ಹಾಸನ

ಪಟ್ಟುಬಿಡದ ಆಲೂಗಡ್ಡೆ ವರ್ತಕರು

Published On :

ಹಾಸನ: ತಮಗೆ ಇಂತಿಷ್ಟು ಬೆಲೆ ನಿಗದಿ ಮಾಡಿದರೆ ಮಾತ್ರ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಲು ಸಾಧ್ಯ. ಇಲ್ಲದಿದ್ದರೇ ಆಗಲ್ಲಾ.. ಎಂದು ಆಲೂಗಡ್ಡೆ ವರ್ತಕರು ಹಿಡಿದ ಪಟ್ಟಿಗೆ ಜಿಲ್ಲಾಧಿಕಾರಿಗಳು ಒಪ್ಪಲಿಲ್ಲ.  
ಇದರ ಪರಿಣಾಮ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಆಲೂಗಡ್ಡೆ ವರ್ತಕರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಆಲೂಗಡ್ಡೆ ಬೆಲೆ ನಿಗದಿ ಮಾಡಲು ಸಾಧ್ಯವಾಗಿಲ್ಲ. ಅಂತಿಮವಾಗಿ ಸಭೆ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಸೋಮವಾರಕ್ಕೆ ಸಭೆ ಮುಂದೂಡಿದರು.
ವರ್ತಕರು ಈ ಬಾರಿ ಕ್ವಿಂಟಾಲ್ ಬಿತ್ತನೆ ಆಲೂಗಡ್ಡೆಗೆ ರು. 2,200ಕ್ಕಿಂತ ಕಡಿಮೆ ಬೆಲೆಗೆ ಮಾರಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಹಿಂದೆ ಕ್ವಿಂಟಾಲ್‌ಗೆ ರು. 1,400 ನಿಗದಿ ಮಾಡಲಾಗಿತ್ತು. ಅಷ್ಟಕ್ಕೇ ಮಾರಾಟ ಮಾಡಿ ಎಂದರು. ವರ್ತಕರು ಅಷ್ಟಕ್ಕೆ ಮಾರಿದರೇ ಸಿಕ್ಕಾಪಟ್ಟೆ ನಷ್ಟವಾಗುತ್ತದೆ. ಸಾರಿಗೆ ವೆಚ್ಚವೂ ಸಿಗುವುದಿಲ್ಲ ಎಂದು ವಾದಿಸಿದರು.
ಆದರೆ, ವರ್ತಕರಿಗೆ ಮತ್ತೊಮ್ಮೆ ಯೋಚಿಸಲು ಸೂಚಿಸಿದ ಜಿಲ್ಲಾಧಿಕಾರಿ ಸಭೆಯನ್ನು ಮೇ 5 ಕ್ಕೆ ಮುಂದೂಡಿದರು.
ಲಾಭ- ನಷ್ಟ ಚಿಂತನೆ ಬೇಡ: ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಜಿಲ್ಲೆಯಲ್ಲಿ ಆರ್ಥಿಕ ಬೆಳೆಯಾದ ಆಲೂಗೆಡ್ಡೆ ಬೆಳೆ ಬೆಳೆಯಲು ರೈತರು ಮುಂದಾಗುತ್ತಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ರೈತರಿಗೆ ಅನುಕೂಲವಾಗುವ ರೀತಿ ಬಿತ್ತನೆ ಬೀಜದ ಬೆಲೆ ನಿಗದಿಪಡಿಸುವ ಮೂಲಕ ನೆರವಾಗುವಂತೆ ಆಲೂಗಡ್ಡೆ ವರ್ತಕರಿಗೆ ಸೂಚಿಸಿದರು.
ಜಿಲ್ಲಾಡಳಿತ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಈ ಸಭೆ ನಡೆಸುತ್ತಿದ್ದು, ವರ್ತಕರು ಕೇವಲ ಲಾಭ- ನಷ್ಟದ ಬಗ್ಗೆ ಅಲೋಚನೆ ಮಾಡುವ ಬದಲಾಗಿ ರೈತರ ಯೋಗಕ್ಷೇವು ಕುರಿತು ಚಿಂತಿಸಿ ಸೌಹಾರ್ಧಯುತವಾಗಿ ರೈತರಿಗೆ ಸಹಕರಿಸಿ ಬಿತ್ತನೆ ಬೀಜ ಒದಗಿಸಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ತಿಳಿಸಿದರು.
ಬಿತ್ತನೆ ಬೀಜ ಮಾರಾಟದಿಂದ ವರ್ತಕರಿಗೆ ನಷ್ಟವಾದರೆ ಆಲೂಗಡ್ಡೆ ಬೆಳೆಯಲ್ಲಿ ರೈತರಿಗೆ ನಷ್ಟವಾದರೆ ಅವನ ಜೀವವೇ ಹೋಗುತ್ತದೆ. ಈ ನಿಟ್ಟಿಲ್ಲಿ ಮಾನವೀಯತೆ ಬಹುಮುಖ್ಯ ಎಂದರು. ಕಳೆದ ಬಾರಿ ಬಿತ್ತನೆ ಬೀಜವನ್ನು ಒಂದು ಕೆಜಿಗೆ ರು. 14ಗಳಿಗೆ ಮಾರಾಟ ಮಾಡಿದ್ದು, ಈ ಬಾರಿ ಒಂದು ಕೆಜಿಗೆ ರು. 20ಗಳಿಗೆ ಎಂದರೆ ರೈತರಿಗೆ ತುಂಬ ತೊಂದರೆಯಾಗುತ್ತದೆ.ಈ ನಿಟ್ಟಿನಲ್ಲಿ ಯೋಚಿಸಿ ತಮ್ಮ ನಿರ್ಧಾರವನ್ನು ಮೇ 5ರಂದು ನಡೆಯುವ ಸಭೆಯಲ್ಲಿ ತಿಳಿಸುವಂತೆ ವರ್ತಕರಿಗೆ ಹೇಳಿದರು.
ಅಧಿಕಾರಿಗಳಿಗೆ ಸೂಚನೆ: ಬಿತ್ತನೆ ಬೀಜ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದು ಮಾರಾಟವಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಅಲ್ಲದೇ, ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ನಿಗಾವಹಿಸಿ ಅಧಿಕಾರಿಗಳು ಉಸ್ತುವಾರಿವಹಿಸುವಂತೆ ತಿಳಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಆಲೂಗಡ್ಡೆ ಬೆಳೆ, ರಿಯಾಯಿತಿ ದರದಲ್ಲಿ ಔಷಧಿಗಳು ದೊರೆಯುವ ಕುರಿತು ಅರಿವು ಮೂಡಿಸಲು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಕೀಲ್ ಅಹಮದ್, ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಹಾಗೂ ವರ್ತಕರು ಸಭೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.