್ಯೂಷನ್ ಹಾವಳಿ ಎಗ್ಗಿಲ್ಲದಂತೆ ನಡೆಯುತ್ತಿದೆ. ಖಾಸಗಿ ಕಾಲೇಜುಗಳೇ ನೇರವಾಗಿ ಅವರದೇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೆಸರಿನಲ್ಲಿ ಪ್ರತಿ ವಿಷಯವಾರು ಸುಮಾರು 3 ಸಾವಿರ ರು.ನಿಂದ 4 ಸಾವಿರ ರು. ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.
ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಭಾಗವಾಗಿ ಕುಂದಾಪುರದ ಬೈಂದೂರು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಇಂತಹ ಘಟನೆಗಳ ವಿರುದ್ಧ ಕೈಗೊಳ್ಳದಿರುವುದು ಖಂಡನೀಯ  ಎಂದರು.
ಪ್ರದರ್ಶನದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಎಚ್.ಇ. ಅನ್ಷಾದ್, ಕಾರ್ಯದರ್ಶಿ ಎಂ.ಜಿ. ಪ್ರದೀಪ್ ಕುಮಾರ್, ಸಿ.ಎಸ್. ಮಹೇಶ್, ನುಸ್ರತ್ ಕುನಿಗಹಳ್ಳಿ, ಎನ್.ಡಿ. ಧನಲಕ್ಷ್ಮಿ, ಬಿ.ಎ. ಸುಮ, ಲಾವಣ್ಯ, ಆರ್.ಕೆ. ಸಿತಾರ, ಶಾರುಖ್ ಖಾನ್, ಎಚ್.ಐ. ಅಸ್ಲಂ ಹಾಗೂ ಇತರರು ಇದ್ದರು.
ಬೇಡಿಕೆಗಳು
ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಟ್ಯೂಷನ್ ಹಾವಳಿ ನಿಯಂತ್ರಿಸುವ ಕಾನೂನು ಜಾರಿಯಾಗಬೇಕು.
ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ
ತಡೆಗಟ್ಟಲು ಕ್ರಮ ಕೈಗೊಳ್ಳಬೇಕು
ಕುಂದಾಪುರದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು.
ಸ್ವಂತ ಕಟ್ಟಡಗಳಿಲ್ಲದ ಶಾಲಾ-ಕಾಲೇಜುಗಳಿಗೆ ತಕ್ಷಣವೇ ಸ್ವಂತ ಕಟ್ಟಡದ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು.
ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಮತ್ತು ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ಕಲ್ಪಿಸಬೇಕು.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಟ್ಯೂಷನ್ ದಂಧೆಗೆ ಕಡಿವಾಣ ಹಾಕಲು ರೆಗ್ಯೂಲೇಟಿಂಗ್ ಪ್ರಾಧಿಕಾರದ ರಚನೆಯಾಗಬೇಕು.
ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ಪಾಸ್ ಜೂನ್‌ನಲ್ಲಿ ವಿತರಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.