ಅಲೆಮಾರಿಗಳಲ್ಲಿ ಸಾಂಸ್ಕೃತಿಕ ಸಹಭಾಗಿತ್ವ ಕಲ್ಪಿಸಿ: ತಿಮ್ಮೇಗೌಡ
ಹಾಸನ: ಕರ್ನಾಟಕ ಜಾನಪದ ಪರಿಷತ್ತಿನ ಮೂಲ ಆಶಯದಂತೆ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇ ಗೌಡ ತಿಳಿಸಿದರು.
ಜಿಲ್ಲಾ ಜಾನಪದ ಪರಿಷತ್ತು ಮತ್ತು ತಾಲೂಕು ಘಟಕದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2015 ರ ಫೆಬ್ರವರಿ ಅವಧಿಯಲ್ಲಿ ಜಿಲ್ಲಾ ಮತ್ತು ತಾಲೂಕಿನ ಜಾನಪದ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳನ್ನು ನಾಡೋಜ ಎಚ್.ಎಲ್.ನಾಗೇಗೌಡ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಹಬ್ಬದ ವಾತಾವರಣದಂತೆ ಮೌಲ್ಯಿಕವಾಗಿ ಆಚರಿಸಬೇಕು ಎಂದರು.
ಜಾನಪದ ಸಂಸ್ಕೃತಿಯ ಮೂಲ ಬೇರುಗಳಾದ ಕಲಾವಿದರನ್ನು ಗುರುತಿಸಿ ಅವರಿಗೆ ನುರಿತ ತಜ್ಞರಿಂದ ತರಬೇತಿ ನೀಡಬೇಕು ಈ ಸಂಬಂಧ ತಗುಲುವ ವೆಚ್ಚಗಳಿಗೆ ಯಾವುದಾದರೂ ಸಂಘ ಸಂಸ್ಥೆಗಳ ಸಹಾಯವನ್ನು ಪಡೆದು ಪಾರದರ್ಶಕವಾಗಿ ನಿರ್ವಹಿಸುವುದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಸಂಸ್ಕೃತಿಯನ್ನು ಕ್ಷೇತ್ರ ಕಾರ್ಯಗಳ ಮೂಲಕ ಹುಡುಕಿ ಗಟ್ಟಿಯಾದ ರೀತಿಯಲ್ಲಿ ನೆಲೆಗೊಳಿಸಬೇಕು ಎಂದು ಹೇಳಿದರು.
ನಾಟಿ ವೈದ್ಯಪದ್ಧತಿಯಂತಹ ಅನೇಕ ಜಾನಪದ ಪ್ರಕಾರಗಳಿಗೆ ಮರುಜೀವ ನೀಡಬೇಕು. ಜಾನಪದ ಕ್ರೀಡೆಗಳನ್ನು ಗ್ರಾಪಂ ಅಧ್ಯಕ್ಷರು, ಸದಸ್ಯರ ನೆರವಿನಿಂದ ಏರ್ಪಡಿಸಬೇಕು. ಜಾತ್ರೆ, ಉತ್ಸವ ಕಾರ್ಯಕ್ರಮಗಳಲ್ಲಿ ಜಾನಪದ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ ಈ ಸಂಸ್ಕೃತಿಯನ್ನು ವಿಶಿಷ್ಟವಾಗಿ ರೂಪಗೊಳಿಸುವುದು. ಮಹಿಳೆಯರಿಗಾಗಿ ರಂಗೋಲಿ, ಸೋಬಾನೆ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾನಪದ ಜಗತ್ತಿಗೆ ಅವರನ್ನು ಕರೆದೊಯ್ಯುವ ಕೆಲಸ ಆಗಬೇಕು ಎಂದರು.
ಜಿಲ್ಲೆಯ ಪ್ರಸಿದ್ಧ ಕಲೆಗಳಾದ ತಂಬೂರಿ ಕರಪಾಲ, ಭಾಗವಂತಿಕೆ ಕಲೆಗಳನ್ನು ಹೆಚ್ಚು ಹೆಚ್ಚು ಶಕ್ತಿಯುತಗೊಳಿಸುವುದು ಅಗತ್ಯವಿದೆ. ಬುಡಬುಡಿಕೆ ಸುಡಗಾಡು ಸಿದ್ದರು, ಹಕ್ಕಿಪಿಕ್ಕಿ ಜನಾಂಗ, ಆದಿವಾಸಿ ಜನಾಂಗ ಹಾಗೂ ಇನ್ನಿತರೆ ಅಲೆಮಾರಿ ಜನಾಂಗಗಳನ್ನು ಒಂದೆಡೆಗೆ ಸೇರಿಸಿ ಸಾಂಸ್ಕೃತಿಕ ಸಹಭಾಗಿತ್ವವನ್ನು ಕಲ್ಪಿಸುವಂತಹ ಮುಖ್ಯ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಜಾನಪದ ಪರಿಷತ್ತಿನ ಕಾರ್ಯಕ್ರಮಗಳನ್ನು ವಿವರಿಸಿದರು. ಖಜಾಂಚಿ ಡಾ.ಐ.ಎಂ. ಮೋಹನ್ ಜಾನಪದ ತಜ್ಞ ಮೇಟಿಕೆರೆ ಹಿರಿಯಣ್ಣ ಹಾಗೂ ಸಮಿತಿಯ ಸದಸ್ಯರು ಸಭೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

