ಹಾಸನ

ವಿದ್ಯಾರ್ಥಿಗೆ ಸಾಧಿಸುವ ಛಲ ಮುಖ್ಯ: ರುದ್ರಮುನಿ ಸ್ವಾಮೀಜಿ ಅಭಿಪ್ರಾಯ

Published On :

ಅರಸೀಕೆರೆ: ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಮುನ್ನಡೆದು ಸಾಧನೆಯ ಹಾದಿಯನ್ನು ಮುನ್ನಡೆದಾಗ ಜಗತ್ತು ಅವರತ್ತ ತಿರುಗಿ ನೋಡಲು ಸಾಧ್ಯವಾಗುತ್ತದೆ ಎಂದು ಮಾಡಾಳು ಮಠದ ಶ್ರೀ ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಅಭಿಪ್ರಾಯಪಟ್ಟರು.  ವೀರಶೈವ ಕ್ಷೇಮಾಭಿವೃದಿಧಿ ನೌಕರರ ಸಂಘದ ವತಿಯಿಂದ ತಾಲೂಕಿನ ಕಣಕಟ್ಟೆ ಹೋಬಳಿ ಹೊಳಲ್ಕೆರೆ ಶ್ರೀ ಪ್ರಸನ್ನ ರಾಮೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವೀರಶೈವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2013-14ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾಧನೆ ಮಾಡಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಾವೆಲ್ಲಾರೂ ಪ್ರತಿಕ್ಷಣ ಸವಾಲು ಎದುರಿಸಬೇಕಾಗುತ್ತದೆ. ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ನಿರಂತರ ಪ್ರಯತ್ನದಿಂದ ಮಹತ್ತರವಾದುದನ್ನು ಸಾಧಿಸಿ ಪದೇ ಪದೇ ಪುರಸ್ಕಾರ ಪಡೆಯುವಂತರಾಗಬೇಕು ಎಂದು ಅವರು ವಿದ್ಯಾಥಿಗಳಿಗೆ ಕಿವಿಮಾತು ಹೇಳಿದರು.
 ಅಧ್ಯಕ್ಷತೆ ವಹಿಸಿದ್ದ ವೀರಶೈವ ಕ್ಷೇಮಾಭಿವೃದ್ಧಿ ನೌಕರರ ಸಂಘದ ಅಧ್ಯಕ್ಷ ರಾ.ಮ. ರಾಜಪ್ಪ ಮಾತನಾಡಿ, ಪ್ರತಿಭಾ ಪುರಸ್ಕಾರ ಮಕ್ಕಳಿಗೆ ಪ್ರೋತ್ಸಾಹವಾಗಬೇಕು. ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿ ಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು.
ಪುರಸ್ಕಾರ: ನಿವೃತ್ತ ಶಿಕ್ಷಕ ನಿತ್ಯಾನಂದ ಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಿ.ಎಂ.ಕುರ್ಕೆ ಕಲ್ಪತರು ಎಜುಕೇಶನ್ ಎಂಟರ್ ಪ್ರೈಸಸ್ ಮಾಲೀಕರಾದ ನಂದಿನಿ ಡಿ.ಪಿ ವಿಶ್ವನಾಥ್ ಪ್ರತಿಭಾ ಪುರಸ್ಕಾರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.       
ಬಾಲಕಿ ಮೇಲೆ ಅತ್ಯಾಚಾರ ಒಬ್ಬ ಆರೋಪಿ ಬಂಧನ
ಅರಕಲಗೂಡು: ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣರಾಗಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಯೋಗೇಶ್‌ನನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ.
 ತಾಲೂಕಿನ ವಿಜಾಪುರ ಕಾಲೋನಿಯ 17 ವರ್ಷದ  ಯುವತಿಯ ಮೇಲೆ ಆರೋಪಿಗಳಾದ ರಮೇಶ ಮತ್ತು ಯೋಗೇಶ ಎಂಬುವವರು ಪ್ರತ್ಯೇಕ ಸಂದರ್ಭಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ತೆರಳಿ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಲಾಗಿದೆ.
