ಕಣತೂರು ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ
ಆಲೂರು: ತಾಲೂಕಿನ ಕಣತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಲವು ಹಳ್ಳಿಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಚೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಟರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಸತತ ಮಳೆಯಿಂದಾಗಿ ಟ್ರಾನ್ಸ್ಫಾರ್ಮ್ ಸುಟ್ಟುಹೋಗಿ ನಾಲ್ಕೈದು ದಿನಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ, ಕತ್ತಲೆಯಲ್ಲಿ ದಿನ ದೂಡುವಂತಾಗಿದೆ ಎಂದರು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
ಎಪಿಎಂಸಿ ಹಮಾಲಿ ಸಂಘದಿಂದ ಕಾರ್ಮಿಕ ದಿನಾಚರಣೆ
ಹಾಸನ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಎಪಿಎಂಸಿ ಹಮಾಲಿ ಸಂಘದ ವತಿಯಿಂದ ಇತ್ತೀಚೆಗೆ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು. ಸಂಘದ ಅಧ್ಯಕ್ಷ ಶೇಖರ್ ಅಧ್ಯಕ್ಷತೆಯಲ್ಲಿ ಎಪಿಎಂಸಿ ಅಧ್ಯಕ್ಷ ಎಚ್.ಎ. ವೇಣುಗೋಪಾಲ್, ವರ್ತಕರ ಸಂಘದ ಅಧ್ಯಕ್ಷ ಎಚ್.ಡಿ. ಗೋಪಾಲ್, ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ಬೋರೇಗೌಡ, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಂತೆಪೇಟೆ ಹಮಾಲಿ ಸಂಘದ ಅಧ್ಯಕ್ಷ ಅಬ್ದುಲ್ ಖಲೀಲ್ ಹಾಗೂ ಸಂಘದ ಸದಸ್ಯರು, ಹಮಾಲಿ ಸಂಘದ ಉಪಾಧ್ಯಕ್ಷ ಕೆ.ಟಿ. ಚಿಕ್ಕೇಗೌಡ, ಸಂಘದ ಮಾಜಿ ಅಧ್ಯಕ್ಷ ಎರೇಹಳ್ಳಿ ಶೇಖರ್, ನಾಗಣ್ಣ ಹಾಗೂ ಎಪಿಎಂಸಿ ವರ್ತಕ ಸಂಘದ ಹಲವು ಗಣ್ಯರು ಮತ್ತು ಪದಾಧಿಕಾರಿಗಳು ಇದ್ದರು. ಎಚ್.ವಿ. ರಮೇಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಬೇಲೂರಿನಲ್ಲಿ ಚಿನ್ನದ ವ್ಯಾಪಾರ ಬಲು ಜೋರು
