ಬಲಿ ಪಡೆಯಲು ಕಾದಿರುವ ಬ್ಯಾರಿಕೇಡ್
ಅಪಘಾತ ತಡೆಯಲು ಕೈಗೊಂಡ ಕ್ರಮವೇ ಉರುಳಾಯ್ತು!
ಕನ್ನಡಪ್ರಭ ವಾರ್ತೆ ಅರಸೀಕೆರೆ ಮೇ 12
ಅರಸೀಕೆರೆ ಪಟ್ಟಣದ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಎಲ್.ಐ.ಸಿ ಕ:ಕೇರಿಯ ಮುಂಭಾಗದಲ್ಲಿ ಪಟ್ಟಣ ಪೊಲೀಸ್ ಠಾಣೆಯವರು ನಾಲ್ಕು ಬ್ಯಾರಿಕೇಡ್ಗಳನ್ನು ನಿಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಅತಿವೇಗದಿಂದ ಚಲಿಸುವ ವಾಹನಗಳಿಂದಾಗಿ ಬಹಳಷ್ಟು ಅಪಘಾತಗಳು ಸಂಭವಿಸಿ ಹಲವು ಸಾವು- ನೋವುಗಳಾಗಿವೆ.
ಇಂತಹ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ, ಬೆಂಗಳೂರು ಕಡೆಯಿಂದ ಅರಸೀಕೆರೆ ಪಟ್ಟಣಕ್ಕೆ ಪ್ರವೇಶಮಾಡುವ ವಾಹನಗಳ ವೇಗವನ್ನು ಕಡಿಮೆ ಮಾಡಲು ಜಿಗ್ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ನಿಲುಗಡೆ ಮಾಡಿದ್ದಾರೆ.
ಈ ಕ್ರಮವು ಸ್ವಾಗತಾರ್ಹ. ಆದರೆ ಸದರಿ ಬ್ಯಾರಿಕೇಡ್ಗಳನ್ನು ಅವೈಜ್ಞಾನಿಕವಾಗಿ ನಿಲ್ಲಿಸಲಾಗಿದ್ದು, ಇವುಗಳಿಗೆ ಯಾವುದೇ ಪ್ರತಿಫಲಕ (ರಿಫ್ಲೆಕ್ಟರ್) ಅಳವಡಿಸಿಲ್ಲ. ರಾತ್ರಿ ವೇಳೆಯಲ್ಲಿ ಎದುರಿನಿಂದ ಬರುವ ವಾಹನಗಳ ಬೆಳಕಿನಲ್ಲಿ ಈ ಬ್ಯಾರಿಕೇಡ್ಗಳು ವಾಹನ ಚಾಲಕರಿಗೆ ಕಾಣಿಸದೇ ಇರುವುದರಿಂದ, ಈ ಬ್ಯಾರಿಕೇಡ್ಗೆ ವಾಹನಗಳು ಗುದ್ದಿ ಹಲವು ವಾಹನಗಳು ಜಖಂಗೊಂಡಿವೆ. ಅಲ್ಲದೇ, ಹಲವು ದ್ವಿಚಕ್ರ ವಾಹನ ಸವಾರರಿಗೆ ಮಾರಣಾಂತಿಕ ಗಾಯಗಳಾಗಿವೆ.
ಯಮಸ್ವರೂಪಿ ಬ್ಯಾರಿಕೇಡ್ಗಳು: ಈಗಾಗಲೇ ಒಂದು ಬ್ಯಾರಿಕೇಡ್ಗೆ ಯಾವುದೋ ವಾಹನ ಡಿಕ್ಕಿ ಹೊಡೆದದ್ದರಿಂದ ಅದು ಸಂಪೂರ್ಣ ನಜ್ಜುಗೊಜ್ಜಾಗಿದೆ. ಮತ್ತೊಂದರ ಕಬ್ಬಿಣದ ಜಾಲರಿಗಳು, ಪೈಪ್ಗಳು ಮುರಿದುಹೋಗಿ ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ, ಸೈಜು ಕಲ್ಲುಗಳನ್ನು ಇಟ್ಟು ಬ್ಯಾರಿಕೇಡ್ಗಳನ್ನು ನಿಲ್ಲಿಸಲಾಗಿದೆ. ಇವಂತೂ ಅಕ್ಷರಶಃ ಯಮರೂಪಿಯಾಗಿ ಮಾರ್ಪಟ್ಟಿವೆ.
ನಗರ ಪೊಲೀಸ್ ಠಾಣೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಪ್ರತಿಫಲಕಗಳನ್ನೊಳಗೊಂಡ ಬ್ಯಾರಿಕೇಡ್ಗಳನ್ನು ನಿರ್ಮಿಸದಿದ್ದಲ್ಲಿ ಈ ಜಾಗದಲ್ಲಿ ಮತ್ತಷ್ಟು ಸಾವುನೋವುಗಳು ಸಂಭವಿಸುವುದರಲ್ಲಿ ಸಂಶಯವಿಲ್ಲ ಎನ್ನುವುದು ನಾಗರಿಕರ ಅನಿಸಿಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