ದೂರು: ಈ ವಿಷಯ ತಂದೆ-ತಾಯಿಯರಿಗೆ ತಿಳಿದಿದ್ದರೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿರಲಿಲ್ಲ. ಆದರೆ ಯುವತಿ 7 ತಿಂಗಳು ಗರ್ಭಿಣಿಯಾದ ನಂತರ ಎಚ್ಚೆತ್ತ ಪೊಷಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತೆರಳಿ ದೂರು ನೀಡಿದ್ದರು.
 ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮಹಿಳಾ ಸಹಾಯವಾಣಿಯಿಂದ ಬಂದ ಪತ್ರದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಅಪ್ರಾಪ್ತ ಗರ್ಭಿಣಿಯನ್ನು ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೇ ವೇಳೆ ಆರೋಪಿ ಯೋಗೇಶನನ್ನು ಬಂಧಿಸಿರುವ ಪೊಲೀಸರು ಮತ್ತೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆಸ್ಪತ್ರೆಗೆ ದಾಖಲು: ಅರಕಲಗೂಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅಪ್ರಾಪ್ತ ಗರ್ಭಿಣಿಯನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ತೀವ್ರ ನಿಶ್ಯಕ್ತಳಾಗಿದ್ದಾಳೆ ಎಂದು ಜಿಲ್ಲಾಸ್ಪತ್ರೆ ಮೂಲಗಳು ತಿಳಿಸಿವೆ. ಈ ಮಧ್ಯೆ ಆಕೆ ರಕ್ತದೊತ್ತಡ ಸಮಸ್ಯೆಯನ್ನೂ ಎದುರಿಸುತ್ತಿದ್ದಾಳೆ ಎನ್ನಲಾಗಿದೆ.
ಶಾಲೆ ಉಗ್ರಾಣದ ಬೀಗಮುದ್ರೆ ತೆರುವು
ಅರಕಲಗೂಡು: ಪಟ್ಟಣದ ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಇಲಾಖೆಗೆ ಸೇರಿದ ಮುರಾರ್ಜಿ ಶಾಲೆಯ ಉಗ್ರಾಣಕ್ಕೆ ಶನಿವಾರ ಹಾಕಲಾಗಿದ್ದ ಬೀಗಮುದ್ರೆಯನ್ನು ಭಾನುವಾರ ತೆರವುಗೊಳಿಸಲಾಯಿತು.  ಶನಿವಾರ ಬೆಳಿಗ್ಗೆ ತಾಲೂಕು ಪಂಚಾಯಿತಿ ಅಧ್ಯಕ್ಷ ನರಸೇಗೌಡ, ಮಾಜಿ ಅಧ್ಯಕ್ಷ ಸಂತೋಷ್ ಗೌಡ ಮತ್ತು ಸದಸ್ಯ ದೇವರಾಜೇಗೌಡ ಇವರುಗಳು ಭೇಟಿ ನೀಡಿದ್ದ ವೇಳೆ ಅಲ್ಲಿಯ ಪ್ರಾಚಾರ್ಯರಾಗಲಿ, ವಾರ್ಡನ್ ಆಗಲಿ ಇಲ್ಲದಿರುವುದನ್ನು ಕಂಡು ಅಸಮಾಧಾನಗೊಂಡು, ತಹಸೀಲ್ದಾರ್ ಮೋಹನ್ ಕುಮಾರ್ ಸಮ್ಮುಖದಲ್ಲಿ ಶಾಲೆಯ ಉಗ್ರಾಣಕ್ಕೆ ಬೀಗ ಹಾಕಿಸಿದ್ದರು.
