ಜೋರಾಗೈತೆ ಎಲೆಕ್ಷನ್ ಬೆಟ್ಟಿಂಗ್
ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ಹಾಸನದಲ್ಲಿ ದೇವೇಗೌಡ್ರು ಗೆಲ್ತಾರೆ... ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡ... ಇಲ್ಲ, ಅಲ್ಲಿ ಕುಮಾರಣ್ಣನೇ ಶೂರ್ಲಿ ವಿನ್.. ರಮ್ಯಂಗೆ ಗೆಲವು 50-50.... ಪ್ರಸಕ್ತ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಬೆಟ್ಟಿಂಗ್ನ ಪರಿ ಇದು.
ಬೇಸಿಗೆಯ ಸುಡು ಬಿಸಿಲಿನ ನಡುವೆ ಕ್ರಿಕೆಟ್ ಪ್ರಿಯರಿಗೆ ಹುಚ್ಚು ಹಿಡಿಸಿ ಬೆಟ್ಟಿಂಗ್ಗೆ ರತ್ನಗಂಬಳಿ ಹಾಸಿರುವ ಐಪಿಎಲ್- ಟಿ20 ಕ್ರಿಕೆಟ್ನ ಜ್ವರದ ನಡುವೆ, ದೊಡ್ಡವರಿಂದ ಹಿಡಿದು ಮೀಸೆ ಚಿಗುರುತ್ತಿರುವ ಪಡ್ಡೆ ಹುಡುಗರೂ ಕೂಡ ಅದೆಲ್ಲಿಂದ ತರುತ್ತಿದ್ದಾರೋ ದುಡ್ಡನ್ನ, ಅಂತೂ ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಕೂಡ ಬೆಟ್ಟಿಂಗ್ ಪ್ರಿಯರಿಗೆ ಕೊಡುವ ಎಟಿಎಂ ಮಿಷೀನ್ನಂತಾಗಿದೆ. ಇಲ್ಲೇನಿದ್ದರೂ, 50ಸಾವಿರ, ಲಕ್ಷದ ಮಟ್ಟದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ.
ಎಲ್ಲೆಲ್ಲೂ ಬೆಟ್ಟಿಂಗ್: ಬೆಟ್ಟಿಂಗ್ ಪ್ರಿಯರಿಗೆ ಇಂತಹುದೇ ಕ್ಷೇತ್ರ.. ಇಂತಹವರಿಗೇ ಗೆಲವು ಎನ್ನುವ ಹಾಗಿಲ್ಲ. ನಾಲ್ಕಾರು ಜನರು ಸೇರುವ ಸ್ಥಳದಲ್ಲಿ ರಾಜಕೀಯ ವಿಷಯ ಚರ್ಚೆಗೆ ಬಂದರೆ ಮುಗಿಯಿತು. ಸುಮ್ನೆ ಬರೀ ಮಾತು ಬೇಡ.. ಐತಾ ದುಡ್ಡು.. ಕಟ್ಟು ನಂದು 50, ನಿನ್ನದು 40ಸಾವಿರ ಎನ್ನುವಂತೆ ಸೋಡಿ ರೂಪದಲ್ಲಿಯೂ ಕೆಲಮೊಂದು ಅಭ್ಯರ್ಥಿಗಳು ಹಾಗೂ ಕೆಲವೊಂದು ಕ್ಷೇತ್ರಗಳ ಫಲಿತಾಂಶದ ಮೇಲೆ ಬೆಟ್ಟಿಂಗ್ ಕ್ಷಣಮಾತ್ರದಲ್ಲಿ ನಿರ್ಧಾರವಾಗುತ್ತಿದೆ.
ಫಲಿತಾಂಶ ಜೂಜಿನ ವಿಷಯ: ಅಚ್ಚರಿಯ ವಿಷಯ ಎಂದರೆ, ಹಿಂದೆಲ್ಲಾ ಆಯಾ ಪಕ್ಷಗಳ ಹಿಂಬಾಲಕರು, ಕಾರ್ಯಕರ್ತರು ತಮ್ಮ ತಮ್ಮ ಪಕ್ಷ ಹಾಗೂ ನಾಯಕರ ಪರವಾಗಿ ತಮ್ಮ ಶಕ್ತಾನುಸಾರ ಬೆಟ್ಟಿಂಗ್ ಆಡಿಕೊಳ್ಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಐಪಿಎಲ್ನಂಥಾ ಪಂದ್ಯಗಳು ಪರಿಚಯವಾದ ಮೇಲೆ, ಅಲ್ಲಿ ಹೇಗೆ ಪ್ರತಿ ಎಸೆತಕ್ಕೆ, ಓವರ್ನಲ್ಲಿ ಇಂತಿಷ್ಟು ಬೌಂಡರಿ-ಸಿಕ್ಸರ್, ಯಾವ ಓವರ್ನಲ್ಲಿ ವಿಕೆಟ್ ಬೀಳುತ್ತೆ ಎನ್ನುವುದಕ್ಕೆಲ್ಲಾ ಬೆಟ್ಟಿಂಗ್ ನಡೆಯುತ್ತೋ, ಅದೇ ರೀತಿ, ನಿತ್ಯವೂ ಪತ್ರಿಕೆ ಹಾಗೂ ದೃಶ್ಯಮಾದ್ಯಮಗಳಲ್ಲಿ ಕ್ಷಣ ಕ್ಷಣಕ್ಕೂ ನೋಡುತ್ತಿರುವ ಜನ ಇಂದಿನ ದಿನಗಳಲ್ಲಿ ರಾಜಕೀಯ ವಿದ್ಯಮಾನವೂ ಬೆಟ್ಟಿಂಗ್ಗೆ ಒಂದು ವೇದಿಕೆಯಾಗಿ ಹಣ ಗಳಿಸುವವರ ಹಾಗೂ ಹಣ ಕಳೆದುಕೊಳ್ಳುವವರ ಪಾಲಿನ ಜೂಜಿನ ವಿಷಯವಾಗಿ ಮಾರ್ಪಟ್ಟಿದೆ.
