'ಚೌಡೇಶ್ವರಿ ಎಲ್ಲರ ಆರಾಧ್ಯ ದೈವ'
ಸಕಲೇಶಪುರ: ಕಾಗಿನಹರೆ ಚೌಡೇಶ್ವರಿ ದೇವಿ ಎಲ್ಲ ಜಾತಿ, ಜನಾಂಗಗಳು ಪೂಜಿಸುವ ಆರಾಧ್ಯ ದೈವ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಇತ್ತೀಚೆಗೆ ತಾಲೂಕಿನ ಕಾಗಿನಹರೆ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೂಜೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವದಂತಿ ಸುಳ್ಳು: ಪರಿಶಿಷ್ಠ ಜಾತಿ ಜನ ದೇವಿಯ ದರ್ಶನ ಮಾಡುವಂತಿಲ್ಲ ಎಂಬ ವದಂತಿ ತೀವ್ರ ವಿಷಾದನೀಯ. ತೀರಾ ಹಿಂದುಳಿದ ಜನಾಂಗವಾದ ಮಲೆಕುಡಿ ಜನಾಂಗ ಅರ್ಚಕರಾಗಿರುವ ಚೌಡೇಶ್ವರಿ ದೇವಿಗೆ ಅಪಾರ ಭಕ್ತ ಸಮೂಹವಿದೆ. ದೇವಸ್ಥಾನದ ಒಳಗೆ ಪರಿಶಿಷ್ಟ ಜಾತಿಯವರಿಗೆ ಪ್ರವೇಶವಿಲ್ಲ ಎಂಬ ಸುದ್ದಿ ಇತ್ತೀಚೆಗೆ ಮಾದ್ಯಮಗಳಲ್ಲಿ ಬಂದಿರುವ ವದಂತಿ ಸಂಪೂರ್ಣ ಸುಳ್ಳಾಗಿದ್ದು, ಇಂತಹ ಆಧಾರವಿಲ್ಲದ ವದಂತಿಯಿಂದಾಗಿ ಇಲ್ಲಿನ ಆಡಳಿತ ಮಂಡಳಿಯ ಮಾನಸ್ಥಿಕ ಸ್ಥೈರ್ಯ ಕುಗ್ಗುವಂತಾಗಿದೆ ಎಂದರು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕಾಗಿನಗರೆ ಮೋಹನ್ಗೌಡ ಮಾತನಾಡಿ, ಶತಮಾನಗಳಿಂದ ಪೂಜಿಸಲ್ಪಡುತ್ತಿರುವ ಕಾಗೆನಹರಿ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಮುಂದಿನ ಎರಡು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದ್ದು, ಜಾತ್ರೆಗೆ ಬೇರೇ ರಾಜ್ಯಗಳಿಂದಲೂ ಭಕ್ತರ ಸಮೂಹ ಹರಿದು ಬರಲಿದೆ ಎಂದರು.
ಯೋಧ ಅಶ್ವತ್ಥ್ ನಾರಾಯಣ್ಗೆ ಥಳಿತ
ಬೇಲೂರು: ಆಗ್ರಾದಲ್ಲಿ ಅಸಹಜ ಸಾವನ್ನಪ್ಪಿರುವ ಯೋಧ ಅಶ್ವತ್ಥ್ ಪತ್ನಿ ಪ್ರತಿಭಾ (27) ಶವದ ಜೊತೆ ಬಂದ ಪತಿ ಅಶ್ವತ್ಥ್ ಮಾರ್ಗ ಮಧ್ಯೆ ಇಳಿದು ನಾಪತ್ತೆಯಾಗಿ ನಂತರ ಶವ ಸಂಸ್ಕಾರದ ವೇಳೆ ಪಾನಮತ್ತನಾಗಿ ಬಂದ ಸಂದರ್ಭ ಆಕ್ರೋಶಗೊಂಡ ಪ್ರತಿಭಾ ಪೋಷಕರು ಯೋಧ ಅಶ್ವತ್ಥ್ನನ್ನು ಥಳಿಸಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ತಾಲೂಕಿನ ಸನ್ಯಾಸಿಹಳ್ಳಿ ಗ್ರಾಮದ ಅಶ್ವತ್ಥ ನಾರಾಯಣ್ ಆಗ್ರಾದಲ್ಲಿ ಪತ್ನಿ ಪ್ರತಿಭಾ ಮತ್ತು 4 ವರ್ಷದ ಮಗಳು ಯಶಸ್ವಿನಿಯೊಂದಿಗೆ ವಾಸವಾಗಿದ್ದರು. ಗುರುವಾರ ಆಗ್ರಾದಿಂದ ಅಶ್ವತ್ಥ್ ದೂರವಾಣಿ ಕರೆ ಮಾಡಿ, ಪ್ರತಿಭಾ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಆದರೆ ಪ್ರತಿಭಾ ಪೋಷಕರು ಇದು ಅಸಹಜ ಸಾವು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಕಳೆದ 2 ವಷದಿಂದ ಆತ ಕಷ್ಟ ಕೊಡುತ್ತಿದ್ದುದಾಗಿ ಆಗ್ರಾಗದಲ್ಲಿ ಇರುವ ಅಕ್ಕಪಕ್ಕದವರು ಹೇಳುತ್ತಿದ್ದು ತಮ್ಮ ಮಗಳ ಸಾವಿಗೆ ಅಶ್ವತ್ಥ್ನೇ ನೇರ ಹೊಣೆಗಾರ ಎಂದು ಆರೋಪಿಸಿದರು.
