ಹಾಸನ

ಮಾಧ್ಯಮ ಪ್ರಮಾಣೀಕರಣ, ಮೇಲ್ವಿಚಾರಣಾ ಸಮಿತಿ ರಚನೆ

Published On :

ಮೈಸೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಶ್ರವಣ, ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಮಾಡುವ ಚುನಾವಣಾ ಪ್ರಚಾರಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಜಾಹಿರಾತುಗಳ ಪರಿಶೀಲನೆ ನಡೆಸಿ ನಿಯಂತ್ರಣಗಳನ್ನು ಜಾರಿಯಲ್ಲಿ ತರಲು ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿಯನ್ನು ಜಿಲ್ಲಾಧಿಕಾರಿ ಸಿ. ಶಿಖಾ ರಚಿಸಿದ್ದಾರೆ. ಈ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಸದಸ್ಯರಾಗಿ, ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳು ಸಹ ಸದಸ್ಯರಾಗಿ, ಮೈಸೂರು ಜಿಲ್ಲಾ ವಾರ್ತಾ ಇಲಾಖೆ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು.
ಲೋಕಾಯುಕ್ತ ಬಲೆಗೆ ಗ್ರಾಮಲೆಕ್ಕಿಗ
ಹನೂರು: ಜಮೀನು ಖಾತೆ ಮಾಡಿಕೊಡಲು ರೈತನಿಂದ ಲಂಚ ಪಡೆಯುವ ವೇಳೆಯಲ್ಲಿ ಗ್ರಾಮಲೆಕ್ಕಿಗನೊಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.  ಹನೂರು ವ್ಯಾಪ್ತಿಯ ಪಿ.ಜಿ.ಪಾಳ್ಯ ನಿವಾಸಿ ರೈತ ಸಿದ್ದರಾಜು ಸರ್ಕಾರದಿಂದ ಮಂಜೂರಾಗಿರುವ ಜಮೀನು ಖಾತೆ ಮಾಡಿಸಿಕೊಳ್ಳಲು ಕಳೆದ 3 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದನು. ಹನೂರು ಹೆಚ್ಚುವರಿ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಸಹಾಯಕ ವೆಂಕಟಮಾದನಾಯ್ಕ ಖಾತೆ ಮಾಡಿಕೊಡಲು 10 ಸಾವಿರ ರು. ಹಣ ನೀಡುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ರೈತ ಸಿದ್ದರಾಜು ಮುಂಗಡವಾಗಿ 3ಸಾವಿರ  ರು. ಹಣ ನೀಡಿ ಉಳಿದ ಹಣವನ್ನು ಆಮೇಲೆ ನೀಡುವುದಾಗಿ ತಿಳಿಸಿದ್ದನು. ಅದರಂತೆ ಗುರುವಾರ ಬೆಳಗ್ಗೆ ರೈತ ಸಿದ್ದರಾಜು ಅವರಿಂದ ವೆಂಕಟಮಾದನಾಯ್ಕ ಉಳಿಕೆ 7 ಸಾವಿರ ರು.ಗಳನ್ನು ಪಡೆಯುವ ವೇಳೆಯಲ್ಲಿ ಚಾಮರಾಜನಗರದ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿ ವೆಂಕಟಮಾದನಾಯ್ಕನನ್ನು  ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಪಿಎಸ್‌ಐಗಳಾದ ಕ್ಯಾತೇಗೌಡ, ಗೋಪಿಕೃಷ್ಣ, ಸಿಬ್ಬಂದಿ ಭಾಗವಹಿಸಿದ್ದರು.
ಬೇಕಾಬಿಟ್ಟಿ ವಾಹನ ನಿಲುಗಡೆ; ಯಾರಿಗೂ ಇಲ್ಲಿಲ್ಲ ಅಡೆತಡೆ
ಆಲೂರು: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ, ಪೊಲೀಸ್ ಠಾಣೆ ಸೇರಿದಂತೆ ಇನ್ನಿತರೆ ಸರ್ಕಾರಿ ಕಚೇರಿಗಳ ಮುಂದೆ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಲಾಗುತ್ತಿದೆ.
ಸಾರ್ವಜನಿಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು, ಇದರಿಂದ ತಹಸಿಲ್ದಾರ್ ಕಚೇರಿ ಆವರಣವೇ ಬೈಕ್, ಕಾರುಗಳ ನಿಲುಗಡೆಬೇಕಾಬಿಟ್ಟಿ ಪಾರ್ಕಿಂಗ್ ಪ್ರದೇಶದಂತೆ ಗೋಚರಿಸುತ್ತಿದೆ.
ತಹಸೀಲ್ದಾರ್ ಅವರು ಶೀಘ್ರ ಇತ್ತ ಗಮನಹರಿಸಿ ಸಾರ್ವಜನಿಕರು ವಾಹನಗಳನ್ನು ಸೂಕ್ತ ಸ್ಥಳದಲ್ಲಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕಿದೆ.
