ಹಾಸನ

ಪ್ರತ್ಯೇಕ ಪ್ರಕರಣ: ನಾಲ್ವರ ಬಂಧನ

Published On :

ಕನ್ನಡಪ್ರಭ ವಾರ್ತೆ  ಹಾಸನ  ಜೂ.5
ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ನಗದು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಹಾಸನ ಆಲೂಗಡ್ಡೆ ವ್ಯಾಪಾರಿ ಚಂದ್ರೇಗೌಡರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಿರೀಶ್(32), ಆಲೂರಿನ ಮಾವನೂರು ಗ್ರಾಮದ ಮಲ್ಲಮ್ಮ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಯಾ(19) ಮತ್ತು ಈಕೆಯೆ ತಂಗಿಯನ್ನು  ಮತ್ತು ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದ ಚಂದ್ರಮ್ಮ ಎಂಬುವರ ಕೊಲೆಗೆ ಸಂಬಂಧಿಸಿದಂತೆ ಆಕೆಯ ಪತಿ ರಘು ಎಂಬುವರನ್ನು ಬಂಧಿಸಲಾಗಿದೆ ಎಂದರು.
ಚಂದ್ರೇಗೌಡ ಕೊಲೆ ಆರೋಪಿ ಬಂಧನ
ಇತ್ತೀಚೆಗಷ್ಟೇ ನಡೆದ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಸಮೀಪದ ಬೆಲವತ್ತಹಳ್ಳಿ ಅರಣ್ಯದಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದ್ದ ಆಲೂಗಡ್ಡೆ ವ್ಯಾಪಾರಿ ಚಂದ್ರೇಗೌಡ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಿರೀಶ್(32) ಎಂಬುವನನ್ನು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಚಂದ್ರೇಗೌಡ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ತನಿಖೆಗೆ ಒಳಪಡಿಸಿದ ಸಂದರ್ಭದಲ್ಲಿ ಚಂದ್ರೇಗೌಡನ ಪತ್ನಿಯೊಂದಿಗೆ ಆತ ಅಕ್ರಮ ಸಂಬಂಧ ಹೊಂದಿರುವುದು ತಿಳಿಸಿದ್ದಾನೆ. ಕೊಲೆಗೂ ಇದೇ ಕಾರಣ ಎಂದು ಒಪ್ಪಿಕೊಂಡಿದ್ದಾನೆ. ಜೊತೆಗೆ ಆತನ ಬಳಿಯಿಂದ ಸುಮಾರು 6.5 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಗಿರೀಶ್‌ನನ್ನು ಪೊಲೀಸ್ ಅಧಿಕಾರಿಗಳಾದ ಮಂಜುನಾಥ್, ಗಂಗಾಧರಪ್ಪ, ಸುನೀಲ್, ನಾಗರಾಜು ಹಾಗೂ ಇತರರ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ ಎಂದರು.
ಚಂದ್ರಮ್ಮ ಪ್ರಕರಣ
ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದಲ್ಲಿ ಜೂ. 4 ರಂದು ನಡೆದಿದ್ದ ಚಂದ್ರಮ್ಮ ಎಂಬ ಮಹಿಳೆಯ ಕೊಲೆ ಪ್ರಕರಣವನ್ನು ಒಂದೇ ದಿನದಲ್ಲಿ ಬೇಧಿಸಿರುವ ಸಕಲೇಶಪುರ ವಿಭಾಗದ ಪೊಲೀಸರು ಆರೋಪಿ ಆಕೆಯ ಪತಿ ರಘುನನ್ನು ಬಂಧಿಸಿದ್ದಾರೆ. ಮೃತ ಚಂದ್ರಮ್ಮ ಸಕಲೇಶಪುರ ತಾಲೂಕಿನ ಮರಗುಂದ ಗ್ರಾಮದವರಾಗಿದ್ದು, ಆರೋಪಿ ರಘು ಮೂಡಿಗೆರೆ ತಾಲೂಕಿನ ಬೈದಹಳ್ಳಿ ಗ್ರಾಮದವನಾಗಿದ್ದು, ಚಂದ್ರಮ್ಮನನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದನು.  ಮೃತ ಚಂದ್ರಮ್ಮ ರಘುನನ್ನು ತನ್ನ ಜತೆಯೇ ಇರಬೇಕೆಂದು ಒತ್ತಾಯಿಸಿ, ಜಗಳವಾಡುತ್ತಿದ್ದಳು ಇದರಿಂದ ಬೇಸತ್ತು ಕೊಲೆ ಮಾಡಿರುವುದಾಗಿ ಆರೋಪಿ ರಘು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ರಶ್ಮಿ ನೇತೃತ್ವದಲ್ಲಿ ಸಕಲೇಶಪುರ ಡಿವೈಎಸ್ಪಿ ಕುಮಾರಸ್ವಾಮಿ, ಸಿಪಿಐ ಗುರುರಾಜ್, ಪಿಎಸ್‌ಐಗಳಾದ ಜೀವನ್, ಬಿ.ಆರ್. ಗೌಡ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ದರೋಡೆ, ಕೊಲೆ ಪ್ರಕರಣಗಳು ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಮನೆಗಳನ್ನು ಬಾಡಿಕೆ ನೀಡುವ ಮುನ್ನ ಅವರ ಪೂರ್ವಾಪರ ವಿಚಾರಿಸಿ ಮನೆ ಬಾಡಿಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ರಶ್ಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.