ಬೀಗಮುದ್ರೆ ತೆರವು: ಭಾನುವಾರ ಸಂಬಂಧಪಟ್ಟ ಅಲ್ಲಿನ ಪ್ರಾಚಾರ್ಯರಾದ ರುದ್ರಪ್ಪ ಮತ್ತು ವಾರ್ಡನ್ ರಾಮಚಂದ್ರ ಅವರುಗಳು ಬಂದಿದ್ದರಿಂದ ಉಗ್ರಾಣಕ್ಕೆ ತೆರಳಿದ ತಹಸೀಲ್ದಾರ್ ಅವರು ತಾಲೂಕು ಪಂಚಾಯಿತಿ ಅಧ್ಯಕ್ಷ ನರಸೇಗೌಡರ ಸಮ್ಮುಖದಲ್ಲಿ ಬೀಗಮುದ್ರೆ ತೆರವುಗೊಳಿಸಿದರು. ಇದೇ ವೇಳೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವಂತೆ ಸೂಚಿಸಿದರು.  ಅನ್ನಭಾಗ್ಯ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ ಅವರು ಶಾಲೆಗೆ ಭೇಟಿ ನೀಡಿದ್ದರು. ಪತ್ರಕರ್ತರೊಂದಿಗೆ ಮಾತನಾಡಿದ ಅಧ್ಯಕ್ಷರು ಕರ್ತವ್ಯ ಮರೆತ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡುವಂತೆ ಕಾರ್ಯನಿರ್ವಾಹಣ ಅಧಿಕಾರಿಗೆ ಸೂಚಿಸುವುದಾಗಿ ತಿಳಿಸಿದರು.
ನುಗ್ಗೇಹಳ್ಳಿ ಪ್ರವಾಸಿ ತಾಣವಾಗಲಿ
ಲಕ್ಷ್ಮೀನರಸಿಂಹಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಿಂದ ಮನವಿ
ಕನ್ನಡಪ್ರಭ ವಾರ್ತೆ ,  ನುಗ್ಗೇಹಳ್ಳಿ ,  ಜು.20
ಇಲ್ಲಿಯ ಇತಿಹಾಸ ಪ್ರಸಿದ್ದ ಹೊಯ್ಸಳರ ಕಾಲದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸುತ್ತ ಪಾರ್ಕ್ ನಿರ್ಮಿಸಿ ಪ್ರವಾಸಿ ತಾಣ ಮಾಡಿ ಬೆಂಗಳೂರಿನಿಂದ ಇಲ್ಲಿಗೆ ಬಂದು ಹೋಗಲು ಬಸ್ ಸೌಕರ್ಯ ಕಲ್ಪಿಸುವಂತೆ ಲಕ್ಷ್ಮೀನರಸಿಂಹಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎನ್. ಎಸ್ .ರಮಾಕಾಂತ್ ಅವರು ಶಾಸಕರಿಗೆ ಮನವಿ ಮಾಡಿದರು.
ಅವರು ನುಗ್ಗೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ  ಸಾತ್ ಸೆಂಟರ್ ಮತ್ತು ಕಾಲೇಜಿಗೆ ವಿಜ್ಞಾನ  ಪ್ರಯೋಗಾಲಯ ವಿದ್ಯಾರ್ಥಿಗಳ ಸಂಘ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಸಾವೆಯಿಂದ ದೇವಾಲಯಕ್ಕೆ  ಮಾದರಿ ರಸ್ತೆ ಮಾಡಿಸಬೇಕು ಬಸ್ ನಿಲ್ದಾಣ ಪಕ್ಕ ಇರುವ ಹಳೆಯ ಕೃಷಿ ಪತ್ತಿನ ಕಟ್ಟಡ ತೆರೆವು ಮಾಡಿಸಿ ಮಾದರಿ ಬಸ್ ನಿಲ್ದಾಣ ಮಾಡಬೇಕು.
