ಹಾಸನ

ಹೆಚ್ಚಿದ ದ್ವಿಚಕ್ರ ವಾಹನ, ಪೊಲೀಸರಿಗೆ ತಲೆನೋವು

Published On :

ಅರಸಿಕೆರೆ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪಾದಚಾರಿಗಳಿಗೆ ಸುಲಲಿತ ಓಡಾಟಕ್ಕಾಗಿ, ರಸ್ತೆಗಳ ಎರಡು ಬದಿಯಲ್ಲಿ ತೆರವುಗೊಳಿಸಿದರೂ ಸಹ, ದ್ವಿಚಕ್ರ ವಾಹನಗಳಿಂದ ಕಿರಿಕಿರಿ ಹೆಚ್ಚಾಗುತ್ತಿದೆ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಸಮೀಪ ಬಿ.ಎಚ್. ರಸ್ತೆಯ ಎರಡೂ ಬದಿ, ದ್ವಿಚಕ್ರವಾಹನಗಳು ಸಾಲಾಗಿ ನಿಂತಿದ್ದು, ಈ ವಾಹನಗಳ ಮಾಲೀಕರು ಬಹುತೇಕ ಶಾಪಿಂಗ್‌ಗಾಗಿ ಬಂದವರಲ್ಲ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿನ ಪಾರ್ಕಿಂಗ್ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದರೆ ಪಾರ್ಕಿಂಗ್ ಚಾರ್ಜ್ ನೀಡಬೇಕಾಗುತ್ತದೆ ಎಂದು,  ರಸ್ತೆ ಬದಿ ಬೆಳಿಗ್ಗೆಯೇ ನಿಲ್ಲಿಸಿ ಪರ ಸ್ಥಳಗಳಿಗೆ ಕರ್ತವ್ಯಕ್ಕೆ ತೆರಳಿ ನಂತರ ಸಂಜೆ ಕೊಂಡೊಯ್ಯುತ್ತಾರೆ.  ಏಕೆಂದರೆ ಬೆಳಗ್ಗೆಯಿಂದ ಸಂಜೆಯವರೆಗೆ ಈ ಸ್ಥಳದಲ್ಲಿ ವಾಹನ ಸಂಚಾರ ನಿಯಂತ್ರಿಸಲು ಆರಕ್ಷಕರು ಇದ್ದೇ ಇರುತ್ತಾರೆ. ನಮ್ಮ ವಾಹನವನ್ನೂ ಕಾಯುತ್ತಾರೆ ಎಂಬ ಅನಾಗರೀಕ ಬುದ್ದಿವಂತಿಕೆ ಅವರದ್ದು. ಕರ್ತವ್ಯ ನಿರ್ವಹಿಸುವ ಪೇದೆಗಳಿಗೂ ವಾಹನಗಳಿಂದ ತಲೆನೋವು ತಪ್ಪಿದ್ದಲ್ಲ. ಶಾಪಿಂಗ್‌ಗೆಂದು ನಂತರ ಬರುವ ದ್ವಿಚಕ್ರ ವಾಹನಗಳ ಸವಾರರು ಈ ವಾಹನಗಳ ಹಿಂದೆಯೇ ನಿಲ್ಲಿಸುತ್ತಾರೆ. ಪೇದೆಗಳು ಪ್ರಶ್ನಿಸಿದರೆ ಎರಡೇ ನಿಮಿಷ ಎಂದು ಅಂಗಡಿಯತ್ತ ತೆರಳುತ್ತಾರೆ. ಬಸ್ ನಿಲ್ದಾಣದ ಸಮೀಪ ಬಿ.ಎಚ್. ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ನಿಲುಗಡೆಯ ಸಮಯವನ್ನು ನಿಗದಿಪಡಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆ.
- ರಮೇಶ್ ಕುಮಾರ್, ಅಂಬರೀಶ್, ರಾಜೇಂದ್ರ
ಎಸ್.ಪಿ.ಕಚೇರಿ ಮುಂದೆ ಟ್ರಾಫಿಕ್ ಜಾಮ್
ಹಾಸನ ನಗರದಲ್ಲಿ ಮೊದಲೇ ಟ್ರಾಫಿಕ್ ವ್ಯವಸ್ಥೆ ಅಧ್ವಾನ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ನಗರದ ಜನನಿಬಿಡ ಆರ್.ಸಿ. ರಸ್ತೆಯಲ್ಲಿ ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪೊಲೀಸ್ ಇಲಾಖೆಗೆ ಸೇರಿದ  ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿರುತ್ತದೆ.
