ಹಾಸನ

ತಂಬಾಕು ಮಾರುಕಟ್ಟೆ ರಸಗೊಬ್ಬರ ವಿತರಣೆ ಗೊಂದಲಕ್ಕೆ ಪರಿಹಾರ

Published On :

ರಾಮನಾಥಪುರ: ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ರಸಗೊಬ್ಬರ ವಿತರಣೆ ಸಂಬಂಧ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ವಿಭಾಗದ ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎ.ವಿ. ಶಿವರುದ್ರಯ್ಯ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಹೊಗೆಸೊಪ್ಪು ಬೆಳೆಗಾರರಿಗೆ ತೊಂದರೆಯಾಗದಂತೆ ಕ್ಲಸ್ಟರ್‌ವಾರು ದಿನಾಂಕ ನಿಗದಿಪಡಿಸಿ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮಾರುಕಟ್ಟೆಯ ಪ್ಲಾಟ್‌ಫಾರಂ 7ರ ಹರಾಜು ಅಧೀಕ್ಷಕ ಮಂಜುನಾಥ್ ಮತ್ತು 63ರ ಪ್ರಭಾರ ಅಧೀಕ್ಷಕರಿಗೆ ಸೂಚಿಸಿದರು. ನಂತರ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿ, ರೈತರಿಗೆ ಸರಬರಾಜು ಮಾಡಲು ಅಗತ್ಯ ರಸಗೊಬ್ಬರ ಈಗಾಗಲೇ ದಾಸ್ತಾನಾಗಿದ್ದು, ವಿತರಣೆ ವೇಳೆ ಯಾವುದೇ ಗಲಾಟೆ, ಗೊಂದಲಗಳಿಗೆ ಆಸ್ಪದ ನೀಡದೆ ರಸಗೊಬ್ಬರ ಪಡೆದು ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಭಾಗದ ಎಫ್.ಸಿ.ವಿ. ತಂಬಾಕು ಬೆಳೆಯಲ್ಲಿ ಈವರೆಗೂ ಡಿ.ಎ.ಪಿ., ಸಿ.ಎ.ಎನ್. ಮತ್ತು ಎಸ್‌ಓಪಿ ರಸಗೊಬ್ಬರ ಬಳಸಲಾಗುತ್ತಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರ ಸಿಎಎನ್ ರಸಗೊಬ್ಬರ ಸರಬರಾಜಿಗೆ ನಿರ್ಬಂಧ ಹೇರಿದ ಪರಿಣಾಮ ಅದರ ಬದಲಿಗೆ ಅಮೋನಿಯಂ ಸಲ್ಫೈಟ್ ವಿತರಿಸಲಾಗುತ್ತಿದ್ದು ರೈತರು ಕೆಲವು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಗಿಡಕ್ಕೆ ನೀಡಬೇಕು ಎಂದು ಸಲಹೆ ನೀಡಿದರು.
ತಂಬಾಕಿಗೆ ಸಿಎಎನ್ ರಸಗೊಬ್ಬರದಲ್ಲಿ ನೈಟ್ರೈಟ್ ಅಂಶ ಹೆಚ್ಚಿದ್ದ ಕಾರಣ ಬೆಳೆಗೆ ಕಡಿಮೆ ಪ್ರಮಾಣದಲ್ಲಿ ನೀಡಿದರೆ ಗಿಡಗಳು ಬೇಗನೆ ಬೆಳವಣಿಗೆ ಹೊಂದುತ್ತಿದ್ದವು. ಅದರ ಬದಲಿಗೆ ಅಮೋನಿಯಂ ಸಲ್ಪೈಟ್‌ನಲ್ಲಿ ನೈಟ್ರೈಟ್ ಅಂಶ ಕಡಿಮೆಯಿರುವ ಕಾರಣ ಇದನ್ನು ನಿಗದಿತ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚಾಗಿ ಗಿಡಕ್ಕೆ ಒದಗಿಸಬೇಕು. ನಾಟಿ ಮಾಡಿದ 10ರಿಂದ 15 ದಿನದೊಳಗೆ ಅಮೋನಿಯಂ ಸಲ್ಫೈಟ್, ಸಿಂಗಲ್ ಸೂಪರ್ ಪಾಸ್ಪೇಟ್ ಹಾಗೂ ಎಸ್‌ಒಪಿ ರಸಗೊಬ್ಬರಗಳನ್ನು ಮಿಶ್ರಣ ಮಾಡಿ ಪ್ರತಿ ಗಿಡಕ್ಕೆ 28.6 ಗ್ರಾಂ ನಂತೆ ಎರಡು ಕಡೆ ಗುಣಿ ಮಾಡಿ ಮಣ್ಣಿನಿಂದ ಮುಚ್ಚಬೇಕು. ಮೇಲು ಗೊಬ್ಬರವಾಗಿ ನಾಟಿ ಮಾಡಿದ 30 ರಿಂದ 35 ದಿನದೊಳಗೆ ಎಎಸ್ ಮತ್ತು ಎಸ್‌ಒಪಿ ಗೊಬ್ಬರಗಳನ್ನು ಮಿಶ್ರಣ ಮಾಡಿ ಪ್ರತಿ ಗಿಡಕ್ಕೆ 14.85 ಗ್ರಾಂ ನಂತೆ ನೀಡುವುದರಿಂದ ಬೆಳೆ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.