ಸೋಮವಾರ ಪ್ರತಿಭಾ ಪತಿ ಅಶ್ವತ್ಥ್ ಬಾರದ ಹಿನ್ನಲೆಯಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಮಿಲಿಟಿರಿ ಆಂಬುಲೆನ್ಸಿನಿಂದ ಶವವನ್ನು ಇಳಿಸಲು ನಿರಾಕರಿಸಿದರು. ಯೋಧ ಅಶ್ವತ್ಥ್ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರಲ್ಲದೇ, ಆತ ಬರುವ ವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟುಹಿಡಿದರು.
ಮಿಲಿಟಿರಿ ಸಮವಸ್ತ್ರದಲ್ಲಿ ಪಾನಮತ್ತನಾಗಿ ಆಟೋ ಒಂದರಲ್ಲಿ ಬಂದಿಳಿದ ಯೋಧ ಅಶ್ವತ್ಥನನ್ನು ಕಂಡು ರೊಚ್ಚಿಗೆದ್ದ ಕೆಲ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿದರು. ಇದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ನಂತರ ಪೋಲಿಸರ ಬಿಗಿ ಬಂದೋಬಸ್ತಿನಲ್ಲಿ ಪ್ರತಿಭಾ ಶವಸಂಸ್ಕಾರ ನೆರವೇರಿಸಲಾಯಿತು.
ಕಚೇರಿಗೆ ಬೀಗ ಜಡಿದ
ಇಲಾಖೆ ಉಪನಿರ್ದೇಶಕ
ಹಾಸನ: ಭೂ ದಾಖಲೆಗಳ ಉಪ ನಿರ್ದೇಶಕ, ತಮ್ಮ ಸಹಾಯಕ ನಿರ್ದೇಶಕ ಅಧಿಕಾರಿಗಳ ಕಚೇರಿಗೆ ಬೀಗ ಜಡಿದ ಘಟನೆ ಸೋಮವಾರ ನಡೆದಿದೆ.
ಭೂ ದಾಖಲೆಗಳ ಸಹಾಯಕ ಉಪನಿರ್ದೇಶಕ ಧನಂಜಯ್ ಅವರು ಕಾರ್ಯನಿರ್ವಹಿಸುವ ಕಚೇರಿಗೆ ಈಗ ಬೀಗ ಬಿದ್ದಿದೆ.
ಏಕೆ ಬೀಗ?: ಕಳೆದ ಕೆಲ ದಿನಗಳಿಂದ ಭೂ ದಾಖಲೆಗಳ ಉಪ ನಿರ್ದೇಶಕ ವೇಣುಗೋಪಾಲ್ ಮತ್ತು ಸಹಾಯಕ ಉಪನಿರ್ದೇಶಕ ಧನಂಜಯ್ ನಡುವೆ ಶೀತಲ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಅದು ಮುಂದುವರೆದಿದ್ದು, ಸೋಮವಾರ ಕಚೇರಿಗೆ ಬೀಗ ಜಡಿಯುವ ಹಂತಕ್ಕೆ ಬಂದಿದೆ. ಕೆಲಸಕ್ಕೆ ಹಾಜರಾಗಿರುವ ಧನಂಜಯ್ಗೆ ಕಚೇರಿ ಇಲ್ಲದ ಕಾರಣ ಜಿಲ್ಲಾಧಿಕಾರಿ ಬಳಿ ತಮ್ಮ ಅಳಲು ತೋಡಿಕೊಳ್ಳಲು ಬಂದಿದ್ದರು. ಇತ್ತ ಈ ಘಟನೆಗೆ ಕಾರಣ ಕೇಳಲು ಹೋದ ಮಾಧ್ಯಮದ ಜತೆ ಅಸಭ್ಯ ವರ್ತನೆ ತೋರಿದ ಭೂ ದಾಖಲೆಗಳ ಉಪನಿರ್ದೇಶಕ ತಮ್ಮ ದರ್ಪ ಮೆರೆದು ಧಮಕಿ ಕೂಡ ಹಾಕಿದ್ದಾರೆ. ಮತ್ತು ಸ್ವತಃ ಕ್ಯಾಮೆರಾದಲ್ಲಿ ಮಾಧ್ಯಮದವರ ಫೋಟೋ ಹಿಡಿದು ದೂರು ನೀಡುವುದಾಗಿ ಧಮುಕಿ ಹಾಕಿದ ಘಟನೆ ನಡೆಯಿತು.
