ಹಾಸನ

ತಾತನ ಮನೆಗೇ ಕನ್ನ ಹಾಕಿದ ಮೊಮ್ಮಗ

Published On :

ಅರಕಲಗೂಡು:  ಕಳ್ಳತನದ ಚಟವೋ,ದ್ವೇಷವೋ ತಿಳಿಯದು. ಆದರೆ ತನ್ನ ತಾತನ ಮನೆಗೇ ಕನ್ನ ಹಾಕಿ ದೋಚಿರುವ ಪ್ರಸಂಗವೊಂದು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ದೊಡ್ಡಮಗ್ಗೆ ಹೋಬಳಿ ಕೊರಟಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಮೊಮ್ಮಗನ ವಿರುದ್ಧ ತಾತ ದೂರು ನೀಡಿದ್ದಾರೆ. ಕೊರಟಿಕೆರೆ ಗ್ರಾಮದ ರಾಜೇಗೌಡ ಎಂಬುವವರು ಅನಾರೋಗ್ಯದ ಕಾರಣ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರ ಮನೆಯ ಬೀಗ ಒಡೆದಿರುವುದನ್ನು ಗಮನಿಸಿ ಕೆಲವು ಗ್ರಾಮಸ್ಥರು ಮನೆಯ ಮಾಲೀಕ ರಾಜೇಗೌಡರಿಗೆ ತಿಳಿಸಿದ್ದಾರೆ. ಮನೆಗೆ ಬಂದ ಅವರು, ಮನೆಯಲ್ಲಿದ್ದ 30 ಗ್ರಾಂ ಚಿನ್ನದ ಕರೀಮಣಿ ಸರ, 24 ಗ್ರಾಮ ತೂಕದ 1 ಜೊತೆ ಚಿನ್ನದ ಜುಮುಕಿ, ಬಿ.ಪಿ.ಎಲ್ ಕಾರ್ಡ್, ಪಾಸ್ ಪುಸ್ತಕ, ಎರಡು ಪ್ಯಾನ್ ಕಾರ್ಡ್ ಹೀಗೆ... ಸುಮಾರು ರು. 1 ಲಕ್ಷದ 70 ಸಾವಿರ ಮೌಲ್ಯದ ಬೆಲೆ ಬಾಳುವ ವಸ್ತುಗಳು ಕಳುವಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮನೆಯಲ್ಲಿ ಕಳವು ಮಾಡಿರುವುದು ಅವರ ಮೊಮ್ಮಗನೇ ಆದ ಹನುಮಂತಪುರದಲ್ಲಿ ವಾಸವಿರುವ ಸುನಿಲ್ (19) ಎಂದು ಆರೋಪಿಸಲಾಗಿದೆ.ಪೊಲೀಸರು ತನಿಖೆ ನಡೆಸಿದ್ದಾರೆ.
ಸೇಂಟ್ ಮೇರಿಸ್ ಕಾಲೇಜಿಗೆ ಶೇ 87 ಫಲಿತಾಂಶ
ಅರಸೀಕೆರೆ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಸೈಂಟ್ ಮೇರೀಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು ಶೇ. 87 ಫಲಿತಾಂಶ ಗಳಿಸಿದೆ.
ವಾಣಿಜ್ಯ ವಿಭಾಗದಲ್ಲಿ 27 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು 27 ಮಂದಿ ತೇರ್ಗಡೆಯಾಗುವ ಮೂಲಕ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದೆ. ಆ ಪೈಕಿ 5 ಅತ್ಯುನ್ನತ, 13 ಪ್ರಥಮ, 5 ದ್ವಿತೀಯ ಹಾಗೂ 4 ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಆಶಿಕಾ 549 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮವಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 19 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ, 15 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 79ರಷ್ಟು ಫಲಿತಾಂಶ ಪಡೆದಿದೆ. ಈ ಪೈಕಿ 10 ಪ್ರಥಮ, 5 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಂಜುನಾಥ್ ಆದಿತ್ಯ ಅತಿ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ.ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 56 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಈ ಪೈಕಿ 28 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಶೇ.50ರಷ್ಟು ಫಲಿತಾಂಶ ಲಭ್ಯವಾಗಿದೆ. ವಾಣಿಜ್ಯ ವಿಭಾಗದ ಅಭ್ಯರ್ಥಿ ದಿನೇಶ್ ನಾಯ್ಕ್ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಯಾಗಿದ್ದು, ಇನ್ನುಳಿದಂತೆ 14 ಪ್ರಥಮ, 7 ದ್ವಿತೀಯ ಹಾಗೂ 6 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.