ಆಂತರಿಕ ಕಿತ್ತಾಟ: ನರಕವಾದ ನಗರಸಭೆ
ದಯಾಶಂಕರ ಮೈಲಿ
ಕನ್ನಡಪ್ರಭ ವಾರ್ತೆ, ಹಾಸನ, ಜು. 27
ಜನಪ್ರತಿನಿಧಿಗಳು ಮತ್ತು ಅಧಿಕಾರಿಶಾಹಿ ಪರಸ್ವರ ಅನೂನ್ಯತೆಯಿಂದ ಹೋಗದೇ ಪರಸ್ವರ ಆರೋಪ- ಪ್ರತ್ಯಾರೋಪದಲ್ಲಿ ನಿರತರಾದರೇ ಅಭಿವೃದ್ದಿ ಕೆಲಸಗಳು ಮೂಲೆಗುಂಪಾಗಿ, ಅಂತಿಮವಾಗಿ ಜನರು ಪರಿತಪಿಸಬೇಕಾಗುತ್ತದೆ ಎಂಬುದಕ್ಕೆ ಹಾಸನ ನಗರಸಭೆಯಲ್ಲಿ ನಡೆಯುತ್ತಿರುವ ಘಟನಾವಳಿಗಳೇ ಸಾಕ್ಷಿಯಾಗಬಲ್ಲವು.
ನಗರಸಭೆಯಲ್ಲಿ ಎಂದಿನಂತೆ ಸ್ವಚ್ಚತೆ ಮತ್ತಿತರ ಅಭಿವೃದ್ದಿ ಕಾರ್ಯಗಳು ಸರಿಯಾಗಿ ನಡೆದು ಹಲವಾರು ತಿಂಗಳುಗಳೇ ಆಗಿವೆ. ಇದೇ ಕಾಲಕ್ಕೆ ತೆರಿಗೆ ಸಂಗ್ರಹ ಕಾರ್ಯವೂ ಕೂಡ ಸ್ಥಗಿತಗೊಂಡಿದೆ. ಹೀಗೆ ನಗರಸಭೆ ಇದ್ದರೂ ಇಲ್ಲದಂತಾಗಿದೆ ಜನರ ಪಾಲಿಗೆ. ಇದಕ್ಕೆ ಕಾರಣ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರ ನಡುವೆ ಜಟಾಪಟಿ. ಇವರಿಬ್ಬರ ಜಗಳ, ವೈಮನಸ್ಸು ಈಗ ಬೀದಿಗೆ ಬಂದಿದೆ.
ಡಿಸಿಗೆ ದೂರು: ತಮಗೆ ಕಚೇರಿ ಕೊಠಡಿಗೆ ಜೆಡಿಎಸ್ ಸದಸ್ಯರು ಮತ್ತು ಅಧ್ಯಕ್ಷರು ಬಂದು ಧಮಕಿ ಹಾಕಿ ಅಶ್ಲೀಲ ಭಾಷೆಯಲ್ಲಿ ನಿಂದಿಸಿದರು. ಭ್ರಷ್ಟಾಚಾರದ ಕೆಲ ಫೈಲ್ಗಳಿಗೆ ಸಹಿ ಹಾಕಬೇಕೆಂದು ಒತ್ತಡ ಹೇರಿದರು. ನನಗೆ ರಕ್ಷಣೆ ನೀಡಬೇಕೆಂದು ಆಯುಕ್ತ ಕೃಷ್ಣಮೂರ್ತಿ ಅವರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರು.
ನಗರಸಭೆ ಅಧ್ಯಕ್ಷೆ ಶ್ರೀ ವಿದ್ಯಾ ಅವರು ಸಹ, ತಮ್ಮ ಪಕ್ಷದ ಜೆಡಿಎಸ್ ಸದಸ್ಯರೊಡಗೂಡಿ ಜಿಲ್ಲಾಧಿಕಾರಿ, ಎಸ್ಪಿ ಅವರನ್ನು ಭೇಟಿ ಮಾಡಿ, ಅಧ್ಯಕ್ಷರು, ಜನಪ್ರತಿನಿಧಿಗೆ ನೀಡಬೇಕಾದ ಗೌರವ ನೀಡದೇ ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದ್ದಾರೆ. ಅಭಿವೃದ್ದಿ ವಿಷಯಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಇದನ್ನು ಪ್ರಶ್ನಿಸಿದ ಸದಸ್ಯರಿಗೆ ಜಾತಿ ನಿಂದನೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿ ಲಿಖಿತ ದೂರು ನೀಡಿದ್ದಾರೆ.
