ತೆರೆದ ಗುಂಡಿ ಮುಚ್ಚಲು ಸಾರ್ವಜನಿಕರ ಆಗ್ರಹ
ಆಲೂರು: ಪಟ್ಟಣದ ಆಶಾ ಬಡಾವಣೆಯ ತಿರುವಿನಲ್ಲಿ ನೀರಿನ ಪೈಪ್ ಒಡೆದು ಹೋಗಿದ್ದು ಸುಮಾರು 2 ಅಡಿ ಆಳ 3 ಅಡಿ ಅಗಲದ ಗುಂಡಿಯನ್ನು ತೋಡಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಈ ನೀರಿನ ಪೈಪನ್ನು ದುರಸ್ತಿ ಮಾಡದೆ ತೆರೆದ ಗುಂಡಿಯನ್ನು ಹಾಗೆಯೇ ಬಿಡಲಾಗಿದ್ದು, ಈ ಗುಂಡಿಯು ಬಿ.ಎಂ. ರಸ್ತೆಗೆ ಹೊಂದಿಕೊಂಡೇ ಇರುವುದರಿಂದ ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಈ ರೀತಿ ಗುಂಡಿ ತೋಡಿದರೆ ನೀರಿನ ಪೈಪನ್ನು ತಕ್ಷಣ ದುರಸ್ತಿ ಮಾಡಿ ಗುಂಡಿಯನ್ನು ಮುಚ್ಚಿಸಿಬಿಡಬೇಕು ಅದು ಬಿಟ್ಟು ನಾಲ್ಕೈದು ದಿನಗಳಾದರೂ ಗುಂಡಿಯನ್ನು ಮುಚ್ಚಿಸದೆ ಇದ್ದಲ್ಲಿ ಅಪಘಾತಗಳು ಸಂಭವಿಸಬಹುದು.
ರಾತ್ರಿಯ ವೇಳೆಯಲ್ಲಂತೂ ಈ ಭಾಗದಲ್ಲಿ ಸಂಚರಿಸಬೇಕಾದರೆ ತೀವ್ರ ನಿಗಾವಹಿಸಬೇಕು ಮೊದಲೇ ಪಟ್ಟಣದ ಇಡೀ ರಸ್ತೆಯೇ ಗುಂಡಿಮಯವಾಗಿದ್ದು ಸಂಬಂಧಪಟ್ಟ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದಾರೆಯೆ ಎಂದು ಸಾರ್ವಜನಿಕರು ದೂರಿದ್ದಾರೆ.
'ಹೆಣ್ಣಿಗೆ ಗೌರವ ಸಲ್ಲಿಸುವವರ ಬದುಕು ಅರಳುತ್ತದೆ'
ಹಾಸನ: ಯಾರು ಹೆಣ್ಣಿಗೆ ಗೌರವ ಸಲ್ಲಿಸುತ್ತಾರೋ ಅವರ ಬದುಕು ಅರಳುತ್ತದೆ ಎಂದು ಸಾಹಿತಿ ಡಾ. ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.
ಅವರು ನಗರದ ಎನ್ಡಿಆರ್ಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಥಾಪಕರಾದ ನಾರಾಯಣಿ ಡಿ.ಆರ್. ಕರೀಗೌಡರ ಸ್ಮರಣಾರ್ಥ ಇತ್ತೀಚೆಗೆ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯದಲ್ಲಿ ಕನ್ನಡ ನೆಲದ ಸಂಸ್ಕೃತಿ ವಿಷಯ ಕುರಿತು ಮಾತನಾಡಿದರು.
