ಬಸವರಾಜಪುರದಲ್ಲಿ ನೀರಿಗೆ ಹಾಹಾಕಾರ
ಬೇಲೂರು: ಕುಡಿಯುವ ನೀರಿಗಾಗಿ ಕಳೆದ 2 ವರ್ಷದಿಂದ ಬಸವರಾಜಪುರಲ್ಲಿ ಹಾಹಾಕಾರವಿದ್ದರೂ ಶಾಸಕರು, ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲವೆಂದು ದೂರಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಮುಂದೆ ಸೋಮವಾರ ಧರಣಿ ನಡೆಸಿದರು.
ತಾಲೂಕಿನ ಹಳೆಬೀಡು ಹೋಬಳಿ ಬಸವರಾಜಪುರದ ನೂರಾರು ಗಾಮಸ್ಥರು ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರಲ್ಲದೆ ಶಾಸಕರ, ಜನಪ್ರತಿನಿಧಿಗಳ ವಿರುದ್ಧ ದಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕಳೆದ 2 ವರ್ಷದಿಂದ ಗ್ರಾಮದಲ್ಲಿ ಹಾಹಾಕಾರವಿದೆ.
ಗ್ರಾಮದಲ್ಲಿರುವ ಕೊಳವೆಬಾವಿಗಳು ಹಾಳಾಗಿದ್ದು ಕೆರೆಕಟ್ಟೆಯಲ್ಲಿರುವ ಬಗಡು ನೀರನ್ನೆ ಕುಡಿದು ಜನರು ರೋಗ ರುಜಿನಗಳಿಂದ ನರಳುತ್ತಿದ್ದಾರೆ. ಗ್ರಾಮದಲ್ಲಿ ಸದ್ಯ 1 ಕೊಳವೆಬಾವಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು 1 ಕೊಡ ನೀರು ಬಂದು ನಂತರ ಮಣ್ಣು ಮಿಶ್ರಿತ ನೀರು ಬರುತ್ತದೆ ಎಂದು ತಾವು ತಂದಿದ್ದ ನೀರನ್ನು ತೋರಿಸಿದರು.
ಯಗಚಿ ಜಲಾಶಯದಿಂದ ಅರಸೀಕೆರೆ ತಾಲೂಕಿಗೆ ಕುಡಿಯುವ ನೀರನ್ನು ಪೈಪ್ಲೈನ್ ಮೂಲಕ ಹರಿಸಲಾಗುತ್ತಿದೆ. ಪೈಪ್ಲೈನ್ ಮೂಲಕ ಹರಿಯುತ್ತಿರುವ ನೀರು ಕೆಲವೆಡೆ ಪೈಪ್ ಒಡೆದು ಸೋರಿಕೆಯಾಗುತ್ತಿದೆ. ಪೈಪ್ನಿಂದ ಸೋರಿಕೆಯಾಗುತ್ತಿರುವ ಕೊಳಕು ನೀರನ್ನು ಕುಡಿಯಲು ಗ್ರಾಮಸ್ಥರು ಬಳಸುತ್ತಿದ್ದಾರೆ. ಪೋಲಾಗುತ್ತಿರುವ ನೀರನ್ನು ಸಂರಕ್ಷಣೆ ಮಾಡಿ ಗ್ರಾಮದ ಜನತೆಗೆ ಒದಗಿಸಿದರೆ ಕುಡಿಯುವ ನೀರನ್ನು ಕೊಟ್ಟ ಪುಣ್ಯ ಬರುತ್ತದೆ ಎಂದು ಮನವಿ ಮಾಡಿದರು.
ಅಲ್ಲದೆ ಗ್ರಾಮದಲ್ಲಿ ವಿದ್ಯುತ್ ಕಂಬವಿಲ್ಲದೆ ರಾತ್ರಿ ವೇಳೆ ಓಡಾಡಲು ಹರಸಾಹಸ ಪಡುವಂತಾಗಿದೆ. ಬಸವರಾಜಪುರದಲ್ಲಿರುವ ಶೇ. 70 ಮನೆಗಳಲ್ಲಿ ಶೌಚಾಲಯ ಇಲ್ಲವಾಗಿದ್ದು ಗದ್ದೆ ಬಯಲನ್ನೇ ಆಶ್ರಯಿಸಬೇಕಾಗಿದೆ. ಈ ಬಗ್ಗೆ ಗ್ರಾಪಂ ಪಿಡಿಒ ರುದ್ರೇಗೌಡರ ಗಮನಕ್ಕೆ ತಂದರೆ ಜಾಣ ಕುರುಡು ತೋರುವುದಲ್ಲದೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಪರ್ವತೇಗೌಡ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರಲ್ಲದೆ, ದೂರವಾಣಿಯಲ್ಲಿ ಗ್ರಾ. ಪಂ ಪಿಡಿಓ ರುದ್ರೇಗೌಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆ ಬಗ್ಗೆ ವಿಚಾರಿಸಿದರು. ಅಧ್ಯಕ್ಷರ ಪ್ರಶ್ನೆಗೆ ಪಿಡಿಒ ಸಮರ್ಪಕವಾಗಿ ಉತ್ತರ ನೀಡದೆ ಈಗ ಬಂದೆ, ಆಗ ಬಂದೆ ಎಂದು ಹಾರಿಕೆ ಉತ್ತರ ನೀಡುತ್ತಾ ಗಂಟೆಗೂ ಹೆಚ್ಚು ಕಾಲ ಸತಾಯಿಸಿದರು.
ಇದರಿಂದ ಕುಪಿತರಾದ ಪರ್ವತಯ್ಯ ಪಿಡಿಓ ಮೇಲೆ ಕ್ರಮ ಕೈಗೊಳ್ಳುವಂತೆ ಇಓಗೆ ಸೂಚಿಸಿದರಲ್ಲದೆ ಗ್ರಾಮದ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಲು ಮುಖ್ಯ ಎಂಜಿನಿಯರ್ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೊತೆ ಗ್ರಾಮಕ್ಕೆ ತೆರಳಿ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

