ಬತ್ತಿದ ದೊಡ್ಡಕೆರೆ: ಅಸಮಾಧಾನ
ಅರಸೀಕೆರೆ: ಪಟ್ಟಣದ ಕಂತೇನಹಳ್ಳಿ ದೊಡ್ಡಕೆರೆಯನ್ನು ರಾಜ್ಯ ಸರ್ಕಾರದ ಅವಧಿಯಲ್ಲಿ ಸುಮಾರು ರು. 4.72 ಕೋಟಿ ವೆಚ್ಚದಲ್ಲಿ ಪುನಃಚ್ಚೇತನ ಮತ್ತು ಸೌಂದರೀಕರಣದ ಹೆಸರಿನಲ್ಲಿ ಆರಂಭವಾದ ಅಭಿವೃದ್ದಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದು ಪಟ್ಟಣದ ನಾಗರಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇತಿಹಾಸ ಪೂರ್ವದಲ್ಲಿ ಹೊಯ್ಸಳರ ದೊರೆ ಎರಡನೇ ವೀರಬಲ್ಲಾಳನ ಪತ್ನಿ ರಾಣಿ ಉಮಾದೇವಿ ತಾನು ಹುಟ್ಟಿದ ಊರಿನ ಋಣ ತೀರಿಸಲು ಕಟ್ಟಿಸಿದ್ದ ಕೆರೆಯಿಂದ ಪಟ್ಟಣಕ್ಕೆ ಅರಸೀಕೆರೆ ಎಂಬ ಪ್ರಸಿದ್ಧಿ ಬಂತ್ತು ಎಂಬ ಐತಿಹ್ಯ ಇದೆ.
ಈ ಕೆರೆಯನ್ನು ಅಭಿವೃದ್ಧಿ ಪಡಿಸಲು ಶಾಸಕ ಕೆ.ಎಂ.ಶಿವಲಿಂಗೇಗೌಡ ನಡೆಸಿದ ಹೋರಾಟದಿಂದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಸರ್ಕಾರ 13ನೇ ಹಣಕಾಸು ಯೋಜನೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಪಟ್ಟಣದ ಕಂತೇನಹಳ್ಳಿ ಸಮೀಪದಲ್ಲಿನ ಈ ದೊಡ್ಡಕೆರೆಯನ್ನು ಸುಮಾರು ರು. 4.72 ಕೋಟಿ ವೆಚ್ಚದಲ್ಲಿ ಪುನಃಶ್ಚೇತನಗೊಳಿಸಿ ಅದನ್ನು ಸುಂದರ ತಾಣವನ್ನಾಗಿ ಅಭಿವೃದ್ದಿ ಪಡಿಸುವ ಕಾಮಾಗಾರಿಗಳ ಶಂಕುಸ್ಥಾಪನೆಗೆ ಶಾಸಕರು ಚಾಲನೆ ನೀಡಿ ಸುಮಾರು ಮೂರು ವರ್ಷ ಕಳೆದರೂ ಇದುವರೆಗೂ ಕಾಮಗಾರಿ ಸಂಪೂರ್ಣ ಆಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಾರಂಭದಲ್ಲಿ ಅಭಿವೃದ್ದಿ ಕಾಮಾಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಕೆರೆ ಅಂಗಳದ ಒತ್ತುವರಿ ಜಾಗವನ್ನು ತೆರವುಗೊಳಿಸುವ ಕಾರ್ಯದೊಂದಿಗೆ ಕೆರೆಯ ಅಂಗಳದಲ್ಲಿ ರು. 48.70 ಲಕ್ಷದಲ್ಲಿ ಹೂಳು ತೆಗೆಯುವುದು, 113.50 ಲಕ್ಷದಲ್ಲಿ ಸಾರ್ವಜನಿಕರಿಗಾಗಿ ವಾಕಿಂಗ್ ರಸ್ತೆ ಮತ್ತು 45.70 ಲಕ್ಷದಲ್ಲಿ ದ್ವೀಪ (ಐ ಲಾಂಡ್) ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಕೆರೆಯ ಸುತ್ತ ರು. 36.90 ಲಕ್ಷದಲ್ಲಿ ಫೆನ್ಸಿಂಗ್ ನಿರ್ಮಿಸುವುದು ಅರ್ಧಕ್ಕೆ ನೀತಿರುವುದು ಆಶ್ಚರ್ಯವಾಗುತ್ತಿದೆ.
ಇನ್ನೂ ಸಾರ್ವಜನಿಕ ಉದ್ಯಾನವನ ಮತ್ತು ಮಕ್ಕಳ ಆಟದ ಮೈದಾನ, ರು. 23 ಲಕ್ಷದಲ್ಲಿ ಕಲ್ಯಾಣಿ ನಿರ್ಮಾಣ ಹಾಗೂ ಬೋಟಿಂಗ್ ನಿರ್ಮಾಣದ ರು. 8 ಲಕ್ಷ ವೆಚ್ಚದಲ್ಲಿ ಕಾಮಾಗಾರಿಗಳು ಅತ್ಯಂತ ಶೀಘ್ರ ಗತಿಯಲ್ಲಿ ನಡೆಯಬೇಕಾಗಿದೆ.