ಬೇಲೂರು: ಅಕ್ಷಯ ತೃತೀಯ ದಿನವಾಗಿದ್ದ ಮೇ 2ರಂದು ಚಿನ್ನಾಭರಣ ಖರೀದಿಸಲು ಬಹುತೇಕ ಗ್ರಾಹಕರು ಪಟ್ಟಣದ ಚಿನ್ನಾಭರಣದ ಅಂಗಡಿಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪಟ್ಟಣದಲ್ಲಿರುವ 8 ಒಡವೆ ಅಂಗಡಿಗಳು ಬಹುತೇಕ ಭರ್ತಿಯಾಗಿದ್ದವು. ಬೆಳಿಗೆ 7 ಗಂಟೆಯಿಂದಲೇ ಅಂಗಡಿಗಳಲ್ಲಿ ವಹಿವಾಟು ಆರಂಭವಾಗಿತ್ತು. ಇಂಥ ವಿಶೇಷ ದಿನಗಳಲ್ಲಿ ರಾತ್ರಿ 10ರವರೆಗೆ ಗ್ರಾಹಕರು ವ್ಯಾಪಾರ ಮಾಡುತ್ತಲೇ ಇರುತ್ತಾರೆ ಎನ್ನುವ ಅಂಗಡಿ ಮಾಲೀಕರು, ಈ ವರ್ಷವೂ ಗ್ರಾಹಕರೂ ಹೆಚ್ಚು ಉತ್ಸಾಹದಿಂದ ಅಂಗಡಿಗಳಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು. ಅತ್ತ, ವಿಶೇಷವಾದ ದಿನ ಬಂಗಾರ ಖರೀದಿಸುತ್ತಿರುವುದರ ಬಗ್ಗೆಯೂ ಗ್ರಾಹಕರು ಹರ್ಷ ವ್ಯಕ್ತಪಡಿಸಿದರು. ಈ ಶುಭದಿನದಂತು ಬಂಗಾರ ಖರೀದಿಸಿದರೆ ಅದು ದ್ವಿಗುಣವಾಗುತ್ತದೆ ಎನ್ನುವ ಪ್ರತೀತಿ ಇರುವುದರಿಂದ ಈ ದಿನ ಬಂಗಾರ ಖರೀದಿಸಲು ಬಂದಿರುವುದಾಗಿ ಶಾರದಾ ಎಂಬ ಗ್ರಾಹಕರು ಹೇಳಿದರು.
ಫಲವತ್ತತೆ ಹೆಚ್ಚಿಸಲುಸಾವಯವ ಕೃಷಿ ಉತ್ತಮ
ರಾಮನಾಥಪುರ: ಭೂಮಿಯ ಫಲವತ್ತತೆ ಹೆಚ್ಚಿಸಲು ಒತ್ತಮ ಇಳುವರಿ ಪಡೆಯಲು ಸಾವಯವ ಕೃಷಿ ಉತ್ತಮ ವಿಧಾನ ಎಂದು ಅರ್ಡರ್ಸ್ ಸಂಸ್ಥೆಯ ಕ್ಷೇತ್ರಾಧಿಕಾರಿ ವಿ. ರಮೇಶ್ ತಿಳಿಸಿದರು. ರಾಮನಾಥಪುರ ರಾಮನಾಥಪುರ ಹೋಬಳಿ ವಡ್ಡರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೃಷಿ ಇಲಾಖೆ ಮತ್ತು ಪ್ರೇರಕ ಸಂಸ್ಥೆಯಾದ ಅರ್ಡರ್ಸ್ ಸಂಸ್ಥೆ ವತಿಯಿಂದ ಸಾವಯವ ಬಗ್ಗೆ ಅರಿವು ಶ್ರಮದಾನದ ಶಿಬಿರದಲ್ಲಿ ಅವರು ಮಾತನಾಡಿದರು. ಕೃಷಿ ಇಲಾಖೆ ಅಧಿಕಾರಿ ಹರೀಶ್ ಕುಮಾರ್ ಮತ್ತು ಮಂಜುನಾಥ್, ಸಮಿತಿಯ ಅಧ್ಯಕ್ಷ ಚಲುವರಾಜ್ ಸದಸ್ಯರಾದ ನಾಗರಾಜ್, ಸಣ್ಣಸ್ವಾಮಿ, ನಿಂಗಯ್ಯ, ನಾಗೇಶ್, ಉಷಾ, ನಾಗರತ್ನ, ಮುಂತಾದ ರೈತರು ಭಾಗವಹಿಸಿ ತಮ್ಮ ತಮ್ಮ ತಿಪ್ಪೇಗುಂಡಿಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ನಾಶಪಡಿಸಿ ತಿಪ್ಪೆಯನ್ನು ಪೂಜಿಸಿದರು.