ಗೂಡ್ಸ್ ರೈಲು ತೆರವು
ಕಾರ್ಯಾಚರಣೆ ಚುರುಕು
ಸಕಲೇಶಪುರ: ತಾಲೂಕಿನ ಶಿರವಾಗಿಲು ಸಮೀಪದ ಹಳಿ ತಪ್ಪಿದ ಗೂಡ್ಸ್ ರೈಲು ತೆರವು ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.
ಭಾನುವಾರ ಮುಂಜಾನೆ 87ರ ಸುರಂಗದಲ್ಲಿ ಹಳಿತಪ್ಪಿದ ರೈಲಿನಿಂದಾಗಿ ಸುಮಾರು 200 ಮೀಟರ್ ರೈಲು ಹಳಿ ಛಿದ್ರಗೊಂಡಿದ್ದರಿಂದ 16 ವ್ಯಾಗನ್ಗಳು ಉರುಳಿಬಿದ್ದಿದ್ದವು. ಇದರ ಪರಿಣಾಮ ವ್ಯಾಗನ್ಗಳಲ್ಲಿದ್ದ ಸರಕು ಚೆಲ್ಲಾಪಿಲ್ಲಿಯಾಗಿತ್ತು.
ತೆರವು ಕಾರ್ಯಚರಣೆ ಚುರುಕು: ಸುರಂಗ ಮಾರ್ಗದಲ್ಲಿ ಹಳಿ ರೈಲಿನ ವ್ಯಾಗನ್ಗಳಿಂದಾಗಿ ತೆರವು ಕಾರ್ಯಚರಣೆಗೆ ಸುರಂಗ ಮಾರ್ಗದಲ್ಲಿನ ಕತ್ತಲು ಅಡ್ಡಿಯಾಗಿತ್ತು. ಕಾರ್ಯಚರಣೆಗಾಗಿ ಮಂಗಳೂರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಮೈಸೂರಿನಿಂದ 800 ಸಿಬ್ಬಂದಿಯನ್ನು ರೇಲ್ವೆ ಇಲಾಖೆ ಕರಸಿಕೊಂಡಿದೆ. ಕಳೆದ 24 ಗಂಟೆಯ ಅವಧಿಯಲ್ಲಿ 7 ವ್ಯಾಗನ್ಗಳನ್ನು ಹಳಿಗೆ ತರಲಾಗಿದೆ.
ಮುಂದಿನ ಎರಡು ದಿನಗಳ ಕಾಲ ಹಳಿ ದುರಸ್ತಿ ಕಾರ್ಯ ನಡೆಯಲಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ರದ್ದುಮಾಡಲಾಗಿದೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
'ಕಾರ್ಮಿಕರು
ಸಂಘಟಿತರಾಗಬೇಕು'
ಅರಕಲಗೂಡು: ಕಾರ್ಮಿಕರ ಹಿತಾಸಕ್ತಿ ಕಾಯ್ದುಕೊಳ್ಳಲು ಸಂಘಟನಾತ್ಮಕ ಚಟುವಟಿಕೆಗಳನ್ನು ಬಲಪಡಿಸಿಕೊಳ್ಳುವ ಜೊತೆಗೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಬಸವರಾಜು ಹೇಳಿದರು.
ತಾಲ್ಲೂಕು ಕಟ್ಟಡ ಗಾರೆ ಕೂಲಿ ಕಾರ್ಮಿಕರ ಸಂಘ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ನಗರ ಪ್ರದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಒಗ್ಗೂಡಿ ತಮ್ಮ ಹಕ್ಕುಗಳನ್ನು ಕಾಯ್ದುಕೊಳ್ಳುವ ಕೆಲಸ ಮಾಡುತ್ತಿವೆ ಎಂದರು.
ಕಾರ್ಮಿಕ ದಿನದ ಅಂಗವಾಗಿ ಕೋಟೆ ಗಣಪತಿ ಕೊತ್ತಲು ಪ್ರದೇಶದಲ್ಲಿ ಸ್ವಚ್ಚತೆ ಕೆಲಸದಲ್ಲಿ ಪಾಲ್ಗೊಂಡ ಕಾರ್ಮಿಕರು, ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಆಸ್ಪತ್ರೆಯ ವೈದಾಧ್ಯಿಕಾರಿ ಡಾ. ರೇವಣ್ಣ ಕಾರ್ಮಿಕ ಸಂಘದ ಪರವಾಗಿ ರೋಗಿಗಳಿಗೆ ಹಣ್ಣು ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

