ಪಂಕ್ತಿಭೇದ ನಿಷೇಧಿಸಿ
ಕನ್ನಡಪ್ರಭ ವಾರ್ತೆ, ಹಾಸನ, ಮೇ 5
ಪಂಕ್ತಿಭೇದ ಪದ್ಧತಿ ನಿಷೇಧಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಸಮಯ ಧರಣಿ ನಡೆಸಿ ಪಂಕ್ತಿಭೇದ ಪದ್ಧತಿ ನಿಷೇಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಉಡುಪಿಯ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಊಟಕ್ಕೆ ಕುಳಿತ ಬ್ರಾಹ್ಮಣೇತರ ಮಹಿಳೆಯೊಬ್ಬರನ್ನು ಎಬ್ಬಿಸಿ, ಹೊರಕಳುಹಿಸಿ ಅವಮಾನ ಮಾಡಿದ ಘಟನೆ ದೇಶದಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದೆ. ಉಪನ್ಯಾಸಕಿಯಾಗಿರುವ ವನಿತಾ ಶೆಟ್ಟಿ ಎಂಬುವರು ಕಳೆದ ಏ. 15ರಂದು ಸೌರಮಾನ ಯುಗಾದಿ ಹಿನ್ನೆಲೆಯಲ್ಲಿ ತನ್ನ ಸಹವರ್ತಿಗಳೊಂದಿಗೆ ಶ್ರೀ ಕೃಷ್ಣ ಮಠಕ್ಕೆ ಬಂದ ಸಂದರ್ಭದಲ್ಲಿ ಅನ್ನ ಪ್ರಸಾದ ಸ್ವೀಕರಿಸಲು ಪಂಕ್ತಿಯಲ್ಲಿ ಕುಳಿತಿದ್ದರು.
ಆಗ ಊಟ ಬಡಿಸುವವರೊಬ್ಬರು ಬಂದು ವನಿತಾ ಶೆಟ್ಟಿ ಬ್ರಾಹ್ಮಣಳಲ್ಲ ಎಂಬ ಏಕೈಕ ಕಾರಣಕ್ಕಾಗಿ ಎಬ್ಬಿಸಿ, ಹೊರಕ್ಕೆ ಕಳುಹಿಸಿದ್ದಾರೆ. ಇದೊಂದು ಧರ್ಮಬಾಹಿರ ಹಾಗೂ ಕಾನೂನು ಬಾಹಿರ ಕೃತ್ಯವಾಗಿದ್ದು ಇದನ್ನು ಸಿಪಿಎಂ ಬಲವಾಗಿ ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದರು.
ಆರೋಪ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಚರಣೆಯಲ್ಲಿ ಇರುವ ಈ ಅನಿಷ್ಠ ಪಂಕ್ತಿಭೇದ ಪದ್ಧತಿಯ ವಿರುದ್ಧ ಕಳೆದ ಮೂರು ವರ್ಷಗಳಿಂದ ನಿರಂತರವಾದ ಆಂದೋಲನವನ್ನು ನಡೆಸಲಾಗುತ್ತಿದೆ.
2012ರ ಡಿಸೆಂಬರ್ನಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಎದುರು ಸಿಪಿಎಂ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾಗ ಅಂದಿನ ಬಿಜೆಪಿ ಸರ್ಕಾರದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಿದ್ದರು.
ಸಿಪಿಎಂ ನ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದರು. ಮಾತ್ರವಲ್ಲ ನೂರಾರು ಕಾರ್ಯಕರ್ತರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು ಎಂದು ಆರೋಪಿಸಿದರು.
ನಿರಂತರ ಹೋರಾಟ: ಒಬ್ಬ ಮಹಿಳೆಯನ್ನು ಜಾತಿ ಹೆಸರಿನಲ್ಲಿ ಅವಮಾನಿಸುವ ಪ್ರಕರಣ ನಡೆದರ ಬಗ್ಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೊದಲಾದ ರಾಜಕೀಯ ಪಕ್ಷಗಳು ಮೌನಕ್ಕೆ ಶರಣಾಗಿವೆ. ಆದರೆ, ಸಿಪಿಎಂ ಮಾತ್ರ, ಪಂಕ್ತಿಭೇದದ ವಿರುದ್ಧದ ತನ್ನ ಹೋರಾಟವನ್ನು ಮುಂದುವರೆಸುತ್ತದೆ ಎಂದು ಹೇಳಿದರು.
ಆಗ್ರಹ: ಮುಂದಿನ ಹಂತದ ಹೋರಾಟದ ಅಂಗವಾಗಿ, ಉಡುಪಿಯ ಅಷ್ಟ ಮಠಗಳಲ್ಲಿ ಹಾಗೂ ರಾಜ್ಯದ ಇತರ ಮಠ ಮಂದಿರಗಳಲ್ಲಿ ಜಾರಿಯಲ್ಲಿರುವ ಅಮಾನವೀಯ ಪಂಕ್ತಿಭೇದವನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಅರವಿಂದ್, ಮಾದಿಗ ದಂಡೋರದ ವಿಜಯ್ ಕುಮಾರ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

