ಹಾಸನ

ಕಾರ್ಮಿಕರಿಗೆ ಕಾನೂನು ಜ್ಞಾನ ಅಗತ್ಯ

Published On :

ಹಾಸನ: ಕಾರ್ಮಿಕ ದಿನಾಚರಣೆಯನ್ನು ಗುರುವಾರ ಜಿಲ್ಲಾದ್ಯಂತ ನಾನಾ ಕಾರ್ಮಿಕ ಸಂಘಟನೆಗಳು ಆಚರಿಸಿದವು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಾರ್ಮಿಕ ಇಲಾಖೆ, ಹಿಮ್ಮತ್ ಸಿಂಗ್ ಕಂಪನಿ, ಸಿಐಟಿಯು ವತಿಯಿಂದ ಪ್ರತ್ಯೇಕವಾಗಿ ಕಾರ್ಮಿಕ ದಿನಾಚರಣೆ ಆಚರಿಸುವ ಮೂಲಕ ಕಾರ್ಮಿಕರಲ್ಲಿ ಅರಿವು ಮೂಡಿಸಲಾಯಿತು.
ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಬಗ್ಗೆ ಸೂಕ್ತವಾದ ಇರಬೇಕಾದ ಅರಿವು ಅಗತ್ಯ ಹಾಗೂ ಅನಿವಾರ್ಯ ಎಂದು ನ್ಯಾಯಾಧೀಶೆ ಎಚ್.ಜಿ.ವಿಜಯಕುಮಾರಿ ಹೇಳಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿ ಇರುವ ಹಿಮ್ಮತ್‌ಸಿಂಗ್ ಕಾರ್ಖಾನೆ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಬಹುಮುಖ್ಯವಾಗಿ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದರ ಮೂಲಕ ಇತರರಿಗೂ ಅದರ ಬಗ್ಗೆ ಅರಿವು ಮೂಡಿಸಬೇಕು. ಕಾನೂನು ಅಗತ್ಯತೆ ಇಂದು ಎಲ್ಲರಿಗೂ ಇದೆ ಅದರಲ್ಲೂ ಮಹಿಳೆಯರಿಗಾಗಿ ಇಂದು ಹಲವು ಕಾನೂನುಗಳು ಜಾರಿಗೆ ಬಂದಿದ್ದು, ಮಹಿಳೆಯರು ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ವಿವಿಧ ಸಮಿತಿ ರಚಿಸಿ: ಮಹಿಳೆಯರೇ ಹೆಚ್ಚಾಗಿ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಶಶಿ ವಿಹಾರ, ಆರೋಗ್ಯ ಸಮಸ್ಯೆ ನಿವಾರಣ ಘಟಕ, ಲೈಂಗಿಕ ಕಿರುಕುಳ ತಡೆ ಕುರಿತು ನಾಪಫಲಕ ಹಾಕುವುದು, ದೂರು ಸಮಿತಿ ಸೇರಿದಂತೆ ಹಲವು ಘಟಕಗಳನ್ನು ಸಂಸ್ಥೆಗಳು ಸ್ಥಾಪಿಸಬೇಕಾದ ಅಗತ್ಯತೆ ಇದೆ. ಜನ ಸಾಮಾನ್ಯರಿಗೆ ಕಾನೂನುಗಳ ಬಗ್ಗೆ ಮಾಹಿತಿ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕೆ.ಎನ್.ಪ್ರಹ್ಲಾದ್ ಮಾತನಾಡಿ, ನ್ಯಾಯಾಲಯವು ಪ್ರಸ್ತುತ ಎಲ್ಲಾ ವರ್ಗದ ಕಾರ್ಮಿಕರಿಗೆ ಅನುಕೂಲವಾಗುವ ಸಲುವಾಗಿ ನಾನಾ ಕಾಯ್ದೆಗಳನ್ನು ಜಾರಿಗೆ ತಂದಿದೆ. ಬಹುಮುಖ್ಯವಾಗಿ ಮೋಟಾರು ವಾಹನ ಕಾರ್ಮಿಕರ ಕಾಯ್ದೆ, ಪ್ಲಾಂಟೇಷನ್ ಕಾರ್ಮಿಕರ ಕಾಯ್ದೆ, ಕಟ್ಟಡ ಕಾರ್ಮಿಕರಿಗೆ ಸೇರಿದಂತೆ ಇನ್ನಿತರ ವರ್ಗದ ಕಾರ್ಮಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಕಾರ್ಮಿಕರ ಹಿತ ಕಾಪಾಡುವ ಮೂಲ ಉದ್ದೇಶದಿಂದಲೇ ಕಾಯ್ದೆಗಳನ್ನು ರಚನೆ ಮಾಡಲಾಗಿದ್ದು, ಕಾರ್ಮಿಕರ ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನಿಗದಿತ ವೇತನ ನೀಡಿ: 1948ರ ಸಮಾನ ವೇತನ ಕಾಯ್ದೆ ಅನ್ವಯ ಅಸಂಘಟಿತ ಹಾಗೂ ಸಂಘಟಿತ ಕಾರ್ಮಿಕರಿಗೆ ನಿಗದಿತ ವೇತನವನ್ನು ಸಂಸ್ಥೆಗಳು ಹಾಗೂ ಮಾಲೀಕರು ನೀಡಬೇಕು ಇಲ್ಲವಾದಲ್ಲಿ ಅಂತಹ ವ್ಯಕ್ತಿ ಅಥವಾ ಸಂಸ್ಥೆಗಳು ಶಿಕ್ಷೆಗೆ ಒಳಪಡಬೇಕಾಗುತ್ತದೆ. ಇದಲ್ಲದೆ ಪುರುಷರಿಗೆ ಸಮಾನವಾಗಿ ಕೆಲಸ ಮಾಡುವ ಮಹಿಳೆಯರಿಗೆ ಪುರುಷರಿಗೆ ನೀಡುವಷ್ಟೆ ವೇತನವನ್ನು ಸಮಾನವಾಗಿ ನೀಡಬೇಕು ಎಂದು ಹೇಳಿದರು.
ನ್ಯಾಯಾಧೀಶರಾದ ಪ್ರಕಾಶ್, ಬಿ.ಜಯಂತ್‌ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.