ಸೋಮವಾರ ಮಧ್ಯಾಹ್ನ 12.30ರ ಹೊತ್ತಿನಲ್ಲಿ ಇಲ್ಲಿ 40ಕ್ಕೂ ಹೆಚ್ಚು ಪೊಲೀಸ್ ವಾಹನಗಳು ರಸ್ತೆ ಬದಿಯಲ್ಲಿ ನಿಂತಿದ್ದವು. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಪಾದಚಾರಿಗಳು ಓಡಾಡಲು ಕಷ್ಟ ಸಾಧ್ಯವಾಗಿತ್ತು. ವಾಹನಗಳ ಬೇಕಾಬಿಟ್ಟಿ ನಿಲುಗಡೆಯಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂದಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಸಿಬ್ಬಂದಿಗೆ ಈ ಕುರಿತು ಸೂಚನೆ ನೀಡುವುದು  ಸೂಕ್ತವಲ್ಲವೇ? ಈ ಬಗ್ಗೆ ಎಸ್‌ಪಿ ಗಮನ ಹರಿಸಬೇಕು.
- ಗಣೇಶ್ ಕುಮಾರ್, ಎಂ. ಎಚ್. ಪ್ರಸಾದ್.
ನೀರು ಪೋಲು
ಬೇಲೂರು ತಾಲೂಕಿನ ಯಗಚಿ ಜಲಾಶಯ ದಿಂದ ಅರಸೀಕೆರೆ ತಾಲೂಕಿನ 52 ಗ್ರಾಮಗಳಿಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಿದ್ದು ಮಾರ್ಗ ಮಧ್ಯೆ ಕಲ್ಲಹಳ್ಳಿ ಅರಣ್ಯದಲ್ಲಿ ಪೈಪ್‌ನಿಂದ ನೀರು ಸೋರಿಕೆಗೊಂಡ ಪರಿಣಾಮದಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವವಿರುವುದರಿಂದ ಇಲ್ಲಿನ ಕೊಳಕು ನೀರನ್ನೆ ಬಳಸಿಕೊಳ್ಳಬೇಕಾದ ದುಸ್ಥಿತಿ ಇದೆ. ಅರಸೀಕೆರೆ ತಾಲ್ಲೂಕಿನ 52 ಗ್ರಾಮಗಳಲ್ಲಿ ಫ್ಲೋರೈಡ್ ಮಿಶ್ರಿತ ನೀರು ಬರುತ್ತಿದೆ ಎಂದು ಸರ್ವೇ ಮೂಲಕ ತಿಳಿದು ಬಂದ ಹಿನ್ನಲೆಯಲ್ಲಿ ಈ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಬೇಲೂರಿನ ಯಗಚಿ ಜಲಾಶದಲ್ಲಿ ನೀರನ್ನು ತೆಗೆದುಕೊಂಡು ಹಳೆಬೀಡು ಮಾರ್ಗವಾಗಿ ಅರಸೀಕೆರೆ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ತೆಗೆದುಕೊಂಡು ಹೋಗಲಾಗಿದೆ. ಆದರೆ ಈ ಮಾರ್ಗದಲ್ಲಿ ಪೈಪ್ ಅಳವಡಿಸುವ ಸಂದರ್ಭದಲ್ಲಿ ಪೈಪ್‌ಗಳನ್ನು ಸರಿಯಾಗಿ ಜೋಡಿಸಿ ಲ್ಲದ ಕಾರಣ ಹೆಬ್ಬಾಳು ಸಮೀಪದ ಕಲ್ಲಹಳ್ಳಿ ಅರಣ್ಯದಲ್ಲಿ ಸುಮಾರು 20  ಗ್ರಾಮಗಳಿಗೆ ಪೂರೈಕೆಯಾಗುವ ಕುಡಿಯುವ ನೀರು ಪೋಲಾಗುತ್ತಿದೆ. ಅಲ್ಲದೇ, ಈ ಟ್ಯಾಂಕ್‌ನಲ್ಲಿ ಜಾನುವಾರುಗಳು ನೀರು ಕುಡಿಯುವುದು ಹಾಗೂ ಮಕ್ಕಳು ಈಜುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ಬದಿಯಲ್ಲಿ ಪ್ರಯಾಣ ಮಾಡಿದರೂ ಇತ್ತ ಕಡೆ ಗಮನ ಹರಿಸಿಲ್ಲ. ಸುಮಾರು 20 ಗ್ರಾಮಕ್ಕೆ ಪೂರೈಕೆಯಾಗುವ ನೀರನ್ನು ಹಳೇಬೀಡು ಹತ್ತಿರ ಕುಡಿಯುವ ನೀರು ಇಲ್ಲದೇ, ತೀವ್ರ ಅಭಾವದಲ್ಲಿ ಇರುವ ಗ್ರಾಮಗಳಿಗೆ ನೀಡಬಹುದಾಗಿತ್ತು. ಅಧಿಕಾರಿಗಳ ಮೃಧು ಧೋರಣೆಯಿಂದ ನೀರು ಪೋಲಾಗುವುದಕ್ಕೆ ಕಾರಣವಾಗಿದೆ.  
