ಕಾರ್ಖಾನೆ ಮುಚ್ಚಲು ಆಗ್ರಹ
ಹಾಸನ: ಓಮ್ನಿಕಾನ್ ಅರ್ಥ್ಸೈನ್ಸಸ್ ಪ್ರೈವೇಟ್ ಲಿಮಿಟೆಡ್ನ ಚೆಂಡು ಹೂ ಕಾರ್ಖಾನೆ ಹಾಗೂ ಎಂ.ಜಿ.ರಿಕ್ಲೆಮೇಷನ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಗಳಿಂದ ದುರ್ವಾಸನೆ ಬರುತ್ತಿದ್ದು, ಇಲ್ಲಿನ ತ್ಯಾಜ್ಯಗಳು ಕೆರೆಗೆ ಬಿಡುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ನಗರದ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಯ ಮುಂದೆ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರಾಸಾಯನಿಕ ಉತ್ಪಾದನೆ: ನಗರದ ಕೈಗಾರಿಕಾ ಪ್ರದೇಶಾಭಿವೃದ್ದಿ ಕೇಂದ್ರದಲ್ಲಿ ಇರುವ ಹೂ ಸಂಸ್ಕರಣ ಘಟಕವು 3 ವರ್ಷದ ಹಿಂದೆ ಸ್ಥಾಪನೆಗೊಂಡಿದ್ದು, ಇಲ್ಲಿ ಚೆಂಡು ಹೂವುಗಳನ್ನು ತಂದು ಅವುಗಳನ್ನು ಕೊಳೆಸಿ ಅದರಿಂದ ರಾಸಾಯನಿಕ ಪುಡಿ ಮತ್ತು ಟ್ಯಾಬ್ಲೇಟ್ನಂತಹ ವಸ್ತುವನ್ನು ತಯಾರು ಮಾಡಲಾಗುತ್ತಿದೆ.
ಸುತ್ತಮುತ್ತಲ ಗ್ರಾಮಗಳಾದ ಸಮುದ್ರವಳ್ಳಿ, ನಾಗತವಳ್ಳಿ, ಕೌಶಿಕ, ಸಾತೇನಹಳ್ಳಿ, ಸಂಕ್ಲಾಪರು, ಕೊಕ್ಕನಘಟ್ಟ, ಹನುಮಂತಪುರ, ಚಿಕ್ಕಬಸವನಹಳ್ಳಿ, ದೊಡ್ಡಬಸವನಹಳ್ಳಿ, ಶೆಟ್ಟಿಹಳ್ಳಿ, ಎಂ ಹೊಸಕೊಪ್ಪಲು, ಕಂಚನಹಳ್ಳಿ, ಶ್ರೀರಾಮನಗರ ಹಾಗೂ ಶಾಲಾ ಕಾಲೇಜುಗಳು ಇದ್ದು, ಈ ಗ್ರಾಮಗಳಿಗೆ ಕೆಟ್ಟ ತ್ಯಾಜ್ಯದಿಂದ ಜನರ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರುವಂತಾಗಿದೆ. ಇದರಿಂದ ಸಣ್ಣ ಮಕ್ಕಳ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದಿನೇ ದಿನೇ ಅನೈರ್ಮಲ್ಯ ಹೆಚ್ಚಾಗಿ ಜನ ಜಾನುವಾರುಗಳು ಸಾಯುವ ಸ್ಥಿತಿಗೆ ತಲುಪುತ್ತಿವೆ ಎಂದು ಆರೋಪಿಸಿದರು.
ದೂರಿಗೆ ಸ್ಪಂದಿಸುತ್ತಿಲ್ಲ: ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರನ್ನು ನೀಡಿದ್ದರು ಸಹ ಈವರೆಗೂ ಯಾವುದೆ ಪ್ರಯೋಜನವಾಗಿಲ್ಲ. ಒಂದು ಬಾರಿ ಕಾರ್ಖಾನೆಯನ್ನು ಬಂದ್ ಮಾಡಿಸಲಾಗಿತ್ತು. ಆದರೆ ಕಾರ್ಖಾನೆಯ ಮಾಲೀಕರು ಪ್ರಭಾವಿಯಾಗಿರುವುದರಿಂದ ಈ ಕಾರ್ಖಾನೆಯನ್ನು ಮತ್ತೆ ಪ್ರಾರಂಭಿಸಿದ್ದಾರೆ ಎಂದು ದೂರಿದರು.