ಅಧಿಕಾರಿ ಪರ ವಕಾಲತ್ತು: ಏತನ್ಮಧ್ಯೆ.... ಬಿಜೆಪಿ ಅವರು ಆಯುಕ್ತರ ಪರ ವಕಾಲತ್ತು ಹಾಕಿರುವುದು ಜೆಡಿಎಸ್ ಸದಸ್ಯರನ್ನು ಮತ್ತಷ್ಟು ಕೆರಳಿಸಿದೆ. ತಮ್ಮ ಪಕ್ಷದ ಮುಖಂಡರಾದ ಮಾಜಿ ಸಚಿವ ಸಿ.ಟಿ. ರವಿ ಅವರೇ, ಆಯುಕ್ತರ ವಿರುದ್ಧ ವಿಧಾನಸಭೆ ಒಳಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂಥದ್ದರಲ್ಲಿ ಇಲ್ಲಿನ ಬಿಜೆಪಿ ಮುಖಂಡರು, ಅಧಿಕಾರಿಯೊಬ್ಬರ ಪರ ವಾದಿಸಿ ಪ್ರತಿಭಟನೆ ಗೆ ಇಳಿದಿರುವುದು ಸರಿಯಲ್ಲ.
ಅಲ್ಲದೇ ರಾಷ್ಟ್ರೀಯ ರಾಜಕೀಯ ಪಕ್ಷವೊಂದು ಅಧಿಕಾರಿ ರಕ್ಷಣೆಗಾಗಿ ನಗರಸಭೆ ಸೂಪರ್ಸೀಡ್ ಮಾಡಬೇಕೆಂದು ಆಗ್ರಹಿಸಿರುವುದು ಮತ್ತು ನಗರದ ಪ್ರಥಮ ಪ್ರಜೆಯನ್ನು ಜಿಲ್ಲಾಧಿಕಾರಿ ಕಚೇರಿಗೆ ಹೋಗದಂತೆ ತಡೆಯುವುದು ಪ್ರಜಾಪ್ರಭುತ್ವಕ್ಕೆ ಎಸಗಿ ಘೋರಾತಿ ಘೋರ ಅಪರಾಧ ಎಂದೇ ಟೀಕಿಸಲಾಗುತ್ತಿದೆ.
ಕಾಂಗ್ರೆಸ್ ನಗರಸಭೆಯನ್ನು ಸೂಪರ್ಸೀಡ್ ಮಾಡಬೇಕೆನ್ನುವ ಆಗ್ರಹ ಬಿಟ್ಟು ನಗರಸಭೆಯಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಡುವೆ ಉಂಟಾಗಿರುವ ಬಿರುಕನ್ನು ಸರಿಪಡಿಸುವ ಯತ್ನ ಮಾಡಿ, ನಗರದ ಅಭಿವೃದ್ಧಿ ಕಾರ್ಯಗಳು ಎಂದಿನಂತೆ ನಡೆಯುವಂತೆ ಮಾಡಬೇಕು ಎಂದು ನಾಗರಿಕ ವೇದಿಕೆ ಸಂಚಾಲಕ ಮಹೇಶ್ ಕುಮಾರ್ ಕಿವಿಮಾತು ಹೇಳಿದ್ದಾರೆ.
ಅಧ್ಯಕ್ಷೆಯೂ ದಲಿತ ಮಹಿಳೆ: ನಗಸರಸಭೆ ಅಧ್ಯಕ್ಷೆ ಶ್ರೀ ವಿದ್ಯೆ ಕೂಡ ದಲಿತ ಮಹಿಳೆ. ಅವರು ಸೂಸೂತ್ರವಾಗಿ ಆಡಳಿತ ನಡೆಸಲು ಬಿಡುತ್ತಿಲ್ಲ. ಇದು ದಲಿತ ಮಹಿಳೆಗೆ ಎಸಗಿದ ಅನ್ಯಾಯ ಎಂಬ ಅಸಮಾಧಾನ ಕೂಡ ವ್ಯಕ್ತವಾಗಿದೆ.
ಇಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಸರಿಪಡಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರೇ ಕಾಣದಂತೆ ಮಾಯವಾಗಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಬಂದು ಹೋಗುವ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪನವರು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

