ನಶಿಸುತ್ತಿರುವ ಬಿದಿರು ವೃತ್ತಿ ಉಳಿಸಲು ಕಾಯಕಲ್ಪ ಅಗತ್ಯ
ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ಹುಟ್ಟಿನಿಂದ ಸಾವಿನವರೆಗೂ ನಾಗರಿಕ ಸಮಾಜದೊಡನೆ ಒಂದಿಲ್ಲೊಂದು ರೀತಿಯ ಅವಿನಾಭಾವ ಸಂಬಂಧವನ್ನು ಹೊಂದಿರುವ ಬಿದಿರು, ನಾಗರಿಕತೆ ಬೆಳೆದಂತೆಲ್ಲಾ ಆಧುನಿಕತೆಯ ಸೋಗಿಗೆ ಮಾರು ಹೋಗಿರುವ ಜನರ ಅಭಿರುಚಿಯೂ ಬದಲಾದಂತೆ ಬಿದಿರಿನ ಸ್ಥಾನವನ್ನು ಪ್ಲಾಸ್ಟಿಕ್ ಪದಾರ್ಥಗಳೇ ಆಕ್ರಮಿಸಿರುವ ಕಾರಣದಿಂದಾಗಿ ಬಿದಿರನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿರುವ ಕೊರಮ ಸಮುದಾಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಮಗು ಹುಟ್ಟಿದಾಗ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಗುವನ್ನು ಬಿದಿರಿನ ಮೊರಕ್ಕೆ ಹಾಕುವುದು ಪದ್ಧತಿಯಲ್ಲಿದೆ. ಆನಂತರದಲ್ಲಿ ತೊಟ್ಟಿಲು, ಬೀಸಣಿಕೆ, ಮದುವೆ ಶುಭ ಸಮಾರಂಭಗಳಲ್ಲಿನ ಧಾರೆ ಪೆಟ್ಟಿಗೆ, ದೇವಾಲಯಕ್ಕೆ ಹೊರಟಾಗ ಹೂಬುಟ್ಟಿಯಾಗಿ, ದೇವರನ್ನು ಹೊರುವ ಅಡ್ಡೆ(ಅಡ್ಡಪಲ್ಲಕ್ಕಿ)ಯಾಗಿ, ರಥದ ಕಮಾನಿಗೆ, ಕೃಷಿಯಲ್ಲಿ ತೆಂಗು, ಅಡಿಕೆ ಕಾಯಿ ಕೊಯ್ಯಲು, ಬೆಳೆದ ಕೃಷಿ ಪದಾರ್ಥಗಳ ಸಂರಕ್ಷಣೆಯಲ್ಲಿ ಕೊಮ್ಮೆ, ಹಗೇವೂ ನಿರ್ಮಿಸಲು, ಎತ್ತಿನ ಗಾಡಿಗೆ ತಡಿಕೆಯಾಗಿ, ಕಮಾನು ಕಟ್ಟಲು, ದೋಣಿ-ಹರಿಗೋಲು-ತೆಪ್ಪಕ್ಕೆ, ಏಣಿಯಾಗಿ, ಮದುವೆ ಚಪ್ಪರಕ್ಕೆ, ವಯಸ್ಸಾದವರಿಗೆ ಊರುಗೋಲಾಗಿ, ಸ್ವಾಧಿಷ್ಟ ಭೋಜನಕ್ಕಾಗಿ ಬಿದಿರಿನ ಕಳಲೆಯ ಖಾದ್ಯವಾಗಿ... ಕಡೆಗೆ ಜೀವನದ ಅಂತಿಮ ಪಯಣಕ್ಕೆ ಚಟ್ಟವಾಗಿ... ಹೀಗೆ ನಮ್ಮ ಜೀವನದ ಎಲ್ಲ ಹಂತಗಳಲ್ಲಿಯೂ ಬಿದಿರು ನಮ್ಮೊಡನೆ ಬೆಸೆದುಕೊಂಡಿರುವ ಸಂಬಂಧ ಬಿಡಿಸಲಾರದ ಸಂಬಂಧವಾಗಿದೆ.
ಬಿದಿರಿನ ಕೊರತೆ: ಹಿಂದೆಲ್ಲಾ ಬಿದಿರನ್ನೇ ಆಶ್ರಯಿಸಿ ಬದುಕುವ ಕೊರಮರಿಗೆ ಅರಣ್ಯ ಇಲಾಖೆಯಿಂದಲೇ ವಿವಿಧ ಯೋಜನೆಯಡಿಯಲ್ಲಿ ಉಚಿತವಾಗಿ ಬಿದಿರನ್ನು ಹಂಚಲಾಗುತ್ತಿತ್ತು. ಕಾಲಾನಂತರದಲ್ಲಿ ಅರಣ್ಯದಲ್ಲೂ ಬಿದಿರಿನ ಲಭ್ಯತೆ ಕುಂಠಿತಗೊಂಡ ಕಾರಣದಿಂದಾಗಿ ಈಗ್ಗೆ 15-20 ವರ್ಷಗಳಿಂದಲೂ ಅರಣ್ಯ ಇಲಾಖೆಯು ಬಿದಿರು ನೀಡುವುದನ್ನು ನಿಲ್ಲಿಸಿದ ಮೇಲೆ ಹಳ್ಳಿ-ಹಳ್ಳಿಗಳನ್ನು ಅಲೆದು ಬಿದಿರನ್ನು ಹುಡುಕಿ ಅವರು ಹೇಳಿದ ಬೆಲೆ ತೆತ್ತು ಹೊತ್ತು ತಂದು ನಮ್ಮ ಜೀವನಕ್ಕಾಗಿ ಬಿದಿರಿನ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವ ಸ್ಥಿತಿ ಇದೆ ಎನ್ನುತ್ತಾರೆ ಕೊರಮ ಜನಾಂಗದ ಹಿರಿಯ ಜೀವವಾದ ಕೊರಮರ ವೆಂಕಟಪ್ಪ.
