ಅಕ್ರಮಕ್ಕೆ ಕುಮ್ಮಕ್ಕು ನೀಡಿದವರನ್ನು ಸಸ್ಪೆಂಡ್ ಮಾಡಿ
ಹಾಸನ: ಕಡ್ಡಾಯ ಶಿಕ್ಷಣ ನೀತಿ (ಆರ್ಟಿಇ) ಸುಳ್ಳು ದಾಖಲೆಗಳನ್ನು ನೀಡಿ ಎಸ್ಸಿ, ಎಸ್ಟಿ ಮಕ್ಕಳ ಬದಲಿಗೆ ಸೀಟುಗಳಿಗೆ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗಳಿಗೆ ಸೇರಲು ಸಹಕರಿಸಿರುವ ಶಿಕ್ಷಣ ಇಲಾಖೆಯ ಬಿಇಓ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕಂದಾಯ ಇಲಾಖೆ ನೌಕರರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸುವಂತೆ ಜಿಲ್ಲಾ ಆರ್ಟಿಇ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಚ್.ಟಿ. ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಆರ್ಟಿಇ ಅಡಿಯಲ್ಲಿ ಹಲವು ಶಾಲೆಗಳಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಅದರಲ್ಲಿ ಎಸ್ಸಿ, ಎಸ್ಟಿ ವರ್ಗಕ್ಕೆ ಶೇ. 7.5ರಷ್ಟು ಮೀಸಲಾತಿ ಇವೆ. ಒಂದು ವಾರ್ಡ್ನಲ್ಲಿ ಎಸ್ಸಿ, ಎಸ್ಟಿ ವರ್ಗದ ಮಕ್ಕಳ ಅರ್ಜಿ ಇಲ್ಲದಿದ್ದರೆ ಇತರರಿಗೆ ನೀಡಲಾಗುತ್ತದೆ. ಅದೇ ವಾರ್ಡಿನ ಅಕ್ಕಪಕ್ಕದ ವಾರ್ಡ್ಗಳಲ್ಲಿ ಅರ್ಜಿಗಳು ಅದೇ ವರ್ಗದ ಮಕ್ಕಳಿಂದ ಬಂದಿದ್ದರೂ, ಆ ಅರ್ಜಿಗಳನ್ನು ನಿರ್ಲಕ್ಷಿಸಿ, ಆ ಸೀಟುಗಳನ್ನು ಶ್ರೀಮಂತರ ಮಕ್ಕಳಿಗೆ ನೀಡಿ ವಂಚಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅಕ್ರಮಗಳು ನಡೆಯೋದು ಹೇಗೆ?: ಶಾಲಾ ದಾಖಲಾತಿಗಳಲ್ಲಿ ಹೆಚ್ಚಿನ ಸುಳ್ಳು ಆದಾಯ ಪ್ರಮಾಣ ಪತ್ರ ಹಾಗೂ ಸುಳ್ಳು ವಾಸ ಸ್ಥಳ ಪ್ರಮಾಣ ಪತ್ರಗಳನ್ನು ನೀಡಿ ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ. ರೇಷನ್ ಕಾರ್ಡ್ನ ನಕಲಿನಲ್ಲಿ ವಿಳಾಸ ಬದಲಿಸಿ ನಕಲಿ ಪ್ರತಿ ಮಾಡಿಸಿ ವಂಚಿಸಲಾಗುತ್ತಿದೆ. ಅರ್ಜಿಗಳಲ್ಲಿ ಮಕ್ಕಳ ಫೋಟೊ ಹಾಕದೆ ವಂಚಿಸುವ ಪ್ರಯತ್ನಗಳೂ ನಡೆದಿವೆ ಎಂದರು.
ಒಬ್ಬೊಬ್ಬರಿಂದ ಒಂದೊಂದು ಪ್ರಕ್ರಿಯೆ: ರಾಜ್ಯಾದ್ಯಂತ ಕೆಲವು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಬ್ಬೊಬ್ಬರು ಒಂದೊಂದು ರೀತಿಯ ಆಯ್ಕೆ ಪ್ರಕ್ರಿಯೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ವರ್ಗದ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಈ ಬಾರಿ ವ್ಯವಸ್ಥಿತವಾಗಿ ವಂಚಿಸುವ ಹುನ್ನಾರ ನಡೆದಿದೆ. ಸಕ್ರಮ ಕಂದಾಯ ಇಲಾಖೆಯಿಂದ ಹೆಚ್ಚಿನ ನಕಲಿ ದಾಖಲೆಗಳು ಬಂದಿದೆ. ಆದ್ದರಿಂದ ಆಯ್ಕೆಯಾದ ಮಕ್ಕಳ ಮೂಲಕ ದಾಖಲೆಗಳನ್ನು ಪ್ರಾಮಾಣಿಕವಾಗಿ ಪರಿಗಣಿಸಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕು ಎಂದರು.
