ಆರ್‌ಟಿಇ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ತಡೆಗೆ ಆಗ್ರಹ
ಹಾಸನ: ಆರ್‌ಟಿಇ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ತಡೆಗಟ್ಟುವಂತೆ ಆಗ್ರಹಿಸಿ ಜಿಲ್ಲಾ ಶಿಕ್ಷಣ ಹಕ್ಕು ಸಮಿತಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿ ಶಿಕ್ಷಣಾಧಿಕಾರಿ ಬಸವರಾಜು ಅವರಿಗೆ ಮನವಿ ನೀಡಿದರು.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಕರ್ನಾಟಕ ಮಕ್ಕಳ ಹಕ್ಕು ನಿಯಮ 2012ರ ನಿಯಮ 7ರಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಸಿ) ಅಡಿ ಪ್ರವೇಶ ಪಡೆದ ಅನಾನುಕೂಲ ಪರಿಸ್ಥಿತಿಯಲ್ಲಿರುವ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಗ್ರಂಥಾಲಯ, ಐಸಿಟಿ ಸೌಲಭ್ಯ, ಸಹಪಠ್ಯ ಚಟುವಟಿಕೆಗಳು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಮುಕ್ತ ಮತ್ತು ಉಚಿತವಾಗಿ ನೀಡುವಂತೆ ನಿಯಮ ತಿಳಿಸಿದೆ.
ಆದರೆ, ಆರ್‌ಟಿಇ ಕಾಯಿದೆ ಅಡಿ ಬರುವ ಹಲವು ಖಾಸಗಿ ಶಾಲೆಗಳು ನಿಯಮ ಪಾಲಿಸದೆ ಫಲಾನುಭವಿ ಪೋಷಕರಿಂದ ಪಠ್ಯಪುಸ್ತಕ, ಸಮವಸ್ತ್ರ, ಸ್ಮಾರ್ಟ್ ತರಗತಿ, ಕರಾಟೆ, ನಾಟ್ಯ, ಸಂಗೀತ, ಇಂಗ್ಲಿಷ್ ಸಂಭಾಷಣೆ ತರಗತಿ, ಕಂಪ್ಯೂಟರ್ ತರಗತಿ, ಸಾರಿಗೆ. ಹೀಗೆ ಹತ್ತು ಹಲವು ನೆಪವೊಡ್ಡಿ ಇಲ್ಲ ಸಲ್ಲದ ಶುಲ್ಕಗಳನ್ನು ವಸೂಲಿ ಮಾಡುತ್ತಿವೆ. ಮೊದಲೇ ಆರ್ಥಿಕವಾಗಿ ಹಿಂದುಳಿದವರನ್ನು ಮತ್ತಷ್ಟು ಆರ್ಥಿಕವಾಗಿ ಶೋಷಿಸಲಾಗುತ್ತಿದೆ ಮತ್ತು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುಟ್ಟ ಮಕ್ಕಳನ್ನು ಶಿಕ್ಷಿಸಿಯಾರು ಆಥವಾ ಕಡೆಗಣಿಸಿಯಾರೆಂಬ ಭಯದಿಂದ ಪೋಷಕರು ಆರ್ಥಿಕ ಸಂಕಷ್ಟದಲ್ಲೂ ಶಾಲಾ ಶುಲ್ಕ ತುಂಬಿಸಲು ಶ್ರಮ ಪಡುತ್ತಿದ್ದು, ಅವರ ಜೀವನವೇ ನರಕ ಸದೃಶವಾಗುವತ್ತ ಸಾಗುತ್ತಿದೆ. ಭಾರತದ ಸಂವಿಧಾನದ ಅನ್ವಯ ಶಿಕ್ಷಣ ಸಂಸ್ಥೆಗಳು ಸೇವಾ ಕೇಂದ್ರಗಳಾಗದೆ ವ್ಯವಹಾರಿಕ ಕೇಂದ್ರಗಳಾಗುತ್ತ ಸಾಗಿವೆ. ಇದೇ ಸ್ಥಿತಿ ಮುಂದುವರಿದ ಪಕ್ಷದಲ್ಲಿ ಸಮಾಜದ ಸ್ವಾಸ್ಥ್ಯ ಹಾಳಾಗಿ ಸರಿಪಡಿಸಲಾಗದ ಸ್ಥಿತಿ ತಲುಪುವ ದಿನಗಳು ದೂರ ಉಳಿದಿಲ್ಲ ಎಂದು ಆರೋಪಿಸಿದರು. ಈ ಸಮಾಜವನ್ನು ತಿದ್ದಿ ತೀಡಿ ಉತ್ತಮ ಸಮಾಜ ಕಟ್ಟುವ ಸಾಮರ್ಥ್ಯ ಶಿಕ್ಷಣ ಇಲಾಖೆಗೆ ಇದೆ. ಆದ್ದರಿಂದ ಇಲಾಖೆಯು ತಕ್ಷಣ ಕಾರ್ಯಪ್ರವೃತ್ತರಾಗಿ ಆರ್‌ಟಿಇ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ತಡೆಗಟ್ಟಬೇಕು ಮತ್ತು ಫಲಾನುಭವಿಗಳು, ಆರ್‌ಟಿಇ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಸಂಘಟನೆಗಳ ಸಭೆ ಕರೆದು ದೂರುಗಳನ್ನು ಸ್ವೀಕರಿಸಿ ತಪ್ಪಿತಸ್ಥ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕು ಎಂದುಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗೋಪಾಲಕೃಷ್ಣ, ನವೀನ್‌ಕುಮಾರ್, ಸತ್ಯನಾರಾಯಣ, ವಸಂತ್ ಕುಮಾರ್, ಎಂ.ಜಿ.ಪ್ರದೀಪ್, ಅರವಿಂದ್, ಅನ್ಷದ್, ಪ್ರಕಾಶ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