ಪ್ರಯೋಗಾಲಯಕ್ಕೆ ಕೊಡುಗೆ: ಟ್ರಸ್ಟ್‌ವತಿಯಿಂದ ಪ್ರೌಢಶಾಲೆ ಕಾಲೇಜಿಗೆ 1.80 ಲಕ್ಷ ರು. ವೆಚ್ಚದಲ್ಲಿ ಪ್ರಯೋಗಾಲಯದ ವಸ್ತುಗಳನ್ನು ಟ್ರಸ್ಟ್ ವತಿಯಿಂದ ಕೊಡುಗೆ ನೀಡಿದೆ. ಸಾತ್ ಸೆಂಟರ್ ನೋಡಿಕೊಳ್ಳುವವರಿಗೆ ಪ್ರತಿ ವರ್ಷ 1 ಲಕ್ಷದಂತೆ 5 ವರ್ಷ 5 ಲಕ್ಷ ರು. ನೀಡುತ್ತೇವೆ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿ ಮಾತಾನಾಡಿ, 6 ತಿಂಗಳಲ್ಲಿ ದೇವಾಲಯಕ್ಕೆ ಬರುವ ರಸ್ತೆ ನಾಮಫಲಕ ಹಾಕಿಸಿ ದೇವಾಲಯದ ಸುತ್ತ ಗಿಡ ನಡಿಸಿ ಬಸ್ ಸೌಲಭ್ಯ ಕಲ್ಪಿಸುವ ಬರವಸೆ ನೀಡಿದರು. ಸಮಾರಂದಲ್ಲಿ ಪ್ರಾಂಶುಪಾಲ ಪಿ ರಮೇಶ್, ಜಿಪಂ ಸದಸ್ಯ ಎಂ.ಎ ರಂಗಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ತಾಪಂ ಅಧ್ಯಕ್ಷೆ ಮಂಜುಳಾರಾಜು, ಕೆಂಪನಂಜೇಗೌಡ, ಬಿ.ಎಚ್. ಶಿವಣ್ಣ, ಟ್ರಸ್ಟ್ ಕಾರ್ಯದರ್ಸಿ ಗಿರಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ ಪಾಂಡು, ಬಿ.ಎಸ್. ಕೃಷ್ಣ, ಸಿ.ಬಿ ಶಂಕರ್, ಲಕ್ಷ್ಮಣ್, ಗೋವಿಂದರಾಜು  ಇದ್ದರು.
ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರ ಪ್ರೇರಣೆ ಅಗತ್ಯ
ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ ಸತೀಶ್‌ರಾವ್ ಅಭಿಮತ
ಹೊಳೆನರಸೀಪುರ: ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಿದರೆ ಯಾವುದೇ ವಿದ್ಯಾರ್ಥಿಯೂ ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದು ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಸತೀಶ್ ರಾವ್ ಹೇಳಿದರು.
ತಾಲೂಕಿನ ದೊಡ್ಡಕಾಡನೂರಿನಲ್ಲಿರುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಅವರು, ತಾವು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೂ ಶಿಕ್ಷಕರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದರು.
ಗುರುಶಿಷ್ಯ ಪರಂಪರೆ: ಈ ಸಂದರ್ಭದಲ್ಲಿ ಹಾಜರಿದ್ದ ಅಮೇರಿಕಾದಲ್ಲಿ ತೆರಿಗೆ ಸಲಹಾಗಾರರಾಗಿ ಕೆಲಸ ನಿರ್ವಹಿಸುತ್ತಿರುವ ಡಾ.ನಾಗವೇಣಿ ಮಾತನಾಡಿ, ಭಾರತೀಯ ಶಿಕ್ಷಣ ಪದ್ಧತಿಯು ಜಗತ್ತಿನ ಅತ್ಯುತ್ತಮ ಶಿಕ್ಷಣ ಪದ್ಧತಿಯಾಗಿದ್ದು ಇಲ್ಲಿನ ಗುರುಶಿಷ್ಯ ಪರಂಪರೆ ಎಲ್ಲರಿಗೂ ಮಾದರಿಯಾಗಿದೆ. ಶ್ರದ್ಧೆಯಿಂದ ಪ್ರಯತ್ನಿಸಿದರೆ ಎಲ್ಲವನ್ನೂ ಸಾಧಿಸಬಹುದು ಎಂದು ತಿಳಿಸಿದರು.
