ಹಾವೇರಿ

ಕನ್ನಡ ಶ್ರೀಮಂತ, ಸತ್ವಶಾಲಿ ಭಾಷೆ

Published On :

ಹಾವೇರಿ: ಬಹುತ್ವದ ನೆಲೆಗಳನ್ನು ಹೊಂದಿರುವ ಕನ್ನಡ ಭಾಷೆಯು ಶ್ರೀಮಂತ ಹಾಗೂ ಸತ್ವಶಾಲಿಯಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶ್ರೀಕಂಠ ಕೂಡಿಗೆ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಜನಪದರು ಮತ್ತು ಭಾಷೆ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾದೇಶಿಕವಾಗಿ ಕರ್ನಾಟಕ ವೈವಿಧ್ಯಮಯವಾಗಿರುವಂತೆ ಬಳಕೆಯಲ್ಲಿರುವ ಕನ್ನಡ ಭಾಷೆಯ ಸ್ವರೂಪದಲ್ಲಿಯೂ ಸಾಕಷ್ಟು ವೈವಿಧ್ಯತೆ ಇದೆ. ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಅದರಲ್ಲೂ ಜನಪದರು ಬಳಸುವ ಭಾಷೆ ಸತ್ವಪೂರ್ಣವಾಗಿದ್ದು, ಅಧ್ಯಯನ ಯೋಗ್ಯವಾಗಿದೆ. ಭಾಷಿಕ ನೆಲೆಯಿಂದ ಜನಪದ ಸಂಸ್ಕೃತಿ ಕುರಿತು ಸಂಶೋಧನೆ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಕನ್ನಡ ಭಾಷೆ ಸದಾಕಾಲ ತನ್ನ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಂಡು ಅಸ್ತಿತ್ವದಲ್ಲಿ ಇರುತ್ತದೆ ಎಂದರು.
ಸಂಕಥನದಿಂದ ನೂತನ ಸಂಶೋಧನೆ: ಜನಪದ ಭಾಷೆ-ಸಂಕಥನಗಳು ವಿಷಯ ಕುರಿತು ಡಾ.ಪಿ. ಮಹದೇವಯ್ಯ ಮಾತನಾಡಿ, ಭಾಷೆ ವಾಸ್ತವ ಮತ್ತು ಚರಿತ್ರೆಯನ್ನು ಏಕಕಾಲಕ್ಕೆ ಕಟ್ಟಿಕೊಡುತ್ತದೆ. ಜನಪದರ ಭಾಷೆಯನ್ನು ಮೊದಲು ಸಂಗ್ರಹಿಸಿ ಆ ನಂತರ ಭಾಷಾಧ್ಯಯನದ ಸೂತ್ರಗಳನ್ನು ಬಳಸಿಕೊಂಡು ಭಾಷಾ ಚರಿತ್ರೆಯನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು. ಭಾಷಾ ಸಂಕಥನವೊಂದು ವರ್ತಮಾನಕ್ಕೆ ಸಂಬಂಧಿಸಿದ್ದೂ ಮತ್ತು ಕಾಲಾತೀತಿವಾಗಿರುವುದರಿಂದ ಸಂಕಥನಗಳ ಮೂಲಕವೇ ನೂತನ ಸಂಶೋಧನೆಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಂಶೋಧಕರಿಗೆ ಕಿವಿಮಾತು ಹೇಳಿದರು.
ಬುಡಕಟ್ಟು ಜನಾಂಗದಿಂದ ಸಂಸ್ಕೃತಿ: ಡಾ.ಕಿಕ್ಕೇರಿ ನಾರಾಯಣ ಅವರು ಬುಡಕಟ್ಟು ಸಮುದಾಯಗಳ ಭಾಷೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರಕೃತಿ ಮತ್ತು ಸಂಸ್ಕೃತಿಗಳಿಗೆ ಅದರದ್ದೇ ಆದ ವ್ಯಾಕರಣವಿರುತ್ತದೆ. ಪ್ರಕೃತಿಯಲ್ಲಿ ವಾಸ ಮಾಡುವ ಎಲ್ಲ ಬಗೆಯ ಜೀವಿಗಳಿಗೂ ಇದು ಅನ್ವಯವಾಗುತ್ತದೆ. ಈ ನೆಲೆಯಿಂದ ಜನಪದ ಸಾಹಿತ್ಯ ಮತ್ತು ಬುಡಕಟ್ಟು ಸಮುದಾಯಗಳ ಭಾಷೆಯನ್ನು ಸೂಕ್ಷ್ಮವಾದ ಒಳನೋಟಗಳಿಂದ ವಿಶ್ಲೇಷಿಸಿದಾಗ ಮಾತ್ರ ಅಧ್ಯಯನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಬದುಕಿನ ಎಲ್ಲ ಮಗ್ಗಲುಗಳನ್ನು ತಿಳಿದುಕೊಳ್ಳಬೇಕಾದುದು ಅಗತ್ಯ ಎಂದರು.
ಭಾಷಾಶಾಸ್ತ್ರ ವೈಶಿಷ್ಟ್ಯವಾದುದು: ಜನಪದರ ಸಾಹಿತ್ಯ ಭಾಷೆ ಕುರಿತು ಡಾ.ಸಾಂಬಮೂರ್ತಿ ಮಾತನಾಡಿ, ಭಾಷಾಶಾಸ್ತ್ರಕ್ಕೆ ಯಾವುದೇ ಭಾಷೆಯ ಬಗೆಗೆ ಕೀಳರಿಮೆಯಾಗಲಿ, ಮೇಲರಿಮೆಯಾಗಲಿ ಇಲ್ಲ ಎಂದ ಅವರು, ಭಾಷೆಯೊಂದರ ಎಲ್ಲ ಸೂಕ್ಷ್ಮಗಳನ್ನು ಕುರಿತು ಭಾಷಾಶಾಸ್ತ್ರ ಅಧ್ಯಯನ ಮಾಡುತ್ತದೆ. ಭಾಷೆ, ಸಮಾಜ ಹಾಗೂ ಸಂಸ್ಕೃತಿಗಳು ಒಂದಕ್ಕೊಂದು ಪೂರಕವಾಗಿದ್ದು, ಆಧುನಿಕತೆ ಒಪ್ಪಿಕೊಂಡು ವಿಶಿಷ್ಟಗೊಳಿಸುವ ಶಕ್ತಿ, ಸಾಮರ್ಥ್ಯ ಜನಪದ ಭಾಷೆಗೆ ಮಾತ್ರ ಇದೆ ಎಂದರು.
ಎಲ್ಲ ವಿದ್ವಾಂಸರನ್ನು ಜಾನಪದ ವಿವಿಯಿಂದ ಸನ್ಮಾನಿಸಲಾಯಿತು. ವಿವಿ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ, ಹಂಪಿ ವಿವಿ ಉಪ ಕುಲಪತಿ ಪ್ರೊ.ಹಿ.ಚಿ. ಬೋರಲಿಂಗಯ್ಯ, ಜಾನಪದ ವಿವಿ ಕುಲಸಚಿವ ಪ್ರೊ.ಸಿ.ಎ. ಸೋಮಶೇಖರಪ್ಪ, ಪ್ರೊ.ಸ.ಚಿ. ರಮೇಶ್ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.