ಫಲಿತಾಂಶ ನೋಡಲು ನೂಕು ನುಗ್ಗಲು
ಹೊಳೆನರಸೀಪುರ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಜಯಮಾಲೆ ಧರಿಸುವ ಮೂಲಕ ಐದನೇ ಬಾರಿಗೆ ಲೋಕಸಭೆ ಪ್ರವೇಶಿಸಿ 82ರ ಇಳಿವಯಸ್ಸಿನಲ್ಲೂ ದಣಿವರಿಯದ ರಾಜಕಾರಣಿ ಎಂದೇ ಹೆಸರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗೆಲುವು ಸಾಧಿಸಿದ ಸುದ್ದಿ ಹೊರಬಿದ್ದರೂ, ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಗೌಡರ ತವರು ಕ್ಷೇತ್ರದಲ್ಲಿ ಯಾವುದೇ ಸಂಭ್ರಮಾಚರಣೆ ಕಂಡುಬರದೇ ಹೋದದ್ದು ನಾಗರಿಕರಲ್ಲಿ ಅಚ್ಚರಿ ಮೂಡಿಸಿತು.ಲೋಕಸಭಾ ಚುನಾವಣೆ ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆಯೇ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಒಟ್ಟಾರೆ ಫಲಿತಾಂಶ ನೋಡಲು ಪಟ್ಟಣದ ಅಂಗಡಿ, ಹೊಟೇಲ್‌ಗಳು ಹಾಗೂ ಟಿವಿ ಸೌಲಭ್ಯಗಳಿದ್ದ ಅಂಗಡಿಗಳ ಮುಂದೆ ಜನರು ಮುಗಿಬಿದ್ದು ನಿಂತು ಫಲಿತಾಂಶವನ್ನು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಂದೊಂದೇ ಕ್ಷೇತ್ರಗಳ ಮತ ಎಣಿಕೆಗಳು ಮುಗಿದು ಫಲಿತಾಂಶ ಹೊರಬೀಳುತ್ತಿದ್ದಂತೆಯೇ, ತಮ್ಮ ತಮ್ಮೊಳಗಿನ ಲೆಕ್ಕಾಚಾರಗಳನ್ನು ತಮ್ಮಲ್ಲಿಯೇ ವಿಮರ್ಶೆ ಮಾಡಿಕೊಳ್ಳುತ್ತಿದ್ದವರು ಕೂಡ ಕಡಿಮೆಯಿರಲಿಲ್ಲ. ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿಯೂ ದೇವೇಗೌಡರಿರಲಿ, ಶಾಸಕ ಎಚ್.ಡಿ.ರೇವಣ್ಣ ಅವರಿರಲಿ, ಜೆಡಿಎಸ್ ಸ್ಥಳೀಯ ಚುನಾವಣೆಯಲ್ಲಿನ ಫಲಿತಾಂಶ ನಂತರ ಜಯವನ್ನು ಆಚರಿಸಲು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟ್ಟಣದಾದ್ಯಂತ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸುತ್ತಿದ್ದರು.ಆದರೆ, ಮಧ್ಯಾಹ್ನದ ವೇಳೆಗೆ ಹಾಸನ ಲೋಕಸಭಾ ಕ್ಷೇತ್ರದಲ್ಲಿನ ಮತ ಎಣಿಕೆ ಮುಗಿಯುತ್ತಿದ್ದಂತೆಯೇ, ಇಡೀ ರಾಷ್ಟ್ರದಲ್ಲಿಯೇ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಏಕೈಕ ಮಾಜಿ ಪ್ರಧಾನಿ ಗೌಡರ ಗೆಲುವು ನಿಶ್ಚಯವಾಗಿ ನಂತರದಲ್ಲಿ ಫಲಿತಾಂಶ ಹೊರಬಿದ್ದರೂ, ಪಟ್ಟಣದಲ್ಲಿ ಎಲ್ಲಿಯೂ ಸಂಭ್ರಮಾಚರಣೆ ಕುರುಹು ಕಾಣದೇ ಹೋದದ್ದು ಅಚ್ಚರಿ ಮೂಡಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