ಡಾ. ಸುಧಾಮಣಿ  ಮಾತನಾಡಿ, ಜೆಎಸ್‌ಎಸ್ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸುತ್ತಾ, ಸಮಾಜದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ನೀಡುವಲ್ಲಿ ಈ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ನುಡಿದರು.
ದೇಶಭಕ್ತಿ ಬಿಡಬಾರದು: ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸಾಮಾನ್ಯ ಶಿಕ್ಷಣ ವಿಭಾಗ ಉಪ-ನಿರ್ದೇಶಕ ಹೆಚ್.ವಿ.ಶೇಷಗಿರಿರಾವ್ ಮಾತನಾಡಿ,   ಭಾರತೀಯರಾದ ನಾವು ಜೀವನಕ್ಕಾಗಿ ಹೊರ ದೇಶಗಳಿಗೆ ಹೋದರೂ ನಮ್ಮತನ, ದೇಶಭಕ್ತಿ ಬಿಡಬಾರದು ಮತ್ತು ನಮ್ಮ ಜನ್ಮ ಭೂಮಿಯ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಹೊಂದಬೇಕು ಎಂದರು.  ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.
3ನೇ ಭಾಷೆಯಾಗಿ ತುಳು ಪರಿಗಣಿಸಲಿ: ಮುಲ್ಕಿ
ವಿಶ್ವ ತುಳುವರ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಒತ್ತಾಯ
ಸಕಲೇಶಪುರ: ರಾಜ್ಯದ ಮೂರನೇ ಭಾಷೆಯನ್ನಾಗಿ ತುಳು ಭಾಷೆಯನ್ನು ಪರಿಗಣಿಸ ಬೇಕು ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪಠ್ಯ ಪುಸ್ತಕದಲ್ಲಿ ಅಧ್ಯಯನ ವಿಷಯವಾಗಿಸಬೇಕು ಎಂದು ಅಖಿಲ ಭಾರತ ತುಳು ಒಕ್ಕೂಟ ಕೇಂದ್ರ ಸಮಿತಿಯ ಚಂದ್ರಶೇಖರ್ ಸುವರ್ಣ ಮುಲ್ಕಿ ಹೇಳಿದರು.
ಪಟ್ಟಣದಲ್ಲಿ ನಡೆದ ವಿಶ್ವ ತುಳುವರ ಹಬ್ಬ 2114 ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮ ಬಿತ್ತರವಾಗುತ್ತಿದೆ ಇದು ಸಂಘಟನೆಯ ಪರಿಶ್ರಮ ಎಂದು ಹೇಳಿದರು.
ವಿಶ್ವ  ತುಳುವರ ಹಬ್ಬ 2114 ಕಾರ್ಯಕ್ರಮ ನವಂಬರ್‌ನಲ್ಲಿ ನಡೆಯಲಿದೆ. ಈ  ಭಾಗದಲ್ಲಿ ಸುಮಾರು 40 ಸಾವಿರ ಜನರು ತುಳು ಬಾಷೆಯನ್ನು ಮಾತನಾಡುತ್ತಾರೆ. ಈ ಬಾಷೆ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಎಲ್ಲರೂ ಬಾಗವಹಿಸಿ ಕಾರ್ಯಕ್ರಮ ವನ್ನು ಯಶ್ವಸ್ಸಿಗೊಳಿಸ ಬೇಕು ಎಂದು ಹೇಳಿದರು. ಭಾಸ್ಕರ್ ಶೆಟ್ಟಿ, ಸೀನಪ್ಪ ಆಳ್ವ, ಚನ್ನವೇಣಿ ಎಂ ಶಟ್ಟಿ, ಶ್ರೀದರ್ ಪೂಜಾರಿ, ಚಂದ್ರಶೇಖರ್ ಸಾಯಾನ ಸೇರಿ ಅನೇಕರಿದ್ದರು.
