ಸಾಮಾಜಿಕ ಬಹಿಷ್ಕಾರಕ್ಕೆ ತೆರೆ
ಕ.ಪ್ರ. ವಾರ್ತೆ , ಬೇಲೂರು , ಮೇ 3
ಕೆಳಹಳ್ಳಿ ಗ್ರಾಮದಲ್ಲಿ ಮುತ್ತಿನಮ್ಮ ದೇಗುಲಕ್ಕೆ ಮುಜರಾಯಿ ಇಲಾಖೆಯಿಂದ ಬೇರೊಬ್ಬ ಪೂಜಾರಿಯನ್ನು ನೇಮಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದು, ಇದರಿಂದ ಗ್ರಾಮದ ಹಾಲಪ್ಪ ಕುಟುಂಬದವರಿಗೆ ಹಾಕಿದ್ದ ಸಾಮಾಜಿಕ ಬಹಿಷ್ಕಾರ ಪ್ರಕರಣಕ್ಕೆ ತೆರೆ ಎಳೆದಂತಾಗಿದೆ.
ತಾಲೂಕಿನ ನಾರಾಯಣ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆಳಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಯಾದ ಮುತ್ತಿನಮ್ಮ ದೇವರ ಪೂಜೆ ನೆರವೇರಿಸುತ್ತಿದ್ದ ಪರಿಶಿಷ್ಟ ಜನಾಂಗದ ಹಾಲಪ್ಪ ಎಂಬುವರು ಐದಾರು ತಿಂಗಳಿಂದ ಪೂಜೆಯನ್ನು ಮಾಡದೆ ಕೈ ಬಿಟ್ಟಿದ್ದರು. ಇದರಿಂದ ಕಾಲೋನಿ ನಿವಾಸಿಗಳು ಹಾಗೂ ಇತರೆ ಜನಾಂಗದವರು ಹಾಲಪ್ಪನವರನ್ನು ಅಘೋಷಿತ ಬಹಿಷ್ಕಾರ ಮಾಡಿದ್ದರು.
ಸಮಸ್ಯೆ ಆಲಿಸಿ ತಹಸೀಲ್ದಾರ್: ಗ್ರಾಮಸ್ಥರ ಬಹಿಷ್ಕಾರಕ್ಕೆ ಮನನೊಂದು ತಮ್ಮ ನೋವನ್ನು ಹಾಲಪ್ಪ ತೋಡಿಕೊಂಡಿದ್ದರು. ಶನಿವಾರ ಬಹಿಷ್ಕಾರದ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ತಾಲೂಕು ಆಡಳಿತ, ರಕ್ಷಣಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಹಾಲಪ್ಪ ಹಾಗೂ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ಎರಡೂ ಕಡೆಯ ಸಮಸ್ಯೆ ಆಲಿಸಿದರು.
ತಾಲೂಕಿನ ನಾರಾಯಣ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆಳಹಳ್ಳಿ ಗ್ರಾಮಕ್ಕೆ ತಹಸೀಲ್ದಾರ್ ಚೌಡಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಗಣೇಶ್, ಸಬ್ ಇನ್ಸ್ಪೆಕ್ಟರ್ ಅಶ್ವಿನ್ ಕುಮಾರ್, ಸಮಾಜ ಕಲಾಣ ಇಲಾಖೆ ಅಧಿಕಾರಿ ಲಕ್ಷ್ಮೇಗೌಡ, ಗ್ರಾಮ ಲೆಕ್ಕಾಧಿಕಾರಿ ರೇಖಾ ಇತರರು ಗ್ರಾಮಕ್ಕೆ ಭೇಟಿ ನೀಡಿ ಬಹಿಷ್ಕಾರಕ್ಕೊಳಗಾಗಿರುವ ಹಾಲಪ್ಪ ಕುಟುಂಬ ಹಾಗೂ ಗ್ರಾಮಸ್ಥರೊಡನೆ ಚರ್ಚಿಸಿದರು.
ತಹಸೀಲ್ದಾರ್ ಚೌಡಯ್ಯನವರೊಂದಿಗೆ ಮಾತನಾಡಿದ ಗ್ರಾಮಸ್ಥರು, ಗ್ರಾಮ ದೇವತೆ ಮುತ್ತಿನಮ್ಮ ದೇವರನ್ನು ತಲತಲಾಂತರದಿಂದ ಹಾಲಪ್ಪ ಕುಟುಂಬದವರು ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದು ಬಿಟ್ಟು ಈವರೆಗೆ ಬೇರೆಯವರು ದೇಗುಲದ ಗರ್ಭಗುಡಿ ಪ್ರವೇಶ ಮಾಡಿರುವುದಿಲ್ಲ. ಆದರೆ ಈಗ ಐದಾರು ತಿಂಗಳ ಹಿಂದೆ ಹಾಲಪ್ಪ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಬೆನ್ನಲ್ಲೇ ತಾವು ಗ್ರಾಮ ದೇವತೆ ಪೂಜೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎಂದು ಆರೋಪಿಸಿದರು.