ಆದ್ದರಿಂದ ಕೂಡಲೇ ಈ ಕಾರ್ಖಾನೆಯನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ: ನಗರದ ಹೊರ ವಲಯ ಕೈಗಾರಿಕ ಪ್ರದೇಶದಲ್ಲಿರುವ ಎಂ.ಜಿ. ರಿಕ್ಲೆಮೇಷನ್ ಕಂಪನಿ ಮಾಲೀಕರ ವಿರುದ್ಧ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು.
ಹಳೇ ಟೈರುಗಳನ್ನು ಸುಟ್ಟು ಅದರಿಂದ ರಸಾಯನಿಕ ಪುಡಿಯನ್ನು ತಯಾರು ಮಾಡುವುದರಿಂದ ಸುತ್ತ ಇರುವ ಸಮುದ್ರವಳ್ಳಿ, ನಾಗತವಳ್ಳಿ, ಕೌಶಿಕ, ಸಾತೇನಹಳ್ಳಿ, ಕಂಚನಹಳ್ಳಿ, ಕೊಪ್ಪಲು, ಶ್ರೀರಾಮನಗರ ಮೊದಲಾದ ಗ್ರಾಮಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಟೈರ್ ಕಾರ್ಖಾನೆಯಿಂದ ಬರುತ್ತಿರುವ ಹೊಗೆ, ದುರ್ವಾಸನೆ ಕುಡಿದು ಕಳೆದ 3 ವರ್ಷಗಳಿಂದಲೂ ಜನರ ಆರೋಗ್ಯ ಹದಗೆಟ್ಟಿದೆ ಎಂದು ಆರೋಪಿಸಿದರು.
ಕ್ರಮಕ್ಕೆ ಆಗ್ರಹ: ಈಗಾಗಲೇ ಜಿಲ್ಲಾಧಿಕಾರಿ, ಸಚಿವರಿಗೆ, ಶಾಸಕರಿಗೆ, ತಹಸೀಲ್ದಾರ್, ಕೆಐಡಿ ಅಧಿಕಾರಿಗೆ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಯವರಿಗೆ ಮನವಿ ನೀಡಿಲಾಗಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಗ್ರಾಮಸ್ಥರಾದ ಸೌದ್ರಳ್ಳಿ ಕುಮಾರ್, ಚನೇಗೌಡ, ನಾಗರಾಜ್, ಸಂತೋಷ್, ಗಿಡ್ಡೇಗೌಡ, ಯೋಗೀಶ್ ಇತರರು ಪಾಲ್ಗೊಂಡಿದ್ದರು.
ಅಧಿಕಾರಿಗಳ ಭರವಸೆ: ಪ್ರತಿಭಟನಾ ನಿರತ ಸ್ಥಳಕ್ಕಾಗಮಿಸಿ ತಹಸೀಲ್ದಾರ್ ಮಂಜುನಾಥ್, ಇನ್ನು 10-15 ದಿನಗಳಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸಲಾಗುವುದು. ಅಧಿಕಾರಿಗಳ ಸಭೆ ಕರೆದು ನಂತರ ನಿರ್ಣಯ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕಾರ್ಖಾನೆ ಸ್ಪಷ್ಟನೆ: ನಗರದಲ್ಲಿ ಇರುವಂತಹ ಹಳೆಯ ಟೈರ್ಗಳನ್ನು ತಂದು ಅದನ್ನು ಪುಡಿ ಮಾಡಿ ಅದನ್ನು ಮತ್ತೆ ಉಪಯೋಗಕ್ಕೆ ಬರುವುವಂತೆ ಮಾಡಲಾಗುತ್ತಿದೆ. ಇಲ್ಲಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ. ಮತ್ತೆ ಇಲ್ಲಿ ಉತ್ಪತ್ತಿಯಾಗುವಂತಹ ನೀರನ್ನು ನಾವು ಶುದ್ಧೀಕರಿಸಿ ಕಾರ್ಖಾನೆಯಲ್ಲಿ ಗಿಡಗಳಿಗೆ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ ನಮ್ಮ ಕಾರ್ಖಾನೆಯಲ್ಲಿ ಪಲ್ಯೂಷನ್ ಯೂನಿಟ್ ಅಳವಡಿಸಲಾಗಿದೆ. ಆದ್ದರಿಂದ ಮಾಲಿನ್ಯ ಉಂಟಾಗಲು ಸಾಧ್ಯವಿಲ್ಲ ಎಂದು ಎಂ.ಜಿ.ರಿಕ್ಲೆಮೇಷನ್ ಕಂಪನಿ ಮ್ಯಾನೇಜರ್ ರಾಜೇಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