ಉತ್ತಮ ಆರೋಗ್ಯಕ್ಕಾಗಿ ದಂತ ರಕ್ಷಣೆ ಅಗತ್ಯ: ಡಾ. ಸುನೀಲ್ ಸಲಹೆ
ಹೊಳೆನರಸೀಪುರ: ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕ ಆಹಾರ ಬಾಯಿಯ ಮೂಲಕವೇ ಸೇರಬೇಕಿದ್ದು, ನಾವುಗಳು ತಿನ್ನುವ ಆಹಾರ ಜೀರ್ಣವಾಗಬೇಕಾದರೆ ಚೆನ್ನಾಗಿ ಅಗಿಯಬೇಕು. ಈ ಕ್ರಿಯೆ ನಡೆಯಬೇಕಾದರೆ ಆರೋಗ್ಯವಾದ, ಸುರಕ್ಷಿತವಾಗಿ ಹಲ್ಲುಗಳಿಂದ ಮಾತ್ರ ಸಾಧ್ಯ ಎಂದು ಹಾಸನದ ದಂತ ವೈದ್ಯ ಡಾ.ಸುನೀಲ್ ಹೇಳಿದರು.
 ಪಟ್ಟಣದ ಸೀತಾಲಕ್ಷ್ಮಿ ರಂಗಸ್ವಾಮಿಶೆಟ್ಟಿ ಚಾರಿಟಬಲ್ ಟ್ರಸ್ಟಿ ಹಾಗೂ ಕೋಲ್ಗೇಟ್ ಕಂಪನಿ ಸಹಯೋಗದಲ್ಲಿ ತಾಲೂಕಿನ ಬಾಗೀವಾಳು ಫ್ರೌಢಶಾಲೆಯ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟ್ರಸ್ಟ್ ಸೇವೆ: ದಂತ ಶಿಬಿರವನ್ನು ಆಯೋಜಿಸಿದ್ದ ಸೀತಾಲಕ್ಷ್ಮಿ ರಂಗಸ್ವಾಮಿಶೆಟ್ಟಿ ಚಾರಿಟಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾದ ಎನ್.ಆರ್.ಗೋವಿಂದರಾಜಗುಪ್ತ ಮಾತನಾಡಿ, ತಮ್ಮ ಟ್ರಸ್ಟ್ ಹಲವಾರು ವರ್ಷಗಳಿಂದ ಉಚಿತವಾಗಿ ದಂತ ಹಾಗೂ ಕಣ್ಣಿನ ತಪಾಸಣಾ ಶಿಬಿರ ನೆಡೆಸುತ್ತಿರುವುದಾಗಿ ತಿಳಿಸಿದರು.  ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ಕೆ.ಸಿ.ಮರಿಯಪ್ಪ ಹಲ್ಲುಗಳನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ವಿವರಿಸಿದರು.
ಸ್ವಚ್ಛತೆ ಕಾಪಾಡಿ: ಹಳೇಕೋಟೆಯ ಪ್ರಾ.ಆ.ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಆರ್.ಬಿ. ಪುಟ್ಟೇಗೌಡ ಮಾತನಾಡುತ್ತಾ, ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಮಲೇರಿಯಾ, ಡೆಂಗ್ಯೂ ರೋಗಗಳು ಉಲ್ಬಣವಾಗುವ ಸಾಧ್ಯತೆಗಳಿರುವುದರಿಂದ ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಪುಟ್ಟನಂಜಮಣಿ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.