ಹಾಸನ

ಅಕ್ರಮ ಮರಳುಗಾರಿಕೆ ತಡೆಗೆ ಆಗ್ರಹ

Published On :

ಸಕಲೇಶಪುರ: ಆಕ್ರಮ ಮರಳುಗಾರಿಕೆ ತಡೆಯಲು ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ಉಪವಿಭಾಗಧಿಕಾರಿಗಳ ಕಚೇರಿಯಲ್ಲಿ ಅಕ್ರಮ ಮರಳು ಸಾಗಣೆ ಹತೋಟಿಗಾಗಿ ಕರೆದಿದ್ದ ಆಲೂರು-ಸಕಲೇಶಪುರ ತಾಲೂಕಿನ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆಕ್ರಮ ಮರಳುಗಾರಿಕೆ ಮಿತಿ ಮೀರಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಪಟ್ಟಣದಲ್ಲಿ ಪೊಲೀಸರ ರಕ್ಷಣೆಯಲ್ಲಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಕುಮಾರಸ್ವಾಮಿ ಪೊಲೀಸ್ ಪೇದೆಗಳ ವಿರುದ್ಧ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.
ಆದ್ದರಿಂದ ಕಂದಾಯ, ಪೊಲೀಸ್, ಲೋಕಪಯೋಗಿ ಇಲಾಖೆಯ ಅಧಿಕಾರಿಗಳು ಪರಸ್ಪರ ಸಹಕರದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಅಕ್ರಮ ಮರಳುಗಾರಿಕೆಯನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಬೇಕು. ಈ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದರು.
ತಾಲೂಕಿನ ಬಾಳ್ಳುಪೇಟೆ ಸೇರಿದಂತೆ ಮರಳು ಸಾಗುವ ಪ್ರಮುಖ ರಸ್ತೆಗಳಲ್ಲಿ ಚೆಕ್ ಪೋಸ್ಚ್ಗಳನ್ನು ನಿರ್ಮಿಸುವುದು, ಸಂಜೆ ಆರು ಗಂಟೆಯ ನಂತರ ಮರಳು ಕೇಂದ್ರದ ಸಮೀಪ ಯಾವುದೆ ಲಾರಿಗಳು ತೆರಳದಂತೆ ಸೂಚನೆ ನೀಡಬೇಕು. ಎಲ್ಲಾ ಮರಳು ಕೇಂದ್ರಗಳಲ್ಲೂ ಕಡ್ಡಾಯವಾಗಿ ಸಿಸಿ ಕ್ಯಾಮರಗಳನ್ನು ಆಳವಡಿಸಬೇಕು. ಈ ನಿರ್ಣಯಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಸಿಕೊಳ್ಳಲು ಹಾಗೂ ಸರ್ಕಾರಿ ಕಾಮಗಾರಿ ನಿರ್ವಹಿಸಲು ಅಗತ್ಯವಿರುವ ಮರಳಿಗಾಗಿ ಸ್ಥಳಿಯ ಸಂಸ್ಥೆಗಳ ಅನುಮತಿ ಪಡೆದ ನಂತರ ಸಾಗಟ ಮಾಡ ಬಹುದಾಗಿದೆ ಎಂದರು.
ಆರೋಪ: ಅಮಾನತ್ತುಗೊಂಡಿರುವ ಎಎಸ್ಐ ಬಾಲಕೃಷ್ಣ ತಾಲೂಕಿನ ಮಾಗಲು ಗ್ರಾಮ ಸಮೀಪ ಅಕ್ರಮ ಮರಳುಗಾರಿಕೆ ನಡೆಸುವವರಿಗೆ ರಕ್ಷಣೆ ನೀಡುತ್ತಿದ್ದು, ತಮ್ಮ ಕಾರಿನಲ್ಲಿ ಹಾಸಿಗೆ ಹೊದಿಕೆಯೊಂದಿಗೆ ರಾತ್ರಿ ಪೂರ್ತಿ ಕಳೆಯುವ ಈ ಅಧಿಕಾರಿ ಮರಳು ಲಾರಿಗಳನ್ನು ತಾಲೂಕು ವ್ಯಾಪ್ತಿಯಿಂದ ತಮ್ಮ ರಕ್ಷಣೆಯಲ್ಲಿ ಕಳುಹಿಸುವ ಹೊಣೆ ಹೊತ್ತಿದ್ದು ಇದರಲ್ಲಿ ಯಸಳೂರು ಪೊಲೀಸರ ಸಹಕಾರವಿದೆ ಎಂಬ ಆರೋಪ ಕೇಳಿ ಬಂದಿತು.
ತರಾಟೆ: ಹರಾಜು ಮೂಲಕ ಮರಳುಗಾರಿಕೆ ನಡೆಸುತ್ತಿರುವ ವ್ಯಕ್ತಿಗಳು ನಿಯಮಗಳನ್ನು ಉಲ್ಲಂಘಿಸಿದ್ದರೂ ಲೋಕಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಶಾಸಕರ ಆರೋಪ ನಿರಕಾರಿಸಲು ಮುಂದಾದ ಲೋಕಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ವೆಂಕಟೇಶ್ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಉಪವಿಭಾಗಧಿಕಾರಿ ಮಧುಕೇಶ್ವರ್, ಆಲೂರು-ಸಕಲೇಶಪುರ ತಹಸೀಲ್ದಾರ್ಗಳಾದ ಪಾರ್ವತಿ, ಮಹದೇವಯ್ಯ, ಗಣಿ ಹಾಗೂ ಭೂವಿಜ್ಞಾನ  ಇಲಾಖೆಯ ಹನುಮಂತರೆಡ್ಡಿ, ಡಿವೈಎಸ್ಪಿ ಕುಮಾರಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.