ಸರ್ಕಲ್ ಇನ್ಸ್‌ಪೆಕ್ಟರ್ ಅವರು ಶೀಘ್ರ ಇತ್ತ ಗಮನ ಹರಿಸಿ, ಠಾಣೆಯ ಮುಂಭಾಗ ವಾಹನಗಳು ನಿಲ್ಲದಂತೆ ಕ್ರಮಕೈಗೊಳ್ಳುವುದರ ಜತೆಗೆ ಬೈಕ್ ಸವಾರರು ಮುಖ್ಯ ರಸ್ತೆಯಲ್ಲಿ ಅತೀ ವೇಗವಾಗಿ ಬೈಕ್ ಚಾಲನೆ ಮಾಡುವವರ ಹಾಗೂ ಬೈಕ್‌ನಲ್ಲಿ 3-4 ಹಾಗೂ 5 ಜನರವರೆಗೂ ಕೂರಿಸಿಕೊಂಡು ಚಾಲನೆ ಮಾಡುವವರನ್ನು ಹಿಡಿದು ದಂಡ ವಿಧಿಸದಿದ್ದರೆ ಠಾಣೆಯ ಒಳ ಭಾಗಕ್ಕೆ ಬೈಕ್ ತಂದು ನಿಲ್ಲಿಸುವ ದಿನಗಳೂ ದೂರವಿಲ್ಲ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಕಸ ವಿಲೇವಾರಿ ಸಮಸ್ಯೆ ಬಗ್ಗೆ
ಗಮನಹರಿಸದ ಅಧಿಕಾರಿಗಳು
ಹಾಸನ: ನಗರದ ಜಯಚಾಮರಾಜೇಂದ್ರ ಆಸ್ಪತ್ರೆಯ ಮುಂಭಾಗ ಕಸ ಹಾಕಲು ಇಟ್ಟಿರುವ ತೊಟ್ಟಿಯು ಕಳೆದ ಮೂರ್ನಾಲ್ಕು ದಿನಗಳಿಂದ ತುಂಬಿ ತುಳುಕುತ್ತಿದ್ದರೂ ಕಸ ವಿಲೇವಾರಿ ಮಾಡುವ ಬಗ್ಗೆ ಯಾವ ಅಧಿಕಾರಿಯೂ ಗಮನಹರಿಸುತ್ತಿಲ್ಲ.
ಕಸದ ತೊಟ್ಟಿಯು ತುಂಬಿ ಕಸ ಕೆಳಗೆ ಬೀಳುತ್ತಿದ್ದರೂ ಅದನ್ನು ವಿಲೇವಾರಿ ಮಾಡುವ ಬದಲು ಬೆಂಕಿ ಹಾಕುತ್ತಿದ್ದಾರೆ. ಆದರೆ, ತೊಟ್ಟಿಯಲ್ಲಿರುವ ಕಸ ಸಂಪೂರ್ಣವಾಗಿ ಸುಡದೇ ಅರೆಬೆಂದ ಸ್ಥಿತಿಯಲ್ಲಿದೆ. ಪುನಃ ಅದರ ಮೇಲೆ ಕಸ ಹಾಕಲಾಗುತ್ತಿದ್ದು, ಕಸ ತುಂಬಿ ತೊಟ್ಟಿಯ ಸುತ್ತಮುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ದನಕರುಗಳು ಕಸವನ್ನು ಎಳೆದು ರಸ್ತೆಗೆ ಹಾಕುತ್ತಿವೆ. ಇದರಿಂದ ದುರ್ನಾತ ಹೊಡೆಯುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸ ತೊಟ್ಟಿಯಲ್ಲೇ ಸುಡದೇ, ಬೇರೆಡೆಗೆ ಕೊಂಡೊಯ್ಯುವ ಮೂಲಕ ವ್ಯವಸ್ಥಿತವಾಗಿ ವಿಲೇವಾರಿ ಮಾಡಿಸಬೇಕಿದೆ. ಕಸವನ್ನು ಸುಡುವುದರಿಂದ ವಾಯುಮಾಲಿನ್ಯವಾಗುತ್ತಿದ್ದು, ಓಝೋನ್ ಪದರಕ್ಕೆ ಹಾನಿಯುಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ವಾರ್ಡ್‌ಗೆ ಸಂಬಂಧಪಟ್ಟ ಅಧಿಕಾರಿಗಳು ಕಸ ಸುಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಸಹಕಾರ ಸಂಘಕ್ಕೆ ಆಯ್ಕೆ
