ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 8
ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ಅದರ ಪರಿಣಾಮ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಪುರಸಭೆ ಸದಸ್ಯ ಮಂಜುನಾಥ ಬೋವಿ ರಾಜ್ಯ ಹಾಗೂ ಕೇಂದ್ರ ವರಿಷ್ಠರಿಗೆ ಎಚ್ಚರಿಸಿದರು.
ಸೋಮವಾರ ಪಟ್ಟಣದಲ್ಲಿ ಜರುಗಿದ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ಅಭಿಮಾನಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಳೀಯ ಅಭ್ಯರ್ಥಿ ಎಸ್.ಆರ್. ಪಾಟೀಲರಿಗೆ ಟಿಕೆಟ್ ಒಪ್ಪಿಸಿ ಹೊರಗಿನವರಿಗೆ ಮಣೆ ಹಾಕಿದ ಹೈಕಮಾಂಡ್ ಬಸವರಾಜ ಶಿವಣ್ಣನವರಿಗೆ ಟಿಕೆಟ್ ನೀಡಿತ್ತು. ಟಿಕೆಟ್ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲದಿರುವುದರಿಂದ ಬ್ಯಾಡಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ ಎಂದರು.
ಪಾಟೀಲ ಪರ ಅಲೆ: ಚಂದ್ರಯ್ಯ ಹಿರೇಮಠ ಮಾತನಾಡಿ, ಕಳೆದ 35 ವರ್ಷಗಳಿಂದ ಎಸ್.ಆರ್. ಪಾಟೀಲ ಬ್ಯಾಡಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 118 ಗ್ರಾಮಗಳಲ್ಲಿ ಎಸ್.ಆರ್. ಪಾಟೀಲ ಪರ ಅಲೆಯಿದೆ. ಅಲ್ಲದೇ ಅವರ ನೇತೃತ್ವದಲ್ಲಿ ಜರುಗಿದ ಹಿಂದಿನ ವಿಧಾನಸಭೆ ಚುನಾವಣೆಗಳಲ್ಲಿ ಸುಮಾರು 4 ಜನ ಶಾಸಕರು ಆಯ್ಕೆಯಾಗಿದ್ದಾರೆ ಎಂದರು.
ಕೈತಪ್ಪಿದ ಅವಕಾಶ: ದಾನಪ್ಪಗೌಡ ತೋಟದ ಮಾತನಾಡಿ, ಮೀಸಲು ಕ್ಷೇತ್ರವಾಗಿದ್ದ ಬ್ಯಾಡಗಿ, ಕ್ಷೇತ್ರ ಮರುವಿಂಗಡಣೆ ಬಳಿಕ ಸಾಮಾನ್ಯ ಕ್ಷೇತ್ರವಾಗಿದೆ. ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರ ಹತ್ತಿರದ ಪರಿಚಯವಿದ್ದರೂ ಸಹ ಎಸ್.ಆರ್. ಪಾಟೀಲರಿಗೆ ಸ್ಪರ್ಧಿಸುವ ಅವಕಾಶಗಳು ಕೈತಪ್ಪಿವೆ. ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡದ ಹೈಕಮಾಂಡ್ ತಪ್ಪು ಹೆಜ್ಜೆಯನ್ನಿಟ್ಟಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಹೈಕಮಾಂಡ್ ಪರೋಕ್ಷ ಕಾರಣವಾಗಿದೆ ಎಂದು ಆರೋಪಿಸಿದರು.
ನ್ಯಾಯಸಮ್ಮತ ಬೇಡಿಕೆ: ಸುಮಂಗಲಾ ರಾರಾವಿ ಮಾತನಾಡಿ, ಎಸ್.ಆರ್. ಪಾಟೀಲ ಎಂದರೆ ಕಾಂಗ್ರೆಸ್ ಇನ್ನೊಂದು ಮುಖ ಅವರಿಗೆ ಟಿಕೆಟ್ ಹೇಳುವುದು ನ್ಯಾಯಸಮ್ಮತ ಬೇಡಿಕೆಯಾಗಿದ್ದು, ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದ ಅವರು, ಕಳೆದ ಬಾರಿ ಬಿಜೆಪಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕಲ್ಪಿಸಿದ್ದರಿಂದ ಫಲಿತಾಂಶ ಬಿಜೆಪಿ ಪರವಾಗಿ ಬಂದಿದೆ ಎಂದರು.