ಹೊಳೆನರಸೀಪುರದಲ್ಲಿ ಮಕ್ಕಳ ಬೇಸಿಗೆ ಶಿಬಿರ
ಹೊಳೆನರಸೀಪುರ: ಪಟ್ಟಣದ ವಾಸವಿ ಮಹಿಳಾ ಮಂಡಳಿಯ ವತಿಯಿಂದ ಪುಟ್ಟ ಮಕ್ಕಳಿಗಾಗಿ ಒಂದು ವಾರದ ಬೇಸಿಗೆ ಶಿಬಿರವನ್ನು ಶುಕ್ರವಾರದಿಂದ ಆರಂಭಿಸಿತು. ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಸಣ್ಣ ಮಕ್ಕಳಿಗೆ ಆಟ ಪಾಠದ ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಯೋಗ ಶಿಕ್ಷಕ ನಿಂಗೇಗೌಡ ಅವರಿಂದ ಪ್ರಾತ್ಯಕ್ಷಿಕೆ ಪ್ರದರ್ಶನದ ಮೂಲಕ ಹೇಳಿಕೊಡಲಾಯಿತು. ಒಂದು ವಾರ ಕಾಲ ನಡೆಯಲಿರುವ ಬೇಸಿಗೆ ಶಿಭಿರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಶಿಬಿರ ನೇತೃತ್ವವನ್ನು ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಆಶಾ ಅರುಣ್ ಮತ್ತು ನಂದಿನಿ ದತ್ತಾತ್ರೇಯ ವಹಿಸಿದ್ದಾರೆ.
ವಾಣಿಜ್ಯ ಸಂಕೀರ್ಣಕ್ಕೆ ಮಳೆ ನೀರು ನುಗ್ಗಿ ನಷ್ಟ
ಬೇಲೂರು: ಮಳೆಯ ನೀರು ಅಂಗಡಿ ಮಳಿಗೆಗೆ ನುಗ್ಗಿ ಅವಾಂತರ ವಾಗಿರುವ ಘಟನೆ ಪಟ್ಟಣದ ವೈ.ಡಿ.ಎನ್. ಕಾಂಪ್ಲೆಕ್ಸ್ನಲ್ಲಿ ಇತ್ತೀಚೆಗೆ ನಡೆದಿದೆ.
ಪಟ್ಟಣದ ಕೆಂಪೇಗೌಡ ವೃತ್ತದಿಂದ ಎಸ್.ಬಿ.ಎಂ ಬ್ಯಾಂಕ್ವರೆಗೆ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಗುರುವಾರ ಬಿದ್ದಮಳೆಯಿಂದ ಬಂದ ನೀರೆಲ್ಲಾ ರಸ್ತೆಯಲ್ಲಿ ಹರಿದು ನೇರವಾಗಿ ವೈ.ಡಿ.ಎನ್ ವಾಣಿಜ್ಯ ಸಂಕೀರ್ಣದ ಅಂಗಡಿಗಳಿಗೆ ನುಗ್ಗಿ, ಅಂಗಡಿ ಮಾಲೀಕರು ಪರದಾಡುವ ಸ್ಥಿತಿ ನಿರ್ಮಾಣವಾಗಿ ಅಪಾರ ಪ್ರಮಾಣದ ನಷ್ಟ ಉಂಟಾಯಿತು.
ಈ ಸಂದರ್ಭದಲ್ಲಿ ಮಳಿಗೆ ಬಾಡಿಗೆದಾರರಾದ ಚೆಲುವ ರಾಜು, ಲೋಕೇಶ್, ರವಿ, ರಿಹನಾ ಪತ್ರಿಕೆಯೊಂದಿಗೆ ಮಾತನಾಡಿ ಮಳೆ ಬಂದಾಗಲೆಲ್ಲಾ ನೀರು ನಮ್ಮ ಅಂಗಡಿಗಳಿಗೆ ನುಗ್ಗುತ್ತದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಅದಷ್ಟು ಬೇಗ ಈ ಸಮಸ್ಯೆಯನ್ನು ಸರಿಪಡಿಸಿಕೊಡಬೇಕು ಎಂದರು.