ಹಾಸನ: ನಗರದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಅಕ್ಷಯ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಗೋಪಾಲ್ ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ. ನಿಂಗೇಗೌಡ ಆಯ್ಕೆಯಾಗಿದ್ದಾರೆ. ಡಾ. ದಿನೇಶ್ ಬಿ., ಹೆಚ್.ಆರ್. ಮಂಜಪ್ಪಗೌಡ, ಬಿ.ಎನ್. ಪ್ರಮೋದ್, ಡಾ. ದಿನೇಶ್ ಎಸ್.ಆರ್., ಆರ್.ಪಿ. ವೆಂಕಟೇಶ ಮೂರ್ತಿ, ಪುಟ್ಟರಾಜೇಗೌಡ, ನಾಗೇಂದ್ರ ಕುಮಾರ್, ಮಮತಾಶಿವು, ಬಿ. ಶ್ರೀಪಾಲ್ ಕೊಥಾರಿ, ವೆಂಕಟೇಶ್ ಹಾಗೂ ವೇದಾವತಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ನೂತನ ಸಂಘದ ಸರ್ವ ಸದಸ್ಯರ ಸಭೆ ಹಾಗೂ ಉದ್ಘಾಟನಾ ಸಮಾರಂಭ ಮಾ. 7ರಂದು ಬೆಳಿಗ್ಗೆ 9:30ಕ್ಕೆ ಆರ್.ಸಿ. ರಸ್ತೆಯಲ್ಲಿ ಕೆ.ಎಸ್.ಎಸ್.ಸಿ. ಕಚೇರಿ ಬಳಿ ಇರುವ ಸಂಘದ ಕಚೇರಿಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಡಾ. ಗುರುರಾಜ ಹೆಬ್ಬಾರ್ ಉದ್ಘಾಟಿಸುವರು. ಜಿ.ಎಲ್. ಮುದ್ದೇಗೌಡ ಹಾಗೂ ಡಾ. ಎಂ.ಪಿ. ಅಶೋಕಗೌಡ ಅವರು ಮುಖ್ಯ ಅತಿಥಿಗಳಾಗಿರುವರು. ಗೋಪಾಲ್  ಅಧ್ಯಕ್ಷತೆ ವಹಿಸುವರು.


ಬದುಕಿನ ಸಾರ್ಥಕತೆಗೆ ಅಧ್ಯಾತ್ಮ ಸಹಕಾರಿ: ಶಿವ ಸುಜ್ಞಾನ ಸ್ವಾಮೀಜಿ
ಅರಕಲಗೂಡು: ಮಾನವ ಜೀವನ ಪರಿಪೂರ್ಣವಾಗಲು ಅಧ್ಯಾತ್ಮ ಚಿಂತನೆ ಅವಶ್ಯವಾಗಿದ್ದು, ಇಲ್ಲವಾದಲ್ಲಿ ಮಾನವ ಬದುಕು ನಿರರ್ಥಕವಾಗುತ್ತದೆ ಎಂದು ಅರೇಮಾದನಹಳ್ಳಿ ಶ್ರೀಮನ್ಮೂಲಮಠದ ಮಠಾಧೀಶ ಶ್ರೀ ಶಿವ ಸುಜ್ಞಾನ ಸ್ವಾಮೀಜಿ ತಿಳಿಸಿದ್ದಾರೆ.
ತಾಲೂಕಿನ ಅರೆಮಾದನಹಳ್ಳಿ ಶ್ರೀ ಮನ್ಮೂಲಮಠದಲ್ಲಿ ಸಮಾಜಸೇವಕ ಹೆಚ್.ಆರ್.ಪಾಂಡುರಂಗ ಅವರು ಬರೆದ ಜ್ಞಾನ ಗಂಗಾ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದ ಶ್ರೀಗಳು ಅಧ್ಯಯನದಲ್ಲಿ ತೊಡಗಿರುವ ವ್ಯಕ್ತಿಗಳು ಇದರ ಸಾಫಲ್ಯ ಹೊಂದಲು ಒಂದು ಸದವಕಾಶ ದೊರೆತಂತಾಗಿದೆ. ಜ್ಞಾನ ಗಂಗಾ ಒಂದು ಉತ್ತಮ ಕೃತಿಯಾಗಿ ಸಾರ್ಥಕ ಬದುಕಿಗೆ ದಾರಿಯಾಗಲಿದೆ ಎಂದರು.
ಕೃತಿಯ ಕತೃ ಹೆಚ್.ಆರ್. ಪಾಂಡುರಂಗ ಅವರು ಮಾತನಾಡಿ ಲೌಕಿಕ ವಿಷಯ ಜಂಜಾಟ ಮತ್ತು ಅವುಗಳ ಮಾನಸಿಕ ತೊಳಲಾಟಗಳಿಂದ ಹೊರಬರಲು ಆಧ್ಯಾತ್ಮಿಕತೆ ಅನಿವಾರ್ಯವಾಗಿದ್ದು,ಇದನ್ನರಿತು ನಮ್ಮ ಯುವ ಸಮಾಜ ಮುಂದಾಗಬೇಕಿದೆ. ಜ್ಞಾನಗಂಗಾ ಕೃತಿ ಬದುಕಿನ ಸಾರ್ಥಕತೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಶಾಂತಕುಮಾರ್, ಕನ್ನಿಕಾ ಮಹಲ್ ಅಧ್ಯಕ್ಷ ವೆಂಕಟೇಶ ಶೆಟ್ಟಿ,ಪಟ್ಟಣ ಪಂಚಾಯಿತಿ ಸದಸ್ಯ ಲೋಕೇಶ್, ಶಿವಣ್ಣ, ರಾಜೇಗೌಡ, ಗಣೇಶ್ ಹಾಗೂ ಇತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.