ಬಿದಿರನ್ನೇ ನಂಬಿ ಜೀವನ ನಡೆಸುವ ಅನಿವಾರ್ಯತೆಯುಳ್ಳ 55ಕ್ಕೂ ಹೆಚ್ಚು ಕುಟುಂಬಗಳು ಪಟ್ಟಣದಲ್ಲಿದ್ದು, ಹಿಂದಿನಷ್ಟು ಬಿದಿರಿನ ಲಭ್ಯತೆ ಇಲ್ಲದ ಕಾರಣದಿಂದಾಗಿ ನಮ್ಮೆಲ್ಲರ ಜೀವನ ನಿರ್ವಹಣೆ ದಿನೇ ದಿನೇ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಆತಂಕ ವ್ಯಕ್ತಪಡಿಸುವ ವೆಂಕಟಪ್ಪ, ಬಿದಿರು ವೃತ್ತಿಯು ಇಂದಿನ ದಿನಗಳಲ್ಲಿ ಯಾವುದೇ ಲಾಭದಾಯಕವಲ್ಲದ ವೃತ್ತಿಯಾಗಿರುವ ಕಾರಣದಿಂದಾಗಿ ತಮ್ಮ ಕುಲ ಕಸುಬನ್ನು ತಮ್ಮ ಮಕ್ಕಳು ಮುಂದುವರಿಸುವಲ್ಲಿ ನಿರಾಸಕ್ತಿ ಹೊಂದಿದ್ದಾರೆ ಎಂದು ನೊಂದು ನುಡಿಯುತ್ತಾರೆ.
ಯಾವುದೇ ಸೌಲಭ್ಯಗಳಿಲ್ಲ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಾನಾ ಜನಾಂಗಗಳ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಘೋಷಿಸಿದ್ದರೂ, ಕೊರಮರ ಬದುಕನ್ನು ದಡ ಸೇರಿಸುವ ಯಾವುದೇ ಯೋಜನೆಗಳೂ ನಮ್ಮ ಜನಾಂಗಕ್ಕೆ ಇದುವರೆವಿಗೂ ಸಿಕ್ಕಿಲ್ಲ ಎಂದು ನುಡಿಯುತ್ತಾನೆ.
ಕೊರಮರ ಅಣ್ಣಪ್ಪ. ಮದುವೆ ಲಗ್ನಗಳ ಸಂದರ್ಭದಲ್ಲಿ ಶಾಸ್ತ್ರ ಸಂಪ್ರದಾಯದ ನಿರ್ವಹಣೆಗಾಗಿ ಧಾರೆ ಪೆಟ್ಟಿಗೆ-ಕುಕ್ಕೆಗಳಿಗೆ ಬೇಡಿಕೆ ಇರುತ್ತದೆ, ನಂತರದಲ್ಲಿ ಇದ್ದಕ್ಕಿದ್ದಂತೆಯೇ ಬಿದಿರಿನ ಉತ್ಪನ್ನಗಳಿಗೆ ದಿಢೀರ್ ಬೇಡಿಕೆ ಕುಸಿಯುತ್ತದೆ. ಆಗ ಹಳ್ಳಿ ಹಳ್ಳಿಗಳನ್ನು ಸುತ್ತಿ ನಾವು ಸಿದ್ದಪಡಿಸುವ ಬಿದಿರಿನ ಉತ್ಪನ್ನಗಳನ್ನು ಮಾರಬೇಕಾದ ಅನಿವಾರ್ಯತೆ ಇದೆ ಎಂದು ಅಣ್ಣಪ್ಪ ನೊಂದು ನುಡಿಯುತ್ತಾನೆ.
ಈಗಲಾದರು ಸರ್ಕಾರಗಳು ಎಚ್ಚೆತ್ತು ಈ ಅಪರೂಪದ ವೃತ್ತಿಯನ್ನು ಉಳಿಸಿ, ಈ ವೃತ್ತಿಯನ್ನೇ ನಂಬಿರುವ ಕೊರಮ ಜನಾಂಗದ ಬದುಕಿಗೂ ಒಂದು ಆಶಾಕಿರಣವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

