ತಾಪಂ ನಿವೇಶನದಲ್ಲಿ ಅಕ್ರಮ ಮಳಿಗೆ ನಿರ್ಮಾಣಕ್ಕೆ ಸಂಚು
ಕನ್ನಡಪ್ರಭ ವಾರ್ತೆ, ಬೇಲೂರು, ಮೇ 9
ಪಟ್ಟಣದ ಹೊಳೇಬೀದಿಯಲ್ಲಿರುವ ತಾಲೂಕು ಪಂಚಾಯ್ತಿಗೆ ಸೇರಿದ ನಿವೇಶನದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಿಸಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಈಗಾಗಲೇ ನಿವೇಶನದ ಸ್ಥಳದಲ್ಲಿ ಕೆಲವೊಂದು ಕಾಮಗಾರಿ ಮಾಡಿಸಲಾಗಿದ್ದು, ನಿವೇಶನ ಸ್ಥಳದಲ್ಲಿದ್ದ ಹೆಚ್ಚುವರಿ ಮಣ್ಣನ್ನು ಹೊರತೆಗೆಯುವ ಕೆಲಸ ಮಾಡಲಾಗಿದೆ.
ಸ್ಥಳ ಪರಿಶೀಲನೆ: ಅಕ್ರಮವಾಗಿ ನಡೆಸಲಾಗುತ್ತಿರುವ ಕಾಮಗಾರಿ ವಿಷಯ ತಿಳಿದ ಇಲ್ಲಿನ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೇಶನದ ಸ್ಥಳವನ್ನು ಸ್ವಚ್ಛ ಮಾಡಲಾಗಿದೆ. ನಾವು ಸ್ಥಳಕ್ಕೆ ತೆರಳಿದ್ದಾಗ, ಯಾರೂ ಕೆಲಸ ಮಾಡುತ್ತಿರಲಿಲ್ಲ. ಈ ನಿವೇಶನದಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆಯದಂತೆ ನೋಡಿಕೊಳ್ಳಲು ತಾಲೂಕು ಪಂಚಾಯಿತಿ ನೌಕರರಿಗೆ ಸೂಚಿಸಲಾಗಿದೆ ಎಂದರು.
ಪೊಲೀಸರಿಗೆ ದೂರು: ಹೊಳೆಬೀದಿಯಲ್ಲಿರುವ ಈ ನಿವೇಶನ ತಾಲೂಕು ಪಂಚಾಯಿತಿಗೆ ಸೇರಿದ್ದಾಗಿದ್ದು ಇದು ಹಾಲಿ ಡಾ. ಅಂಬೇಡ್ಕರ್ ಭವನಕ್ಕೆ ಹೊಂದಿಕೊಂಡಂತಿದೆ. ಈ ನಿವೇಶನದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಖಾಸಗಿ ವ್ಯಕ್ತಿಗಳು ಕಾಮಗಾರಿ ಮಾಡಿಸುತ್ತಿದ್ದಾರೆ ಎಂದು ದೂರು ಬಂದಿದ್ದು ಅವರುಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಸಭೆ: ಈ ನಿವೇಶನದಲ್ಲಿ ಯಾರಿಗೂ ವಾಣಿಜ್ಯ ಮಳಿಗೆ ಇನ್ನಿತರ ಯಾವುದೇ ರೀತಿಯ ಕಟ್ಟಡ ನಿರ್ಮಿಸುವುದಕ್ಕೆ ಅಥವಾ ನಿವೇಶನ ಬಾಡಿಗೆ ನೀಡುವುದಕ್ಕೆ ಅವಕಾಶ ಇರುವುದಿಲ್ಲ. ಡಾ. ಅಂಬೇಡ್ಕರ್ ಭವನಕ್ಕೆ ಸಂಬಂಧಿಸಿದ ಟ್ರಸ್ಟ್ಗೆ ಶಾಸಕರು ಅಧ್ಯಕ್ಷರಾಗಿರುವುದರಿಂದ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ಭೇಟಿ: ಇದೇ ವೇಳೆ ಈ ನಿವೇಶನದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವ ಮಾಹಿತಿ ತಿಳಿದ ಪುರಸಭೆ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆಯಿಂದ ಈ ಸ್ಥಳದಲ್ಲಿ ಯಾವುದೇ ಕಟ್ಟಡ, ಪೆಟ್ಟಿಗೆ ಅಂಗಡಿ, ಇನ್ನಿತರ ವ್ಯವಹಾರ ನಡೆಸಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕರ ಒತ್ತಾಯ: ಈ ಅಕ್ರಮ ವ್ಯವಹಾರದಲ್ಲಿ ಖಾಸಗಿ ವ್ಯಕ್ತಿಗಳ ಜತೆ ಟ್ರಸ್ಟಿನ ಸದಸ್ಯರೊಬ್ಬರು ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದ್ದು, ಒಂದೊಮ್ಮೆ ಈ ಅವ್ಯವಹಾರದಲ್ಲಿ ಟ್ರಸ್ಟಿನ ಸದಸ್ಯರು ಪಾಲ್ಗೊಂಡಿದ್ದರೆ ಅವರನ್ನು ಟ್ರಸ್ಟಿನಿಂದ ಹೊರ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಾಲೂಕು ಪಂಚಾಯ್ತಿ ವ್ಯವಸ್ಥಾಪಕ ಮೋಹನ್, ಪುರಸಭೆಯ ರವಿನ್ಯೂ ಇನ್ಸ್ಪೆಕ್ಟರ್ ಬಸವರಾಜು ಶಿಗ್ಗಾವಿ, ಸೃತಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