ಜಲಾನಯನ ನಿರ್ವಹಣೆ ತರಬೇತಿ ಶಿಬಿರ
ಆಲೂರು: ತಾಲೂಕಿನ ಪಾಳ್ಯ ಗ್ರಾಮ ಪಂಚಾಯ್ತಿ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ, ಆಲೂರು ತಾಲೂಕು ಜಲಾನಯನ ಕಚೇರಿ ಆಶ್ರಯದಲ್ಲಿ ಇತ್ತೀಚೆಗೆ ಸಮಗ್ರ ಜಲಾನಯನ ನಿರ್ವಹಣೆ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎಂ. ಪುರುಷೋತ್ತಮ್ ಮಾತನಾಡಿದರು. ತಾಲೂಕು ಸಹಾಯಕ ಕೃಷಿ ಅಧಿಕಾರಿ, ಜಿಲ್ಲಾ ಅಭಿವೃದ್ಧಿ ಇಲಾಖೆಯ ಜಿ.ಆರ್. ಸುರೇಶ್ ಮಾತನಾಡಿ, ಜಿಲ್ಲಾ ನಯನ ಅಭಿವೃದ್ಧಿ ಯೋಜನೆಯಡಿಯಲ್ಲಿ ಎಲ್ಲಾ ಇಲಾಖೆಗಳ ಸಹಕಾರ ಪಡೆದು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುವುದು ಎಂದರು. ತಂಡದ ನಾಯಕ ಕಲ್ಯಾಣಕುಮಾರ್, ಜಲಾನಯನ ಇಲಾಖೆಯ ಸಹಾಯಕ ಗಣೇಶ್, ನಾಗೇಂದ್ರಪ್ಪ, ಧರ್ಮಪ್ಪ ಹಾಗೂ ನಟರಾಜ್ ಇದ್ದರು.
ಹೊಂಗೆರೆ ಗ್ರಾಮದಲ್ಲಿಂದು ದೇವಮ್ಮ ದೇಗುಲ ಉದ್ಘಾಟನೆ
ಹಾಸನ: ತಾಲೂಕಿನ ಹೊಂಗೆರೆ ಗ್ರಾಮದಲ್ಲಿ ನೂತನ ದೇವಮ್ಮ ದೇವಾಲಯದ ಉದ್ಘಾಟನೆ ಮೇ 4ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ದೇವಮ್ಮ ದೇವಿಯು ದಡದಹಳ್ಳಿ, ಬಂಡಿಹಳ್ಳಿ, ಹಲಸಿನಹಳ್ಳಿ, ಮಲ್ಲನಾಯ್ಕನಹಳ್ಳಿ, ಹೂವಿನಹಳ್ಳಿ ಗ್ರಾಮಗಳ ದೇವತೆಯಾಗಿದೆ. ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಪತ್ನಿ ಚನ್ನಮ್ಮ ಅವರು ದೇಗುಲ ಲೋಕಾರ್ಪಣೆ ಮಾಡಲಿದ್ದಾರೆ. ಕ್ಷೇತ್ರದ ಶಾಸಕ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಪತ್ನಿ ಭವಾನಿ, ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಹಾಸನ ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ಭಾಗವಹಿಸುವರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಹೊಂಗೆರೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಬಸವಣ್ಣ ಕಾಯಕ ತತ್ವ ಮನುಕುಲಕ್ಕೆ ಶ್ರೇಷ್ಠ