ಇವುಗಳೊಂದಿಗೆ ರು. 12.40 ಲಕ್ಷಗಳಲ್ಲಿ ಕೆರೆಯ ಕೋಡಿ ಅಭಿವೃದ್ದಿ ಕಾಮಾಗಾರಿ, 7.80 ಲಕ್ಷದಲ್ಲಿ ವಿಶೇಷ ಅಲಂಕೃತ ವಿದ್ಯುತ್ ದೀಪಪಗಳ ಆಳವಡಿಕೆ ಕಾರ್ಯಗಳು ಪೂರ್ಣಗೊಳ್ಳಬೇಕಿದೆ.
ಸುಮಾರು ರು. 8.40 ಲಕ್ಷ ವೆಚ್ಚದಲ್ಲಿ ಇಲ್ಲಿಯೇ ಕಾವಲುಗಾರರಿಗೆ ವ್ಯವಸ್ಥಿತ ಕೊಠಡಿ ನಿರ್ಮಾಣ ಕೂಡ ಆಗಬೇಕಾಗಿದ್ದು, ಈ ಎಲ್ಲ ಕೆಲಸ ಕಾರ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಗುತ್ತಿಗೆದಾರರು ನಡೆಸುವ ಮೂಲಕ ದೊಡ್ಡಕೆರೆಯನ್ನು ಸುಂದರ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ದಿ ಪಡಿಸುವ ಮೂಲಕ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕಾಗಿದೆ.
ಕೆರೆಯ ಇತಿಹಾಸ
ಈ ದೊಡ್ಡಕೆರೆಯ ಏರಿಯ ಉದ್ದ 1,710 ಮೀ. ಇದ್ದು, ಅಚ್ಚುಕಟ್ಟು ಪ್ರದೇಶ 171.57 ಹೆಕ್ಟೇರ್ ಹಾಗೂ ಜಲಾವೃತ್ತ ಪ್ರದೇಶ 179.20 ಹೆಕ್ಟೇರ್ ಇದೆ. ಒಂದು ಕೋಡಿ, ಎರಡು ತೂಬುಗಳನ್ನು ಹೊಂದಿದೆ. ಒಟ್ಟಾರೆ ಈ ಕೆರೆಯಲ್ಲಿನ ನೀರು ಸಂಗ್ರಹಣೆ ಸಾಮರ್ಥ್ಯ 183.50 ಎಂಸಿಎಫ್ಟಿ ಎನ್ನಲಾಗಿದೆ. ಈ ಕೆರೆ ಕೋಡಿ ಬಿದ್ದರೆ ಹರಿಯುವ ನೀರು ಕಡೂರು ತಾಲೂಕಿನ ವಿಷ್ಣು ಸಮುದ್ರದ ಮೂಲಕ ಮಾರಿ ಕಣಿವೆ ಸೇರುತ್ತದೆ. ಅನೇಕ ವರ್ಷಗಳ ಬರಗಾಲದಿಂದ ಹಾಗೂ ಕೆರೆಯ ತೂಬು ಕೆಟ್ಟು ಹೋಗಿದ್ದ ಪರಿಣಾಮ ಮಳೆ ನೀರು ಕೆರೆಯಲ್ಲಿ ಸಂಗ್ರಹವಾಗದ ಕಾರಣ ಅನೇಕ ರೈತರು ಭೂಮಿಯನ್ನು ಹಸನು ಮಾಡಿಕೊಂಡು ಜೋಳ ಸೂರ್ಯಕಾಂತಿ ಕಡಲೆ ಇತ್ಯಾದಿ ಬೆಳೆಯನ್ನು ಅನಧಿಕೃತವಾಗಿ ಬೆಳೆಯಲು ಪ್ರಾರಂಭಿಸಿದ್ದರು,
ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಕೆರೆಯ ಸುತ್ತಮುತ್ತಲೂ ನೀಲಗಿರಿ ಸಸಿಗಳನ್ನು ನೆಟ್ಟು ನೀಲಗಿರಿ ತೊಪುಗಳನ್ನು ನಿರ್ಮಿಸಿದ ಕಾರಣ ಕೆರೆಯ ಜಾಗವೇ ಮಂಗಮಾಯ ವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಣ್ಣ ನೀರಾವರಿ ಇಲಾಖೆ ಕೆರೆಯ ಅಭಿವೃದ್ದಿ ಹಾಗೂ ತೂಬುಗಳ ರಿಪೇರಿ ಮಾಡಿದ ಕಾರಣ ಎರಡು ವರ್ಷದ ಹಿಂದೆ ಬಿದ್ದ ಅಲ್ಪಸ್ವಲ್ಪ ಮಳೆಯಿಂದ ಕೆರೆಯಲ್ಲಿ ನೀರು ಶೇಖರಣೆಯಾಗಿತ್ತು, ಆದರೆ, ಕಳೆದ ವರ್ಷ ಮಳೆಯಿಲ್ಲದೆ ಬರಗಾಲದ ಬವಣೆಯ ಪರಿಣಾಮ ಕೆರೆ ಸಂಪೂರ್ಣ ಬತ್ತಿದ್ದು, ನೋಡುಗರ ಮನದಲ್ಲಿ ನೋವುಂಟು ಮಾಡುತ್ತಿದ್ದು ಸರ್ಕಾರ, ಜನಪ್ರತಿನಿಧಿಗಳು ಗಮನ ಹರಿಸಿ ಈ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗುತ್ತಾರೆಯೇ ಎಂಬುದು ನಾಗರಿಕರ ಪ್ರಶ್ನೆ ಆಗಿದೆ.
ಪಿ.ಶಾಂತಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