ಆಗ್ರಹ: ಆಯ್ಕೆ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಒಂದು ಗುಂಪಿಗೆ ಮೂರು ಮಕ್ಕಳನ್ನು ಆಯ್ಕೆ ಮಾಡಿ ಯಾವುದಾದರೂ ಮಗು ಶಾಲೆ ಬಿಟ್ಟಲ್ಲಿ ಆ ಮಕ್ಕಳನ್ನು ಆ ಜಾಗಕ್ಕೆ ತುಂಬುವಂತೆ ಹೊಸದಾಗಿ ಕಾಯ್ದೆಯಲ್ಲಿ ತಿಳಿಸಲಾಗಿದೆ. ಅದರಲ್ಲೂ ಅಕ್ರಮ ನಡೆಯುತ್ತಿವೆ. ಇಲ್ಲಸಲ್ಲದ ಸುಳ್ಳು ಆದಾಯ, ವಾಸ ಸ್ಥಳದ ಬಗ್ಗೆ ತಳಿಸಲು ಆಕ್ಷೇಪಣೆಗೆ ಕಾಲಾವಕಾಶ ನೀಡಿರುವುದು ಕೇವಲ ಮೂರು ದಿನಗಳು ಮಾತ್ರ. ಈ ವಿಚಾರ ಪೋಷಕರಿಗೆ ಆಯ್ಕೆ ಸಂದರ್ಭದಲ್ಲಿ ಸರಿಯಾಗಿ ತಿಳಿಸದೇ ಇರುವುದರಿಂದ ಆಕ್ಷೇಪಣೆಗೆ ಕನಿಷ್ಠ ಮೂವತ್ತು ದಿನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಅರ್ಜಿಗಳ ಅದಲು- ಬದಲು: ನಗರ ಪ್ರದೇಶದ ಅರ್ಜಿಗಳು ಗ್ರಾಮಾಂತರಕ್ಕೂ ಗ್ರಾಮಾಂತರದ ಅರ್ಜಿಗಳು ನಗರ ಪ್ರದೇಶಕ್ಕೂ ನಕಲಿ ದಾಖಲೆ ಮುಖಾಂತರ ಸೇರಿವೆ. ಇದನ್ನು ಪರಿಶೀಲಿಸಿ ಅರ್ಹ ಮಕ್ಕಳಿಗೆ ಸೀಟು ಹಂಚಿಕೆ ಮಾಡಬೇಕು ಭ್ರಷ್ಟತೆಗೆ ಸಹಕಾರಿಯಾದ ಶಿಕ್ಷಣ ಇಲಾಖೆಯ ಬಿಇಓ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕಂದಾಯ ಇಲಾಖೆಯ ನೌಕರರನ್ನು ತಕ್ಷಣ ಕೆಲಸದಿಂದ ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು. ನಗರದ ಯುನೈಟೆಡ್ ಮತ್ತು ವಿಜಯ ಶಾಲೆಯಲ್ಲಿ ಸುಮಾರು 50 ಸೀಟುಗಳು ಬೋಗಸ್ ದಾಖಲೆಗಳಿಂದ ಕೂಡಿದ್ದು, ತಕ್ಷಣವೇ ಅದನ್ನು ಸರಿಪಡಿಸಲು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಡಿ.ವಿ. ಸುದರ್ಶನ್ ಬೇಲೂರು, ಕಾನೂನು ಸಲಹೆಗಾರ ಸಿ. ಕ್ರಾಂತಿ ಪ್ರಸಾದ್ ತ್ಯಾಗಿ, ಖಜಾಂಚಿ ಕೆ. ರಂಗಸ್ವಾಮಿ, ಜಗದೀಶ್ ಚೌಡಳ್ಳಿ, ಕೆ. ಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