ಜಾನಪದ ಬೋಧನೆ: ಜನಪದರ ಬದುಕು ಭೂಮಿ ತಾಯಿ ಪೂಜೆಯಿಂದ ಆರಂಭವಾಗುತ್ತದೆ. ಅವರಲ್ಲಿ ನಂಬಿಕೆಯೇ ಗುರುವಾಗಿತ್ತು. ಜನಪದ ಲೋಕದ ಹೆಣ್ಣು ತನ್ನ ಮಗುವಿಗೆ ಆಚಾರಕ್ಕೆ ಅರಸಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು, ಜ್ಯೋತಿಯಾಗು ಜಗಕ್ಕೆಲ್ಲ ಎಂಬುದಾಗಿ ನೀತಿಯನ್ನು ಬೋಧಿಸುತ್ತಿದ್ದಳು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ. ಶ್ಯಾಮಭಟ್ ಮಾತನಾಡಿದರು. ಗಾಯಕರಾದ ಹಾಸನ ಬಾಬು ಜನಪದ ಗೀತೆಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ರಂಜಿಸಿದರು. ಸಹ ಪ್ರಾಧ್ಯಾಪಕರಾದ ಎಚ್.ಕೆ. ಜಯರಾಂ, ಡಾ. ಎನ್. ರಮೇಶ್, ಎಚ್.ಎನ್. ಪುಟ್ಟರಾಜು ಹಾಗೂ ಇತರರು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಎ.ಜಿ. ಶಾಂತೇಗೌಡ ಸ್ವಾಗತಿಸಿದರು. ವಿದ್ಯಾರ್ಥಿ ರಾಕೇಶ್ ಕಶ್ಯಪ್ ಪ್ರಾರ್ಥಿಸಿದರು. ಅಧ್ಯಾಪಕ ವೆಂಕಟೇಶ್ ನಿರೂಪಿಸಿದರು.
ನಡವಳಿಕೆ, ಪ್ರಜ್ಞೆಯಿಂದ ವ್ಯಕ್ತಿತ್ವ ಹೆಚ್ಚುತ್ತದೆ: ಗೋಪಾಲ್
ಹಾಸನ: ಮನೋಭಾವನೆ, ನಡವಳಿಕೆ ಮತ್ತು ಸಮಯ ಪ್ರಜ್ಞೆಯಿಂದ ವ್ಯಕ್ತಿತ್ವ ಹೆಚ್ಚುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಹಿಮವಂತ ಗೋಪಾಲ್ ತಿಳಿಸಿದರು. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ಇತ್ತೀಚೆಗೆ ದ್ವಿತೀಯ ಎಂ.ಕಾಂ. ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತಿಹಾಸ ಅಧ್ಯಾಪಕ ಪ್ರೊ. ಸುಂದ್ರೇಶ್ ಮಾತನಾಡಿ, ಸಕಾರಾತ್ಮಕ ಗುಣಗಳು ನಮ್ಮ ಒತ್ತಡಗಳನ್ನು ಕಡಿಮೆ ಮಾಡಲು ಸಹಕಾರಿ ಎಂದರು. ಅರ್ಥಶಾಸ್ತ್ರ ಅಧ್ಯಾಪಕ ಪ್ರೊ. ಗುರುರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಮನೋವೃತ್ತಿ ಮುಖ್ಯ ಎಂದರು. ವಿಭಾಗದ ಸಂಯೋಜಕ ಡಾ. ರಮೇಶ, ಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ, ರಮೇಶ ನಾಯ್ಕ, ಮರಿಗೌಡ, ನಾಗೇಂದ್ರನಾಥ ಗಿರಿ ಹಾಗೂ ಎಂ.ಕಾಂ. ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಡಿಂಪಲ್ ಪ್ರಾರ್ಥಿಸಿದರು.
ನಾಜಿಯಾ ಸ್ವಾಗತಿಸಿದರು. ಜಯಶ್ರೀ ಸಂಪನ್ಮೂಲ ವ್ಯಕ್ತಿಯವರ ಬಗ್ಗೆ ಕಿರುಪರಿಚಯ ಮಾಡಿಕೊಟ್ಟರು. ಭವ್ಯ ನಿರೂಪಿಸಿದರು. ಸ್ವಾತಿ ವಂದಿಸಿದರು.
ಯುವ ಸೌರಭದಡಿಯಲ್ಲಿಭರತ ನಾಟ್ಯ ಕಾರ್ಯಕ್ರಮ
ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ಹಾಸನಾಂಬ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಇತ್ತೀಚೆಗೆ ಹಾಸನಾಂಬ ಶಿಕ್ಷಣ ಮಹಾವಿದ್ಯಾಲಯದ ರಂಗವೇದಿಕೆಯಲ್ಲಿ ಯುವ ಸೌರಭ ಕಾರ್ಯಕ್ರಮದಡಿ ಸೌಮ್ಯ ಮತ್ತು ತಂಡದವರಿಂದ ಭರತ ನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಉದಯರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಲ್ಲಿ ಯುವ ಸೌರಭ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಬಹುದಾಗಿದೆ ಎಂದರು.