ಹಲವು ವಿಚಾರಗಳಿಗೆ ಬೆಟ್ಟಿಂಗ್: ಅಚ್ಚರಿಯ ವಿಚಾರವೆಂದರೆ, ಈ ಬೆಟ್ಟಿಂಗ್ನಲ್ಲಿ ಹಾಸನ ಲೋಕಸಭಾ ಫಲಿತಾಂಶದ ಮೇಲೆ ಯಾರೂ ಅಷ್ಟಾಗಿ ಬೆಟ್ಸ್ ಕಟ್ಟುತ್ತಿಲ್ಲ. ಕಾರಣ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ನ ಎ. ಮಂಜು ಕಡೆಯ ಕ್ಷಣದವರೆಗೂ ಹೋರಾಟ ನಡೆಸಿದರೂ, ಕಡೆ ಗಳಿಗೆಯಲ್ಲಿ ಗೆಲವು ಮಾತ್ರ ಜೆಡಿಎಸ್ ವರಿಷ್ಠ ದೇವೇಗೌಡರಿಗೇ ಎನ್ನುವ ಮಾತು ಹೆಚ್ಚಾಗಿ ಕೇಳಿಬರುತ್ತಿವೆ. ಈ ಕಾರಣದಿಂದಾಗಿ ಕಾಂಗ್ರೆಸ್ ಗೆಲುವಿನ ಕುರಿತಂತೆ ಹೆಚ್ಚಿನ ಬೆಟ್ಟಿಂಗ್ಗೆ ಇಲ್ಲಿ ಅವಕಾಶ ಕಡಿಮೆಯಾಗಿದೆ. ಆದರೆ ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳು ಹಾಗೂ ದೇಶದಲ್ಲಿ ಮಿತ್ರ ಪಕ್ಷಗಳಲ್ಲದೇ ಖುದ್ದು ಕಾಂಗ್ರೆಸ್ ಪಕ್ಷ ಹಾಗೂ ಎನ್ಡಿಎ ಅಲ್ಲದೇ, ಕೇವಲ ಬಿಜೆಪಿ ಮಾತ್ರವೇ ನರೇಂದ್ರಮೋದಿ ಮೋಡಿಯಿಂದ ಇಂತಿಷ್ಟು ಸ್ಥಾನ ಗಳಿಸಲಿದೆ ಎಂಬುದು ಇಲ್ಲಿ ಬೆಟ್ಟಿಂಗ್ಗೆ ಹೆಚ್ಚಿನ ಆಯಾಮ ಒದಗಿಸಿದೆ.
ಪ್ರಮುಖವಾಗಿ ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ತುಮಕೂರು, ಬಳ್ಳಾರಿ ಮೊದಲಾದ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಹಾಗೂ ಪಕ್ಷದ ಕುರಿತಂತೆ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದ್ದರೆ, ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ 18, ಕಾಂಗ್ರೆಸ್ 8 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದಾಗಿಯೂ ಬೆಟ್ಟಿಂಗ್ ನಡೆಯುತ್ತಿದೆ. ಅತ್ತ, ಕಾಂಗ್ರೆಸ್ 12ರಿಂದ 14 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 10, ಜೆಡಿಎಸ್ 3ರಿಂದ 4ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬುದಾಗಿಯೂ ಕೆಲವರು ತಮ್ಮ ಮೂಗಿನ ನೇರದ ಲೆಕ್ಕಾಚಾರವನ್ನು ಮುಂದಿಟ್ಟು ಬೆಟ್ಟಿಂಗ್ ಆಡತೊಡಗಿದ್ದಾರೆ.
ಅಂತೂ ಇಂತೂ, ಈ ಬೆಟ್ಟಿಂಗ್ ಹುಚ್ಚು ಯಾರಿಗೆ ದುಡ್ಡು ತರುತ್ತೋ, ಯಾರಿಂದ ದುಡ್ಡು ಕಸಿಯುತ್ತೋ ಗೊತ್ತಿಲ್ಲ. ಇವೆಲ್ಲವಕ್ಕೂ ಉತ್ತರ 16ರ ಚುನಾವಣಾ ಫಲಿತಾಂಶವೇ ನೀಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