ಬೇಲೂರು: ಬಸವಣ್ಣನವರ ಕಾಯಕ ತತ್ವ ಮನುಕುಲಕ್ಕೆ ಶ್ರೇಷ್ಠವಾದುದು ಎಂದು ಅಖಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ತಿಳಿಸಿದರು. ತಾಲೂಕು ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ನಂತರ ಬಸವೇಶ್ವರ ವೃತ್ತದ ಬಳಿ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಹುಟ್ಟಿದ ಜಗದ ಬೆಳಕು ಬಸವಣ್ಣನವರ ತತ್ವ ಹಾಗೂ ಸಿದ್ಧಾಂತಗಳು ಎಂದಿಗೂ ಆದರ್ಶ ಎಂದರು. ವೀರಶೈವ ಮುಖಂಡರಾದ ಚಂದ್ರಶೇಖರ್,ವೀರುಪಾಕ್ಷ, ವಕೀಲ ರಾಜಶೇಖರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಗಿರೀಶ್, ವೀರಶೈವ ಯುವ ವೇದಿಕೆ ಅಧ್ಯಕ್ಷ ಹೆಬ್ಬಾಳು ಉಮಾಶಂಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ರವಿಕುಮಾರ್, ಪುರಸಭೆ ಅಧ್ಯಕ್ಷ ಬಿ.ಗಿರೀಶ್, ಅಣ್ಣೇಗೌಡ, ಶಿವಯ್ಯ, ಹಗರೆ ದಿಲೀಪ್,ಪುರಸಭೆ ಮುಖ್ಯಾಧಿಕಾರಿ ಬಸವರಾಜು, ಪುರಸಬಾ ಸದಸ್ಯ ಮಂಜುನಾಥ್ ಇನ್ನು ಮುಂತಾದವರು ಹಾಜರಿದ್ದರು.
ಬಸವಸ, ಕನಕದಾಸರ ಮಾರ್ಗದಲ್ಲಿ ಹೋರಾಟ ಮಾಡಿ
ಹೊಳೆನರಸೀಪುರ: ದನಿ ಇಲ್ಲದವರ ಪರ ಗಟ್ಟಿ ಧ್ವನಿಯಾಗಿ ಸಮಾನತೆಯ ಸ್ವಾತಂತ್ರ್ಯಕ್ಕಾಗಿ ದುಡಿದ ಬುದ್ಧ, ಬಸವ, ಕನಕದಾಸರ ಮಾರ್ಗದರ್ಶನದಡಿ ಹೋರಾಟ ಮಾಡಿದ ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್, ಬಾಬೂ ಜಗಜೀವನರಾಮ್ ಮಾರ್ಗದಲ್ಲೇ ನಾವೆಲ್ಲ ಸಾಗಬೇಕೆಂದು ಇಲ್ಲಿನ ಸ್ಫೂರ್ತಿ ಡಿ. ಇಡಿ ಕಾಲೇಜಿನ ಪ್ರಾಂಶುಪಾಲ ಎಂ.ಜೆ. ರತ್ನಾಕರ್ ನುಡಿದರು. ತಾಲೂಕಿನ ಕಡವಿನಹೊಸಹಳ್ಳಿ ಗ್ರಾಮದಲ್ಲಿ ಕೀರ್ತಿ- ಜಾಗೃತಿ ಯುವ ಕಲಾಸಂಘ (ರಿ), ಹಾಗೂ ದಂಡೋರ ರಿಸರ್ವೇಶನ್ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಪಂ ಸದಸ್ಯರಾದ ಕೆ.ಟಿ. ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಮಮತಾ ಗುರುಮೂರ್ತಿ, ಮಾಜಿ ಸದಸ್ಯರಾದ ಪಾಪಣ್ಣ, ದಿವಾಳಿಗೌಡ, ಸೋಮಶೇಖರ್ ಇತರರು ಇದ್ದರು. ಸುನಿಲ್ ಪ್ರಾರ್ಥಿಸಿದರು. ಮಹೇಶ್ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿ, ವೀರೇಶ್ ವಂದಿಸಿದರು.
