ಹಾಸನ

ಬೀದಿನಾಯಿ, ಬಿಡಾಡಿ ದನಗಳ ಕಾಟ ಪುರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

Published On :

ಕನ್ನಡಪ್ರಭ ವಾರ್ತೆ ್ಣ ಅರಸೀಕೆರೆ ್ಣ ಮೇ 26
ಪಟ್ಟಣದ ಜನತೆಗೆ ಶಾಪವಾಗಿ ಕಾಡುತ್ತಿರುವ ಬೀದಿ ನಾಯಿಗಳ ಹಾವಳಿ ಹಾಗೂ ಬಿಡಾಡಿ ದನಗಳ ಕಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಮಧ್ಯೆಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯಹೆದ್ದಾರಿ ಬಿ.ಎಚ್. ರಸ್ತೆ ಮತ್ತು ಹಾಸನ ರಸ್ತೆ, ಸಾಯಿನಾಥ ರಸ್ತೆ,ಸಾರ್ವಜನಿಕ ಗ್ರಂಥಾಲಯ ರಸ್ತೆ ಸೇರಿದಂತೆ ನಾನಾ ಬಡಾವಣೆಗಳಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತಿರುವ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಗುಂಪುಗಳ ರಂಪಾಟ ಹೆಚ್ಚುತ್ತಿರುವ ಪರಿಣಾಮ ರಸ್ತೆಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ತಿರುಗಾಡಲು ಮುಕ್ತ ಅವಕಾಶ ಇಲ್ಲದೆ ಭಯದ ವಾತವರಣ ನಿರ್ಮಾಣವಾಗಿದೆಆದರೂ ಪುರಸಭೆ ಆಡಳಿತ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೆ ನಿದ್ರಾವಸ್ಥೆಗೆ ಜಾರಿದೆ ಎಂಬುದು ನಾಗರಿಕರ ಆರೋಪವಾಗಿದೆ.
ಪಟ್ಟಣದ ಬಾಬಾಸಾಬ್ ಕಾಲೊನಿ, ಮಟನ್ ಮಾರುಕಟ್ಟೆ ಸಮೀಪ ಹಾಸನ ರಸ್ತೆಯ ಎಡ ಮತ್ತು ಬಲಭಾಗದ ಬಡಾವಣೆಗಳಲ್ಲಿ, ಶಿವಾಲಯದ ಸುತ್ತಮುತ್ತಲ್ಲೂ, ಲಕ್ಷ್ಮೀಪುರ ಮತ್ತು ಈಡಿಗರ ಕಾಲೊನಿ ಹಾಗೂ ಇಂದಿರಾನಗರ, ಶ್ರೀನಿವಾಸ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಇವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಮಾಡಬೇಕಾಗುತ್ತದೆ. ಇಷ್ಟಾದರೂ ಪುರಸಭೆಯ ಕಣ್ಣಿಗೆ ಮಾತ್ರ ಯಾವುದೇ ಬೀದಿ ನಾಯಿಗಳು ಕಾಣದಿರುವುದು ಅಚ್ಚರಿಯ ಸಂಗತಿಯಾಗಿದೆ.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ಬಿ.ಎಚ್.ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ, ತರಕಾರಿ ಮಾರುಕಟ್ಟೆ ಅಕ್ಕಪಕ್ಕದ ರಸ್ತೆಗಳಲ್ಲಿ, ಸಂತೆ ಮೈದಾನ ಹಾಗೂ ಹುಳಿಯಾರು ರಸ್ತೆಗಳ ಕೆಲವು ಕೇಂದ್ರಗಳಲ್ಲಿ ಬಿಡಾಡಿ ದನಗಳು ಅಡ್ಡಾದಿಡ್ಡಿ ಓಡಾಡುತ್ತಿದ್ದು, ಕನಿಷ್ಠ 50ಕ್ಕೂ ಹೆಚ್ಚಿನ ದನಗಳು ಪ್ರತಿನಿತ್ಯ ರಸ್ತೆಗಳನ್ನೇ ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿದ್ದು ವಾಹನ ಸಂಚಾರಕ್ಕೆ ಇನ್ನಿಲ್ಲದ ತೊಂದರೆ ಉಂಟಾಗುತ್ತಿದೆ. ಅನೇಕ ವೇಳೆ ದ್ವಿಚಕ್ರವಾಹನ ಸವಾರರು ಎದುರಿಗೆ ಅಡ್ಡಬಂದ ದನಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಅಪಘಾತಗಳು ಸಂಭವಿಸಿ ತಮ್ಮ ಕೈ ಕಾಲುಗಳನ್ನು ಮುರಿದುಕೊಂಡ ಸಾಕಷ್ಟು ಉದಾಹರಣೆಗಳಿದ್ದು, ಅಪಘಾತದಲ್ಲಿ ದನಗಳೂ ಸಾವನ್ನಪ್ಪಿವೆ.
ಈ ಸಮಸ್ಯೆ ಪರಿಹಾರಕ್ಕೆ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮಕೈಗೊಳ್ಳಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಪುರಸಭೆ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ನಾಯಿಗಳ ದಾಳಿಯಿಂದ
ಬಾಲಕನಿಗೆ ತೀವ್ರ ಗಾಯ
ಹಾಸನ : ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಘಟನೆ ಸೋಮವಾರ ನಡೆದಿದೆ.
ನಗರದ ಸರಸ್ವತಿ ಪುರಂನ ಶಿವರಾಮ್ ಎಂಬುವರ ಪುತ್ರ ಗಗನ್(5) ಮನೆ ಮುಂದೆ ನಿಂತಿದ್ದಾಗ 5 ರಿಂದ 6 ನಾಯಿಗಳಿದ್ದ ಗುಂಪೊಂದು ಏಕಾಏಕಿ ಆಕ್ರಮಣ ಮಾಡಿ ದೇಹದ ನಾನಾ ಭಾಗಗಳಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ಇದನ್ನು ಕಂಡ ಸಾರ್ವಜನಿಕರು ನಾಯಿಯನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಕೂಡಲೇ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಯಿಗಳ ದಾಳಿಯಿಂದ ಬಾಲಕನ ತೊಡೆ, ಭುಜ, ಕುತ್ತಿಗೆ, ಕೈ ಸೇರಿದಂತೆ ದೇಹದ ನಾನಾ ಭಾಗಗಳನ್ನು ಕಚ್ಚಿಹಾಕಿದೆ. ಕೆಲ ದಿನಗಳ ಹಿಂದಷ್ಟೆ ಬಾಲಕನೊಬ್ಬನನ್ನು ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಕಳೆದ 1 ತಿಂಗಳ ಅಂತರದಲ್ಲಿ ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ಮಕ್ಕಳಿಗೆ ಬೀದಿನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ಇದಕ್ಕೆ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಜಿಲ್ಲಾಡಳಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ನಡೆಸುವುದಾಗಿ ಬಾಲಕನ ಕುಟುಂಬದವರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.