ಕಾದು ನೋಡುವೆ: ಸಭೆಯನ್ನುದ್ದೇಶಿಸಿ ಎಸ್.ಆರ್. ಪಾಟೀಲ ಮಾತನಾಡಿ, ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಫಲಿತಾಂಶ ನೀಡಬಲ್ಲೆ. ಆದರೆ, ಹೈಕಮಾಂಡ್ ಮೊದಲು ನನ್ನ ಹೆಸರನ್ನು ಪ್ರಕಟಿಸಿ ಬಳಿಕ ಬಸವರಾಜ ಶಿವಣ್ಣನವರ ಹೆಸರನ್ನು ಸೂಚಿಸಿದೆ. ಕಾರ್ಯಕರ್ತರ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದು, ನಿಮ್ಮ ಒತ್ತಡಕ್ಕೆ ಮಣಿದು ತಪ್ಪು ಹೆಜ್ಜೆಯನ್ನಿಡಲು ಸಾಧ್ಯವಿಲ್ಲ ಎಂದರು.
ವಿಶ್ವಾಸವಿದೆ: ಕಾಂಗ್ರೆಸ್ ಹೈಕಮಾಂಡ್ ಮೇಲೆ ನನಗೆ ವಿಶ್ವಾಸವಿದೆ. ವರಿಷ್ಠರು ಹಾಗೂ ಆಯ್ಕೆ ಸಮಿತಿ ಸದಸ್ಯರು ನನಗೆ ಅವಕಾಶ ಕಲ್ಪಿಸುವ ಕುರಿತು ಖಚಿತಪಡಿಸುವ ಮಾತುಗಳನ್ನಾಡಿದ್ದಾರೆ. ರಾಜಕೀಯದಲ್ಲಿ ಎಲ್ಲವೂ ನಡೆಯುತ್ತದೆ ಹೀಗಾಗಿ ಯಾವುದೇ ನಿರ್ಧಾರಕ್ಕೆ ಬರಲು ಇದು ಸೂಕ್ತ ಕಾಲವಲ್ಲ ಎಂದರು.
ತಪ್ಪು ಸಂದೇಶ: ಟಿಕೆಟ್ ವಂಚಿತರ ಬಂಡಾಯದ ಬಿಸಿಯಿಂದ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಇದರಿಂದ ಪಕ್ಷ ಸಾಕಷ್ಟು ನಷ್ಟ ಅನುಭವಿಸಿದೆ. ಗೆಲ್ಲುವ ಅವಕಾಶವಿದ್ದರೂ ಸಹ ಸೋತ ಉದಾಹರಣೆಗಳಿವೆ. ಅಲ್ಲದೇ ಕ್ಷೇತ್ರದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗದಂತೆ ಮನವಿ ಮಾಡಿದರು.
ನೂರಂದನವರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ನಜೀರ ಅಹ್ಮದ್ ಶೇಖ್, ದುರ್ಗೇಶ್ ಗೊಣೆಮ್ಮನವರ, ನಾಗಪ್ಪ ಕರಡೇರ, ವರ್ತಕ ಎಸ್.ಎಸ್. ಹಿರೇಮಠ, ಮಂಜುಳ ಮಾಸೂರ, ಪಿ.ಎ. ಬಡಿಗೇರ, ದುಂಡೆಪ್ಪ ಕಬ್ಬೂರ, ಪ್ರದೀಪ್ ಮ್ಯಾಗೇರಿ, ಗಿರೀಶ್ ಗೌಡ ಪಾಟೀಲ, ಚಂದ್ರು ಪಾಟೀಲ, ಯಲ್ಲಪ್ಪ ಬೇವಿನಮಟ್ಟಿ ವಿರೇಶ್ ಹತ್ತಿ ಹಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಬಿ.ಪಿ. ಚನ್ನಗೌಡ್ರ ಪ್ರಾಸ್ತಾವಿಕ ಮಾತನಾಡಿದರು. ರಾಜುಗೌಡ ಹೊಂಬರಡಿ ಸ್ವಾಗತಿಸಿದರು. ನಾಗಪ್ಪ ಬಣಕಾರ ನಿರೂಪಿಸಿದರು. ಮಹಾಂತೇಶ್ ವಸ್ತ್ರದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