ಜಾತಿ ಎಂಬುದು ಮಾನವ ಕಲ್ಪಿತ, ದೈವ ನಿರ್ಮಿತವಲ್ಲ
ಹಾಸನ: ಜಗತ್ತಿನಲ್ಲಿ ಜಾತಿ ಎಂಬುದು ನಿರ್ಮಿತವಾಗಿರುವುದು ಮಾನವ ಕಲ್ಪಿತವೇ ವರತು ದೈವ ನಿರ್ಮಿತವಲ್ಲ ಎಂದು ಧಾರವಾಡ ಜಿಲ್ಲೆ ಮತ್ತು ಹಾಸನ ಜಿಲ್ಲೆ ಶಿವಪುರ ಶ್ರೀಗುರು ಬಸವ ಮಹಾಮನೆ ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ. ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವೇಶ್ವರ ಜಯಂತ್ಯುತ್ಸವ ಅಂಗವಾಗಿ ಶ್ರೀ ವೀರಶೈವ ಸಂಘದಿಂದ ಏರ್ಪಡಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಶೈವ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ, ಕಾರ್ಯದರ್ಶಿ ಬಿ.ಎಂ. ಭುವನಾಕ್ಷ, ಸಹ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ನಗರಸಭೆ ಮಾಜಿ ಸದಸ್ಯೆ ಅನ್ನಪೂರ್ಣ, ಕೆಂಗೆರೆ ಗಂಗಾಧರಯ್ಯ, ಜಂಗಮ ಸಂಘದ ಚಂದ್ರಶೇಖರ್, ಶ್ರೀ ವೀರಶೈವ ನೌಕರರ ಸಂಘದ ಅಧ್ಯಕ್ಷ ಬಸವರಾಜ್ ಇತರರು ಇದ್ದರು.
ಸಿಡಿಲಿಗೆ ಟ್ರಾನ್ಸ್ಫಾರ್ಮರ್ ಭಸ್ಮ, ಟಿವಿಗಳಿಗೆ ಹಾನಿ
ಜಾವಗಲ್: ಗ್ರಾಮ ಪಂಚಾಯ್ತಿ ವ್ಯಾಪ್ತಿಯ 4ನೇ ವಾರ್ಡ್ಗೆ ಸೇರಿದ ದ್ಯಾಮೇನಹಳ್ಳಿ ಹಟ್ಟಿಯಲ್ಲಿ ಗುರುವಾರ ಸಂಜೆ ಭಾರಿ ಮಿಂಚು ಗುಡುಗು, ಸಿಡಿಲಿನಿಂದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಭಾಗದಲ್ಲಿರುವ 100 ಕೆ.ವಿ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿರುವುದಲ್ಲದೇ ಶಾಲೆಯ ಮೇನ್ಸ್ ವೈರ್ಗೂ ಶಾಲೆಯ ವೈರಿಂಗ್ ಪೂರ್ತಿಯಾಗಿ ಸುಟ್ಟು ಕರಕಲಾಗಿದೆ.
ಸಿಡಿಲು ಬಡಿದುದ್ದುರಿಂದ ಗ್ರಾಮದ 56ಕ್ಕೂ ಹೆಎಚ್ಚು ಟಿವಿ ಸುಟ್ಟು ಹೋಗಿವೆ. ಜೊತೆಗೆ ಗ್ರಾಮದ 810 ರೈತರ ಪಂಪ್ಸೆಟ್ಗಳು ಸುಟ್ಟು ಹೋಗಿವೆ. ಗ್ರಾಮದ 2 ಕಡೆ ವಿದ್ಯುತ್ ತಂತಿಗಳು ಬಿದ್ದು ಹೋಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾಲೆಯ ಮುಂಭಾಗದ ಟಿಸಿ ಶಾಲೆಯ ವ್ಶೆರಿಂಗ್ ವ್ಯವಸ್ಥೆಯನ್ನು ಕೂಡಲೇ ದುರಸ್ತಿ ಮಾಡಿಸಿಕೊಡುವಂತೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಡಿ.ಜಿ. ಅಣ್ಣಪ್ಪನಾಯಕ, ಮಾಜಿ ಗ್ರಾಪಂ ಸದಸ್ಯ ಸಣ್ಣರಾಮನಾಯ್ಕ, ಗ್ರಾಮಸ್ಥರಾದ ಗೋವಿಂದ ನಾಯಕ, ಡಿ.ಕೆ.ರವಿ, ಬಸವರಾಜನಾಯಕ, ಕುಮಾರನಾಯಕ ಮತ್ತಿತರರು ಆಗ್ರಹಿಸಿದ್ದಾರೆ.