ಶಾಂತಲೆ ಪ್ರೇರಕ ಶಕ್ತಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಜಿ ಬಿ.ಎನ್. ರಾಮಸ್ವಾಮಿ ಮಾತನಾಡಿ, ಹಾಸನ ಜಿಲ್ಲೆಯ ಹೊಯ್ಸಳ ಶಿಲ್ಪಕಲೆಯ ನೃತ್ಯಭಂಗಿಯ ಶಿಲ್ಪಗಳು ಭರತನಾಟ್ಯ ಇತಿಹಾಸದ ಮಹತ್ವದ ಗುರುತಾಗಿದ್ದು ಶಾಂತಲೆ, ಅಪ್ರತಿಮ ನೃತ್ಯಪಟುವಾಗಿ ಶಿಲ್ಪಿಗಳ ಕೆತ್ತನೆಗೆ ಪ್ರೇರಕ ಶಕ್ತಿಯಾಗಿದ್ದಳು ಎಂದು ತಿಳಿಸಿದರು.
ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸಾಹಿತಿ ಗೊರೂರು ಅನಂತರಾಜು, ಗಂಜಲಗೂಡು ಗೋಪಾಲಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಸನಾಂಬ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್.ಸಿ. ಯತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ಗೀತಾ ಭರತನಾಟ್ಯ ಪ್ರದರ್ಶಿಸಿದ ಕಲಾವಿದೆಯರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಕ್ರೀಡಾಕೂಟಕ್ಕೆ ಇಂದು ತೆರೆ
ಹುಣಸೂರು: ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಾ. 15ರ ಬೆಳಗ್ಗೆ 10ಕ್ಕೆ ವಾರ್ಷಿಕ ಕ್ರೀಡಾಕೂಟ ಸಮಾರಂಭ ಆಯೋಜಿಸಲಾಗಿದ್ದು, ಮೈಸೂರು ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ. ವೆಂಕಟೇಶ್ ಉದ್ಘಾಟಿಸುವರು ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಸ್. ಭಾಸ್ಕರ್ ತಿಳಿಸಿದ್ದಾರೆ.
ನಾಳೆ ಪ್ರಶಸ್ತಿ ಪ್ರದಾನ
ಹುಣಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್, ಹುಣಸೂರು, ರೋಟರಿ ಸಂಸ್ಥೆ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಗಳ ಸಹಯೋಗದಲ್ಲಿ ಮಾ.16ರ ಬೆಳಗ್ಗೆ 10ಕ್ಕೆ ರಾಷ್ಟ್ರಕವಿ ಕುವೆಂಪು ಸ್ಮರಣಾರ್ಥ ರೋಟರಿ ಭವನದಲ್ಲಿ ನಡೆಯುವ ರಾಜ್ಯಮಟ್ಟದ ಚುಟುಕು ಕವಿಮೇಳ ಹಾಗೂ ಸೇವಾ ಚೇತನ ಪ್ರಶಸ್ತಿ ಸಮಾರಂಭವನ್ನು ಹಿರಿಯ ಸಾಹಿತಿ ಡಾ. ರಾಮೇಗೌಡ ಉದ್ಘಾಟಿಸುವರು. ಬೆಳಗ್ಗೆ 11.30ಕ್ಕೆ ಸಾಹಿತಿ ಬನ್ನೂರು ಕೆ.ರಾಜು ಅಧ್ಯಕ್ಷತೆಯಲ್ಲಿ ಚುಟುಕು ಕವಿತೆಗಳ ವಾಚನಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಿವಿಧ ಕ್ಷೇತ್ರಗಳ 6 ಮಂದಿ ಸಾಧಕರಿಗೆ ಸೇವಾ ಚೇತನ ಪ್ರಶಸ್ತಿ ಪ್ರದಾನ ಹಾಗೂ ಮುಕ್ತಾಯ ಸಮಾರಂಭ ನಡೆಯಲಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು ಎಂದು ಪರಿಷತ್ ಅಧ್ಯಕ್ಷ ಟಿ. ಲೋಕೇಶ್ ತಿಳಿಸಿದ್ದಾರೆ.
3 ಎಕರೆ ಕಬ್ಬು ಬೆಂಕಿಗಾಹುತಿ
ಟಿ. ನರಸೀಪುರ: ಆಕಸ್ಮಿಕವಾಗಿ ಬೆಂಕಿ ಬಿದ್ದು ಮೂರು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ನಾಶವಾಗಿರುವ ಘಟನೆ ತಾಲೂಕಿನ ಯರಗನಹಳ್ಳಿಯಲ್ಲಿ ಜರುಗಿದೆ.
