ಬಾಣಾವರ ಬಂದ್ ಸಂಪೂರ್ಣ ಯಶಸ್ವಿ
ಕನ್ನಡಪ್ರಭ ವಾರ್ತ್ಣೆ ಅರಸೀಕೆರೆ ್ಣ ಮೇ 24
ತಾಲೂಕಿನ ಬಾಣಾವರದಿಂದ ಹುಳಿಯಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಬಾಣಾವರ ಬಂದ್ ಶನಿವಾರ ಸಂಪೂರ್ಣ ಯಶಸ್ವಿಯಾಯಿತು.
ಬಾಣಾವರ ಬಂದ್ಗೆ ವ್ಯಾಪಾರಸ್ಥರು ಬೆಳಗ್ಗಿನಿಂದಲೇ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರು. ಶಾಲಾ ಕಾಲೇಜುಗಳು, ಚಿತ್ರಮಂದಿರ, ಬ್ಯಾಂಕ್, ಸರ್ಕಾರಿ ಕಚೇರಿಗಳು ಬಂದ್ ಮಾಡುವ ಮೂಲಕ ಬೆಂಬಲಿಸಿದವು. ಪ್ರತಿಭಟನಾಕಾರರು ಹುಳಿಯಾರು ರಸ್ತೆಯಿಂದ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆತಡೆ ಚಳವಳಿ ನಡೆಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ತಾಲೂಕು ಬಿಜೆಪಿ ಉಪಾಧ್ಯಕ್ಷ ತಾಪಂ ಸದಸ್ಯ ಬಿ.ಆರ್.ಜಯಣ್ಣ ಮಾತನಾಡಿ, ರಾಜಕೀಯ ದೊಂಬರಾಟದಿಂದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಇದರಿಂದ ಸಾರ್ವಜನಿಕರು ಗ್ರಾಮಾಂತರ ಪ್ರದೇಶದ ಜನರು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಕೇರಳ, ಕರ್ನಾಟಕ, ಆಂಧ್ರ, ತಮಿಳುನಾಡು 4 ರಾಜ್ಯಗಳ ಸಂಪರ್ಕ ರಸ್ತೆಯಾಗಿರುವ ಹಾಗೂ ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಗೆ ಸಂಪರ್ಕ ಹೊಂದಿರುವ ಈ ರಸ್ತೆಯ ಕಾಮಗಾರಿಗಾಗಿ ಗುತ್ತಿಗೆ ಪಡೆದ ಆಂಧ್ರ ಮೂಲದ ಎ ಎಸ್ ಐ ಪಿ ಕಂಪನಿ ರಸ್ತೆ ಅಗೆದು ಹಾಗೆಯೇ ಬಿಟ್ಟು ಹೋಗಿ 3 ವರ್ಷಗಳೇ ಕಳೆದು ಹೋಗಿರುವುದರಿಂದ ಇಲ್ಲಿನ ಗ್ರಾಮಾಂತರ ಪ್ರದೇಶದ ರಸ್ತೆಯ ಅಕ್ಕಪಕ್ಕದಲ್ಲಿರುವ ಜನರ ಪಾಡು ಹೇಳತೀರದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಬಾಣಾವರದಿಂದ ಜಾವಗಲ್ ವರೆಗೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತಿದ್ದರೂ ಬಾಣಾವರದಿಂದ ಮಲ್ಲಾಪುರ, ಶ್ಯಾನೇಗೆರೆ, ಕಲ್ಲುಸಾದರಹಳ್ಳಿ, ಕಣಕಟ್ಟೆ ಮಾರ್ಗವಾಗಿ ಹುಳಿಯಾರು ತಲುಪುವ ಈ ರಸ್ತೆ ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಕಳೆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆಂದು ದೂರಿದರು.
ರೈತ ಸಂಘದ ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದ 45 ಕಿ.ಮೀ. ದೂರ ಕ್ರಮಿಸಲು 2 ಗಂಟೆಗಳಿಗೂ ಹೆಚ್ಚು ಕಾಲ ಬೇಕಾಗುತ್ತಿದ್ದು, ಅಲ್ಲದೇ ರಸ್ತೆಯಿಂದ ಬರುವ ಧೂಳಿನಿಂದ ಅನೇಕ ಜನರು ರೋಗರುಜಿನಗಳಿಗೆ ತುತ್ತಾಗಿದ್ದಾರೆ. ಜೊತೆಗೆ ಅನೇಕ ಅಪಘಾತಗಳು ಸಂಭವಿಸಿ ಸಾವು ನೋವುಗಳುಂಟಾದರೂ ಇತ್ತ ಗಮನ ಹರಿಸದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಮಾತನಾಡಿ, ಬಾಣಾವರದಿಂದಬೇಲೂರು ರಸ್ತೆ ಕಾಮಗಾರಿ ಅಡೆತಡೆಯಿಲ್ಲದೆ ಸಾಗುತ್ತಿರುವಾಗ ಬಾಣಾವರದಿಂದ ಹುಳಿಯಾರು ರಸ್ತೆ ಸ್ಥಗಿತಗೊಂಡಿರುವುದು ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಉತ್ತನ ನೀಡಬೇಕು. ಅಲ್ಲದೇ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಬಾಣಾವರ ಕರವೇ ಅಧ್ಯಕ್ಷ ಲಕ್ಷ್ಮೀಶ, ಗ್ರಾಪಂ ಸದಸ್ಯ ಶ್ರೀಧರ ಇನ್ನಿತರರು ಮಾತನಾಡಿ, ಕೂಡಲೇ ಕಾಮಗಾರಿ ಆರಂಭಿಸಬೇಕು ಇಲ್ಲವಾದಲ್ಲಿ ಹಂತ ಹಂತವಾಗಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯ ರವಿಶಂಕರ್, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ್, ಶ್ಯಾಂ ಸುಂದರ್, ಬಿಜೆಪಿ ಮುಖಂಡ ಲಿಕ್ಷ್ಮೀಚಂದ್, ಮಾಧವಮೂರ್ತಿ, ಉಮಾಶಂಕರ್, ಮಹಾಲಿಂಗಪ್ಪ, ರೈತ ಮುಖಂಡರಾದ ಹಾರನಹಳ್ಳಿ ಲಕ್ಕಮ್ಮ, ಚಂದ್ರಪ್ಪ, ಜವನಹಳ್ಳಿ ನಿಂಗಪ್ಪ, ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