- ಮಹಾದೇವಪ್ಪ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರು
ಇಲ್ಲೊಂದು ಅವೈಜ್ಞಾನಿಕ ರಸ್ತೆ ತಡೆಗೋಡೆ
ಚನ್ನರಾಯಪಟ್ಟಣ ಹೊರ ವರ್ತುಲ ರಸ್ತೆಯಾದ ಶೆಟ್ಟಿಹಳ್ಳಿ ಹಾಗೂ ಬರಗೂರು ಹ್ಯಾಂಡ್‌ಪೋಸ್ಟ್ ವರೆಗೆ ನಿರ್ಮಿಸಿರುವ ರಸ್ತೆಯ ಆರಂಭದ ಶೆಟ್ಟಿಹಳ್ಳಿ ವೃತ್ತದ ಬಳಿ ನೀರು ಸರಾಗವಾಗಿ ಚಲಿಸುವ ಉದ್ದೇಶದಿಂದ ಚರಂಡಿ ನಿರ್ಮಿಸಲಾಗಿದೆ. ಆದರೆ ಚರಂಡಿ ಹಾಗೂ ರಸ್ತೆ ತಡೆಗೋಡೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಅಪಘಾತದ ಸ್ಥಳವಾಗಿದೆ.
ರಸ್ತೆ ಆರಂಭವಾಗಿ ವರ್ಷಗಳಾದರೂ ವ್ಯವಸ್ಥಿತವಾಗಿ ಚರಂಡಿ ನಿರ್ಮಿಸಿ ರಲಿಲ್ಲ, ವೃತ್ತದ ಸಮೀಪವೇ ನಂದಿನಿ ಹೈಟೆಕ್ ಹಾಲಿನ ಉತ್ಪನ್ನ ಘಟಕವಿದ್ದು ಇಲ್ಲಿಂದ ಹರಿದು ಬರುವ ನೀರು ಹಾಗೂ ರಸ್ತೆ ನೀರು ಸೇರಿ ಕೆಲವು ಮನೆಗಳಿಗೆ ನೀರು ನುಗ್ಗುತ್ತಿದ್ದುದರಿಂದ ಚರಂಡಿ ಯನ್ನು ಇತ್ತೀಚೆಗೆ ನಿರ್ಮಿಸಿದ್ದಾರೆ. ಆದರೆ ಚರಂಡಿ ಪಕ್ಕವೇ ವೃತ್ತದ ರಸ್ತೆ ತಡೆಗೋಡೆ ಇದ್ದು ಇದನ್ನು ಯೋಜಿತವಾಗಿ ನಿರ್ಮಿಸಿಲ್ಲ. ತಡೆ ಗೋಡೆಯ ಕಂಬಿಗಳು ಬಿದ್ದು ಹೋಗಿರುವುದರಿಂದ ಭಾನುವಾರ ಬೆಳಗ್ಗೆ ಇಂಡಿಕಾ ಕಾರು ಚರಂಡಿಯ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಹೆಚ್ಚಿನ ಗಾಯಗಳಾಗಿಲ್ಲ.
ವೃತ್ತದಲ್ಲಿ ಹಾಕಿರುವ ರಸ್ತೆ ಉಬ್ಬುಗಳಲ್ಲಿ ಕೆಲವು ವಾಹನಗಳು ನಿಧಾನವಾಗಿ ಚಲಿಸಿದರೆ, ಕೆಲವು ಖಾಸಗಿ ಹಾಗೂ ಕ.ರಾ.ರ. ಸಾರಿಗೆ ಸಂಸ್ಥೆಯ ಬಸ್ಸುಗಳು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿವೆ. ಈ ಉಬ್ಬುಗಳಿಗೆ ಬಿಳಿ ಬಣ್ಣ ಹಾಕಿರುವುದು ಮಾಸಿದ್ದು ಕೂಡಲೇ ಹೊಸದಾಗಿ ಬಣ್ಣ ಬಳಿಯಬೇಕು. ಇದರೆ ಜೊತೆ ವೃತ್ತದಲ್ಲಿ ಹಾಕಿರುವ ಹೈಮಾಸ್ಟ್ ದೀಪ ಕೆಲವು ವೇಳೆ ಹೊತ್ತಿರುವುದಿಲ್ಲ, ರಾತ್ರಿ ನಿರಂತರವಾಗಿ ಹೈಮಾಸ್ಟ್ ದೀಪ ಹೊತ್ತಿಕೊಳ್ಳುವಂತೆ ನೋಡಿಕೊಳ್ಳಬೇಕು. ಇದರಿಂದ ನಡೆಯುವ ಅಪಘಾತ ಕಡಿಮೆ ಮಾಡಬಹುದು.  
-  ಚನ್ನಪ್ಪಗೌಡ, ಗಿರೀಶ್ ಕುಮಾರ್, ಯತೀಶ್ ಕುಮಾರ್ ಜೈನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.