ತಾಲೂಕಿನ ಹೂಸೂರುಹುಂಡಿ ಗ್ರಾಮದ ಗುರುಮಲ್ಲಮ್ಮ ಎಂಬವರಿಗೆ ಸೇರಿದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ ಪರಿಣಾಮ, ಮೂರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಇಡಿ ಜಮೀನನ್ನು ಆವರಿಸಿದ್ದರಿಂದ 110ಕ್ಕೂ ಹೆಚ್ಚು ಟನ್ ಕಬ್ಬು ಭಸ್ಮವಾಗಿದ್ದು, ಸುಮಾರು 3 ಲಕ್ಷಗಳಷ್ಟು ನಷ್ಟ ಉಂಟಾಗಿದೆ.
ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ನಷ್ಟ ಉಂಟಾಗಿರುವ ಬಗ್ಗೆ ಕಾಂಗ್ರೆಸ್ ಮುಖಂಡ ತೋಂಟೇಶ್ ಪಟ್ಟಣದ ಪೊಲೀಸ್ ಠಾಣೆ ಹಾಗೂ ತಹಸೀಲ್ದಾರರಿಗೆ ದೂರು ನೀಡಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.
ದುರ್ಗಮ್ಮ, ಮರ್ಗಮ್ಮ ದೇವಿ ಉತ್ಸವ
ಹುಣಸೂರು: ಪಟ್ಟಣದ ಸರಸ್ವತಿಪುರಂನ ದುರ್ಗಮ್ಮ ಹಾಗೂ ಮರ್ಗಮ್ಮ ದೇವಿ 67ನೇ ವಾರ್ಷಿಕೋತ್ಸವ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು. ದೇವಸ್ಥಾನದಲ್ಲಿ ಮೊದಲ ದಿನ ತಂಬಿಟ್ಟಿನಾರತಿ, ವಿವಿಧ ಪೂಜೆ, ಹವನ, ಹೋಮ ನಂತರ ಲಕ್ಷ್ಮಣತೀರ್ಥ ನದಿಯಲ್ಲಿ ಪೂಜೆಸಲ್ಲಿಸಿ ಅಲಂಕೃತ ಟ್ರಾಕ್ಟರ್ನಲ್ಲಿ ದೇವಿಯ ಉತ್ಸವ ನಡೆಯಿತು. ದೇವರ ಉತ್ಸವದಲ್ಲಿ ಕತ್ತಿಯಿಂದ ಕಾಯಿ ಒಡೆಯದೆ ಯುವಕನ ತಲೆ ಮೇಲೆ ಕಲ್ಲನಿಟ್ಟುಕೊಂಡು ಕಲ್ಲಿನಲ್ಲೆ ಕಾಯಿ ಒಡೆಯುವುದು ಇಲ್ಲಿನ ವಿಶೇಷ.
ನಾಳೆಯಿಂದ ಎನ್ನೆಸ್ಸೆಸ್ ಶಿಬಿರ
ಹುಣಸೂರು: ತಾಲೂಕಿನ ಭರತವಾಡಿಯಲ್ಲಿ ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯವು ಹುಣಸೂರಿನ ಸ್ನೇಹ ಜೀವಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಮಾ.16ರಿಂದ 22ರವರೆಗೆ ವೈದ್ಯ ವಿದ್ಯಾರ್ಥಿಗಳಿಂದ ಎನ್ಎಸ್ಎಸ್ ಶಿಬಿರ ಆಯೋಜಿಸಿದೆ. ಮಾ.16ರ ಸಂಜೆ 4ಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್ ಶಿಬಿರ ಉದ್ಘಾಟಿಸುವರು. ಉಪ ವಿಭಾಗಾಧಿಕಾರಿ ಜಗದೀಶ, ತಾಪಂ ಇಒ ಡಾ. ಪ್ರೇಮಕುಮಾರ್ ಭಾಗವಹಿಸುವರು. ಜೆಎಸ್ಎಸ್ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಿದೆ.
ಸ್ವಾಮಿಗೌಡ ನೇಮಕ
ಹುಣಸೂರು: ಇಲ್ಲಿನ ನ್ಯಾಯಾಲಯದ ಸರ್ಕಾರಿ ಹೆಚ್ಚುವರಿ ವಕೀಲರಾಗಿ ಮೂಕನಹಳ್ಳಿ ಸ್ವಾಮಿಗೌಡ ಅವರನ್ನು ನಾಮಕರಣ ಮಾಡಲಾಗಿದೆ ಎಂದು ಕಾನೂನು ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

