ಹಾವೇರಿ

ಜಂಗಮರು ಸಂಘಟಿತರಾಗಲಿ: ಹಿರೇಮಠ

Published On :

ಬ್ಯಾಡಗಿ: ಸೌಲಭ್ಯ ವಂಚಿತ ಜಂಗಮ ಸಮಾಜ ಜೋಳಿಗೆಯಿಂದ ಮುಕ್ತವಾಗಿಲ್ಲ. ಆಡಳಿತದಲ್ಲಿದ್ದ ಬಹುತೇಕ ಸರ್ಕಾರಗಳು ಜಂಗಮ ಸಮಾಜವನ್ನು ನಿರ್ಲಕ್ಷಿಸುತ್ತಾ ಬಂದಿವೆ ಎಂದು ಜಂಗಮ ಸಮಾಜದ ಗೌರವಾಧ್ಯಕ್ಷ ಎಂ.ಎ. ಹಿರೇಮಠ ಆರೋಪಿಸಿದರು.
ಯುವ ಜಂಗಮ ವೇದಿಕೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಜಂಗಮರಿಗೆ ಸಮಾಜದ ಜನರಿಂದ ಗುರು ಹಾಗೂ ಗೌರವ ಸ್ಥಾನಗಳು ದೊರೆತಿವೆ. ಆದರೂ ಜೋಳಿಗೆ ಭಿಕ್ಷಾಟನೆಯ ಕಾಯಕ ತಪ್ಪಿಲ್ಲ, ಇದರಿಂದಲೇ ಜೀವನ ನಿರ್ವಹಣೆ ಮಾಡುತ್ತಿರುವ ಬಹಳಷ್ಟು ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿವೆ ಎಂದರು.
ಜಂಗಮ ಸಮಾಜವನ್ನು ವೀರಶೈವ ಗುಂಪಿನಲ್ಲಿ ಗುರುತಿಸುತ್ತಿರುವ ಸರ್ಕಾರ ಹಿಂದುಳಿದವರ ಪಟ್ಟಿಯಲ್ಲಿ ನಮ್ಮನ್ನು ಸೇರಿಸಲು ಮೀನಮೇಷ ಎಣಿಸುತ್ತಿದೆ. ಕೆಲ ವರ್ಷಗಳ ಹಿಂದೆ ಸಮಾಜವನ್ನು ಬೇಡ ಜಂಗಮ ಎಂದು ಪ್ರತ್ಯೇಕಿಸುವ ಮೂಲಕ ಹಿಂದುಳಿದವರ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಪ್ರಾದೇಶಿಕತೆಯನ್ನು ಎತ್ತಿ ಹಿಡಿದ ಸರ್ಕಾರ ಹಿಂದುಳಿದವರ ಸೌಲಭ್ಯ ಕಸಿದುಕೊಂಡಿದೆ ಎಂದರು.
ಜಿ.ಸಿ. ಹಿರೇಮಠ ಮಾತನಾಡಿ, ಜಂಗಮ ಸಮಾಜದವರು ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಅವರನ್ನು ಬಹುಸಂಖ್ಯಾತ ವೀರಶೈವರ ಸಾಲಿನಲ್ಲಿ ಗುರುತಿಸುತ್ತಿರುವ ಸರ್ಕಾರ ಮುಂದುವರಿದವರು ಎಂಬ ಹಣೆಪಟ್ಟಿ ಹಚ್ಚಿ ಸೌಲಭ್ಯ ವಂಚಿತರನ್ನಾಗುವಂತೆ ಮಾಡಿದೆ. ಗೌರವಕ್ಕೆ ಚ್ಯುತಿ ಬರುವ ಆತಂಕದಿಂದ ಜಂಗಮರು ಸಂಘಟಿತರಾಗಲು ಸಾಧ್ಯವಾಗಿಲ್ಲ. ಹೀಗಾಗಿ ಕಷ್ಟಗಳ ಸರಮಾಲೆಯೂ ತಪ್ಪಿಲ್ಲ ಎಂದರು. ನಾಡಿನ್ಯಾದ್ಯಂತ ಪಂಚಾಚಾರ್ಯ ಪೀಠಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಘೋಷಣೆ ಮೂಲಕ ಸಮಾಜದ ಎಲ್ಲ ಜನರ ಹಿತಕಾಯುವ ಕಾಯಕದಲ್ಲಿ ತೊಡಗಿದ್ದಾರೆ. ಹೀಗಾಗಿ, ಪಾರಂಪರಿಕ ಕಾಯಕದಿಂದ ಹೊರಬರಲು ಸಾಧ್ಯವಾಗಿಲ್ಲ ಎಂದರು.
ನೂತನ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ ಮಾತನಾಡಿ, ಪರಿವರ್ತನೆ ಜಗದ ನಿಯಮ. ಜಂಗಮ ಸಮಾಜದ ಯುವಕರು ಕಾಯಕದ ಜತೆಗೆ ಸ್ವಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಕರೆ ನೀಡಿದರು. ಆರ್.ಜಿ. ಹಾಲೇವಾಡಿಮಠ, ಎಸ್.ಎಚ್. ಬುಡಪನಹಳ್ಳಿಮಠ, ಜಿ.ಸಿ. ಇಂಡಿಮಠ, ಎಂ.ಎಸ್. ಹಿರೇಮಠ, ವೀರಭದ್ರಯ್ಯ ವಸ್ತ್ರದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.