ಬಹಿಷ್ಕಾರ ಮಾಡಿರಲಿಲ್ಲ: ತಲೆತಲಾಂತರದಿಂದ ಪೂಜೆಯನ್ನು ಹಾಲಪ್ಪ ಕುಟುಂಬ ಮಾಡಿಕೊಂಡು ಬಂದಿದೆ. ಅಲ್ಲದೇ, ಪೂಜೆಯ ಸಲುವಾಗಿ ಅವರಿಗೆ 3 ಎಕರೆ ಗದ್ದೆ ಬಿಟ್ಟು ಕೊಡಲಾಗಿದೆ. ಒಂದು ಪಕ್ಷ ಅವರ ಕೈಯಲ್ಲಿ ಪೂಜೆ ಮಾಡಲು ಆಗದಿದ್ದರೆ ಬೇರೆಯವರನ್ನು ಅವರು ನೇಮಿಸಿ ಅವರಿಗೆ ಸೂಕ್ತವಾದ ಸೌಕರ್ಯ ಕಲ್ಪಿಸಿದರೆ ತಮ್ಮ ಅಭ್ಯಂತರವೇನೂ ಇಲ್ಲ. ಅದು ಬಿಟ್ಟು ಏಕಾಏಕಿ ಪೂಜೆಯನ್ನು ನಿಲ್ಲಿಸಿದರೆ ತಾವು ಅವರು ಆಡುವ ಯಾವ ನಾಟಕಕ್ಕೂ ಬಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಗ್ರಾಮಸ್ಥರು ಹಾಲಪ್ಪ ಕುಟುಂಬವನ್ನು ಬಹಿಷ್ಕಾರ ಮಾಡಿಲ್ಲ. ಆದರೆ ಒಂದೆರಡು ದಿನದಿಂದ ಅವರೊಂದಿಗೆ ಮಾತನಾಡಿರಲಿಲ್ಲ ಅಷ್ಟೆ ಎಂದರು.
ಅಂತಿಮ ನಿರ್ಧಾರ: ಈ ಬಗ್ಗೆ ಹಾಲಪ್ಪ ಮಾತನಾಡಿ, ತಮ್ಮ ಕೌಟುಂಬಿಕ ಸಮಸ್ಯೆಯಿಂದ ತಾವು ಕ್ರಿಶ್ಚಿಯನ್ ಜಾತಿಗೆ ಮತಾಂತರಗೊಂಡಿರುವುದು ನಿಜ. ತಮಗೆ ದೇಗುಲ ವತಿಯಿಂದ ಯಾವುದೇ ಗದ್ದೆ ಬಿಟ್ಟುಕೊಟ್ಟಿಲ್ಲ. ಗ್ರಾಮದ ಎಲ್ಲರೂ ಗೋಮಾಳದಲ್ಲಿ ತಲಾ 3 ಎಕರೆ ಜಾಗ ಹಂಚಿಕೊಂಡಿದ್ದಾರೆ. ತಾವು ಇನ್ನು ಮುಂದೆ ಯಾವುದೇ ಕಾರಣಕ್ಕೂ ಗ್ರಾಮ ದೇವತೆಯ ಪೂಜೆಯನ್ನು ಮಾಡುವುದಿಲ್ಲ. ಇದು ನಮ್ಮ ಅಂತಿಮ ನಿರ್ಧಾರ ಎಂದರು.
ತಹಸೀಲ್ದಾರ್ ಚೌಡಯ್ಯ ಮಾತನಾಡಿ, ಹಾಲಪ್ಪ ದೇವಿಯ ಪೂಜೆ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಹಾಲಪ್ಪ ಅವರ ವೈಯುಕ್ತಿ ವಿಷಯ. ಈ ಬಗ್ಗೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆಯ್ಕೆಯ ಸ್ವಾತಂತ್ರ್ಯವಿದೆ. ಇಲ್ಲಿನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರುವುದರಿಂದ ಗ್ರಾಮ ದೇವತೆ ಪೂಜೆಗೆ ಬೇರೊಬ್ಬ ಪೂಜಾರಿ ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ಅವರ ಈ ಮಾತಿಗೆ ಎಲ್ಲರೂ ಒಪ್ಪಿಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

