ಹಾಸನ

ಭಾಷೆ ಕಳಚಿದರೆ ಸಂಸ್ಕೃತಿ ಕಳಚಿದಂತೆ: ಪ್ರಾಂಶುಪಾಲ ನರಹರಿ ಎಚ್ಚರಿಕೆ

Published On :

ಹಾಸನ: ಭಾಷೆ ಸಂಸ್ಕೃತಿಯ ವಾಹಕವಾಗಿದ್ದು, ಭಾಷೆಯನ್ನು ಕಳಚಿದರೆ ಸಂಸ್ಕೃತಿಯನ್ನು ಕಳಚಿದಂತೆ  ಎಂದು ಹಾಸನಾಂಬ ಬಿ.ಎಡ್. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ನರಹರಿ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬೆಂಗಳೂರು ಕನ್ನಡ  ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ  ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಶತಮಾನೋತ್ಸವ ಕಾರ್ಯ ಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ  ಸರ್.ಎಂ. ವಿಶ್ವೇಶ್ವರಯ್ಯರವರ ಕಾಲಾವಧಿಯಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ಆರಂಭವಾಯಿತು. 1915ರ ವೇಳೆಗೆ ಅದು ಕನ್ನಡ ಸಾಹಿತ್ಯ ಪರಿಷತ್ ಆಗಿ ಹೊರಹೊಮ್ಮಿತು ಎಂದರು.
ಒಂದು ವರ್ಷಕ್ಕೆ ಪರಿಷತ್‌ನಿಂದ 3500ರಿಂದ 4000 ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಇದರೊಂದಿಗೆ ಓದುಗರ ಸಂಖ್ಯೆಯೂ ಬೆಳೆಯಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿದ್ದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ರೂಪರಾಜ್ ಚಂದನ್ ಮಾತ ನಾಡಿ,  5.5.1915ರಂದು ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ  ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಸರ್ಕಾರ ಯಾವುದೇ ಒಂದು ಸಂಸ್ಥೆಯ ಆಡಳಿತ ಭಾಷೆ ಕನ್ನಡದಲ್ಲಿರಬೇಕು ಎಂದು ಕಾನೂನನ್ನು ರೂಪಿಸಿದೆ. ಆದರೆ ಎಷ್ಟೋ ಜನರಿಗೆ ಇದರ ಅರಿವಿಲ್ಲ ಎಂದು ಹೇಳಿದರು. ಕನ್ನಡ ಭಾಷೆ ಇಂದು ಜೀವಂತವಾಗಿರಲು ಗ್ರಾಮೀಣ ಜನರೇ ಕಾರಣ. ಆದರೆ, ಇತ್ತೀಚಿನ  ಮಕ್ಕಳು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಬಿ.ಕಾಂ, ಬಿ.ಎಸ್ಸಿ, ಸ್ನಾತಕೋತ್ತರ ಓದುತ್ತಿರುವ ಮಕ್ಕಳೇ ಕನ್ನಡದಲ್ಲಿ ಅನುತ್ತೀರ್ಣರಾಗುತ್ತಾರೆ ಎಂದರೆ ಇದೊಂದು ಬೇಸರದ ಸಂಗತಿ ಎಂದರು.
ಸಮಾರಂಭಕ್ಕೂ ಮುನ್ನ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ  ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ಧನ್, ಕ.ಸಾಪ. ಕಾರ್ಯದರ್ಶಿ ಗೊರೂರು ಶಿವೇಶ್, ಹರೀಶ್ ಸಿ.ಕೆ. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಉದಯರವಿ, ಎಚ್.ಎಸ್. ನಿಂಗಪ್ಪ, ಮಾ. ಹನು ಮೇಗೌಡ,  ಬಿ.ಎನ್. ರಾಮಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.