ಹಾಸನ

ಈ ಕೆರೆಗೆ ಜೀವ ಬರುವುದೆಂದು?

Published On :

ಕ.ಪ್ರ. ವಾರ್ತೆ, ಅರಸೀಕೆರೆ , ಮೇ 6
ರಾಜ್ಯ ಸರ್ಕಾರ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರು  ವೆಚ್ಚ ಮಾಡುತ್ತಿದೆಯಾದರೂ ತಾಲೂಕಿನ ಬಾಣಾವರ ಹೋಬಳಿ ವ್ಯಾಪ್ತಿಯ ಐತಿಹಾಸಿಕ ಹಿನ್ನಲೆ ಹೊಂದಿರುವ ರಂಗನಕೆರೆಯ ಕೋಡಿ ಕೊಚ್ಚಿ ಹೋಗಿ 4 ವರ್ಷ ಕಳೆಯುತ್ತಾ ಬಂದರೂ ಇದನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಯಾವುದೇ ಸರ್ಕಾರಗಳಾಗಲಿ, ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಮುಂದಾಗದಿರುವುದು ದುರ್ದೈವದ ಸಂಗತಿ.
ಕೆರೆಯ ಕೋಡಿ ಕೊಚ್ಚಿ ಹೋಗಿದ್ದರಿಂದ 4 ವರ್ಷಗಳಿಂದ ಕೆರೆಯಲ್ಲಿ ನೀರು ನಿಲ್ಲದೆ ಸಂಪೂರ್ಣ ಬರಿದಾಗಿದೆ. ಬಾಣಾವರ ಹೋಬಳಿ, ಶ್ಯಾನೆಗೆರೆ, ಯರೇಹಳ್ಳಿ, ನಿಂಗೇಗೌಡನಕೊಪ್ಪಲು ಗ್ರಾಮಗಳಿಗೆ ಹೊಂದಿಕೊಂಡಂತಿರುವ ರಂಗನಕೆರೆ ಕಳೆದ 50-60 ವರ್ಷಗಳಿಂದ ನೂರಾರು ಹೆಕ್ಟೇರ್ ಪ್ರದೇಶಕ್ಕೆ ನೀರಿನ ಸೆಲೆಯಾಗಿ ಐತಿಹಾಸಿಕ ಸ್ಥಾನ ಪಡೆದಿತ್ತು. ಆದರೆ ಇಂದು ಈ ಕೆರೆ ಭಣಗುಡುತ್ತಿದೆ. ಇದನ್ನೇ ನಂಬಿಕೊಂಡಿದ್ದ ಜನ ಜಾನುವಾರುಗಳು, ಹಕ್ಕಿ ಪಕ್ಷಿಗಳು ಕುಡಿಯಲು ನೀರಿಲ್ಲದೆ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ಎಲ್ಲೆಡೆ ಹಾಹಾಕಾರ: ರಂಗನಕೆರೆಯ ನೀರನ್ನು ಆಶ್ರಯಿಸಿ ಸುತ್ತಮುತ್ತಲಿನ ರೈತರು ನೂರಾರು ಎಕರೆ ಪ್ರದೇಶಗಳಲ್ಲಿ ಭತ್ತ, ಕಬ್ಬು ಇನ್ನಿತರ ಬೆಳೆ ಬೆಳೆಯಲಾಗುತ್ತಿತ್ತು. ಇದೀಗ ಬೆಳೆ ಬೆಳೆಯುವುದಿರಲಿ ಜಾನುವಾರುಗಳಿಗೆ, ಹಕ್ಕಿ ಪಕ್ಷಿಗಳಿಗೆ ನೀರಿಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಸರ್ಕಾರ ಕೆರೆಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರು.ಗಳ ಅನುದಾನ ಬಿಡುಗಡೆ ಮಾಡುತ್ತಿದ್ದು ಇಂತಹ ದೊಡ್ಡ ಕೆರೆಯೊಂದು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಆಶ್ಚರ್ಯಕರ ಸಂಗತಿ.
ಬರೀ ಹೂಳು:
4 ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಕೆರೆ ಸಂಪೂರ್ಣ ತುಂಬಿ ಕೋಡಿ ಹರಿದಿತ್ತು. ನೀರಿನ ರಭಸಕ್ಕೆ ಕೆರೆಯ ಎರಡೂ ಬದಿಯಲ್ಲಿ ನಿರ್ಮಿಸಲಾಗಿದ್ದ ಸುಮಾರು 50 ಮೀ. ಉದ್ದದ ಕೋಡಿಯ ಕಟ್ಟಡ ನೀರಿನೊಂದಿಗೆ ಕೊಚ್ಚಿ ಹೋಗಿದೆ. ಕೋಡಿಯ ಭದ್ರತೆಗೆ ನಿರ್ಮಿಸಲಾಗಿದ್ದ ಕಲ್ಲುಗಳೂ ಕೊಚ್ಚಿಹೋಗಿದ್ದವು. ಇದೀಗ ಕೆರೆಯಲ್ಲಿ ಬರೀ ಹೂಳು ತುಂಬಿದ್ದು, ನೀರು ನಿಲ್ಲದಂತಾಗಿದೆ.
ಇಲ್ಲಿನ ನೀರು ವಾಣಿವಿಲಾಸಕ್ಕೆ
ಆ ಕೆರೆಯಲ್ಲಿ ಈಗ ನೀರಿಲ್ಲದ ಕಾರಣ ಅಂತರ್ಜಲಮಟ್ಟ ಕುಸಿದು ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯ ಎಲ್ಲಾ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಸ್ಥಗಿತಗೊಂಡು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಹಿಂದೆ ಈ ಕೆರೆಗೆ ಅರಸೀಕೆರೆ, ತಿಮ್ಮನಾಯಕನ ಕೆರೆ, ಕುರುವಂಕ ಕೆರೆಯ ಕೋಡಿ ಹರಿದ ನೀರು ಬಂದು ಸೇರುತ್ತಿತ್ತು. ಈ ಕೆರೆ ಕೋಡಿ ಬಿದ್ದ ನಂತರ ಕಡೂರು ತಾಲ್ಲೂಕಿನ ವಿಷ್ಣುಸಮುದ್ರ ಸೇರಿ ಅಲ್ಲಿಂದ ವಾಣಿವಿಲಾಸ ಸಾಗರ ಸೇರುತ್ತಿದೆ.
ಈ ಕೆರೆಗೂ ಗಮನ ನೀಡಿ
ಅರಸೀಕೆರೆ ಪಟ್ಟಣದ ಕಂತೇನಹಳ್ಳಿ ಕೆರೆ ಪುನರುಜ್ಜೀವನಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಬಿಜೆಪಿ ಸರ್ಕಾರದ ಅವಧಿಯಲ್ಲಿ 4-5 ಕೋಟಿ ಬಿಡುಗಡೆ ಮಾಡಿಸಿದ್ದರು. ಈ ಹಿನ್ನೆಲೆಯಲ್ಲಿ, ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದ್ದು ಐತಿಹಾಸಿಕ ಹಿನ್ನೆಲೆ ಹೊಂದಿರುವ ರಂಗನಕೆರೆಯ ಅಭಿವೃದ್ಧಿಗೂ ಮುಂದಾಗಬೇಕು.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕೆರೆಯ ಹೂಳೆತ್ತುವ ಹಾಗೂ ಹೊಸದಾಗಿ ಕೋಡಿ ನಿರ್ಮಿಸುವ ಕಾರ್ಯಕ್ಕೆ ಮುಂದಾಗುವರೇ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.