ರೈತರ ತಂಗುದಾಣ ನಿರ್ಮಾಣಕ್ಕೆ ಶಾಸಕ ಬಾಲಕೃಷ್ಣ ಭರವಸೆ
ಚನ್ನರಾಯಪಟ್ಟಣ: ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ತಂದ ಸಂದರ್ಭದಲ್ಲಿ ಅವರಿಗೆ ವಿಶ್ರಾಂತಿ ಅಗತ್ಯವಿದ್ದು, ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರ ತಂಗುದಾಣ ಅಗತ್ಯವಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಪಟ್ಟಣದ ಎಪಿಎಂಸಿ ಆವರಣದಲ್ಲಿ ರು. 53.5 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆ ಮಳಿಗೆ, ಹರಾಜು ಕಟ್ಟೆ ಹಾಗೂ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಗೋವಿಂದರಾಜು, ಮಾಜಿ ಅಧ್ಯಕ್ಷ ಎಂ.ಬಿ ತಿಮ್ಮೇಗೌಡ, ನಿರ್ದೇಶಕರುಗಳಾದ ಧರ್ಮರಾಜು, ಶಿವಣಅಣ, ಶಿವನಂಜೇಗೌಡ, ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.
ನೀತಿ ಸಂಹಿತೆ ಇಲ್ಲ: ಏ.29ರಿಂದ ಸಡಿಲಗೊಂಡಿರುವ ಹಿನ್ನಲೆಯಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಈಗ ನೆರವೇರಿಸಲಾಗುತ್ತಿದೆ ಎಂದು ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಭಗೀರಥ ಜಯಂತ್ಯುತ್ಸವ
ಚನ್ನರಾಯಪಟ್ಟಣ: ಭಗೀರಥ ಉಪ್ಪಾರ ಯುವಕರ ಸಂಘದ ವತಿಯಿಂದ ಭಗೀರಥ ಜಯಂತೋತ್ಸವ ಕಾರ್ಯಕ್ರಮ ಮೇ 6ರಂದು ಬೆಳಗ್ಗೆ 11.30 ಗಂಟೆಗೆ ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ನಡೆಯಲಿದೆ ಎಂದು ನವೀನ್ ಕುಮಾರ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ಬೆಳಿಗ್ಗೆ 8ಕ್ಕೆ ಪಟ್ಟಣದ ಕೆರೆ ಬೀದಿಯಿಂದ ವೀರಭದ್ರ ಕುಣಿತ, ದೊಡ್ಡಮ್ಮ ತಂಡದವರಿಂದ ನಗಾರಿ, ನಾಸಿಕ್ ಡೋಲ್, ಪೂರ್ಣಕುಂಭ, ಮಂಗಳ ವಾದ್ಯದೊಂದಿಗೆ ಭಗೀರಥ ಮಹರ್ಷಿಯವರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷ ಸಿ.ಜಿ. ಮಂಜುನಾಥ್ ವಹಿಸಲಿದ್ದಾರೆ, ಮುಖ್ಯ ಭಾಷಣಕಾರರು ಉದಯಪುರ ಪ್ರಥಮ ದರ್ಜೆ ಪ್ರಾಂಶುಪಾಲ ನಂಜುಂಡಸ್ವಾಮಿ, ಅಥಿತಿಗಳು ರೇವಣ್ಣ, ಗೋಪಾಲೇಗೌಡ, ನೀಲಪ್ಪ, ಜನಾರ್ಧನ್, ಚಿಕ್ಕಣ್ಣ, ರಾಮೇಗೌಡ ಇನ್ನು ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

