ಸುದ್ದಿ ಸಂಕ್ಷೇಪ
ನಾಳೆಯಿಂದ ಚೈತ್ರದ ಚಿಗುರು
ಹಾನಗಲ್ಲ: ಪಟ್ಟಣದ ಬಿ.ಜಿ. ಕಟ್ಟಿ ವಿಚಾರ ವೇದಿಕೆ ಆಶ್ರಯದಲ್ಲಿ ಪ್ರತಿ ವರ್ಷದಂತೆ ಚೈತ್ರದ ಚಿಗುರು ಸಂಸ್ಕಾರ ಶಿಬಿರ ಏ. 12ರಿಂದ 19ರ ವರೆಗೆ ನಡೆಯಲಿದೆ. ಏಳು ದಿನಗಳವರೆಗೆ ನಡೆಯುವ ಈ ಶಿಬಿರದಲ್ಲಿ ಹನ್ನೊಂದು ವರ್ಷಕ್ಕೂ ಮೇಲ್ಪಟ್ಟ ಮಕ್ಕಳು ಭಾಗವಹಿಸಬಹುದಾಗಿದೆ. ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಕಲೆ ಹಾಗೂ ನಮ್ಮ ಸಂಸ್ಕಾರಗಳ ಕುರಿತು ಮಕ್ಕಳಿಗೆ ತರಬೇತಿ ನೀಡಲಾಗುವುದು. ಭಾಗವಹಿಸಲು ಇಚ್ಛಿಸುವ ಮಕ್ಕಳು ಕೆ.ಎಲ್. ದೇಶಪಾಂಡೆ-9591002006 ಹಾಗೂ 9620810743 ದೂರವಾಣಿಗಳನ್ನು ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.'
ಬಿಜೆಪಿ ಮೃದು ಧೋರಣೆ: ಶಿವರಾಜ ಸಜ್ಜನರ
ಬ್ಯಾಡಗಿ: ಭಾರಿ ಪ್ರಮಾಣದಲ್ಲಿ ಹಣ ಪಡೆದಿರುವ ಬಿಜೆಪಿ ಹೈಕಮಾಂಡ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಜೆ. ಶಾಂತಾ ಹಾಗೂ ಸಣ್ಣ ಫಕೀರಪ್ಪ ಅವರ ಬಗ್ಗೆ ಮೃದು ಧೋರಣೆ ತಾಳಿದೆ ಎಂದು ಬ್ಯಾಡಗಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಆರೋಪಿಸಿದರು. ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಮಾನತಾದ ಬಿ.ವೈ. ರಾಘವೇಂದ್ರ ಹಾಗೂ ಶಿವಕುಮಾರ ಉದಾಸಿ ಮಾತ್ರ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಯೇ? ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡದಿದ್ದರೂ ಇವರಿಬ್ಬರ ಮೇಲೆ ಕ್ರಮ ತೆಗೆದುಕೊಂಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ರಾಜ್ಯಾಧ್ಯಕ್ಷರಿಗೆ ನೈತಿಕತೆ ಇಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಜ್ಜನರ, ಬಿಜೆಪಿಯ ಹಿಂದಿನ ಹಾಗೂ ಇಂದಿನ ರಾಜ್ಯಾಧ್ಯಕ್ಷರಿಗೆ ನೈತಿಕತೆ ಇದ್ದರೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಜಿ. ಸೋಮಶೇಖರ್, ಮೃತ್ಯುಂಜಯ ಜಿನಗಾ ಮತ್ತಿತರರ ಮೇಲೂ ಕ್ರಮ ಕೈಗೊಳ್ಳಲಿ ಎಂದು ಸವಾಲೆಸೆದರು. ನಾಳೆ ಬಿಎಸ್ವೈ ಬ್ಯಾಡಗಿಗೆ: ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಏ. 12ರಂದು ಪಟ್ಟಣಕ್ಕೆ ಆಗಮಿಸಲಿದ್ದಾರೆ. ಅಂದು ಎನ್ಬಿಬಿ ಲಯನ್ಸ್ ಪ್ರೌಢಶಾಲೆ ಆವರಣದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಸಾರ್ವಜನಿಕ ಭಾಷಣ ನಡೆಸಲಿದ್ದಾರೆ. ಅವರೊಂದಿಗೆ ಸಿ.ಎಂ. ಉದಾಸಿ, ಶೋಭಾ ಕರಂದ್ಲಾಜೆ, ಧನಂಜಯ ಕುಮಾರ್, ಜಬ್ಬಾರಖಾನ್ ಹೊನ್ನಳ್ಳಿ, ಮುಕಡಪ್ಪ ಪಾಲ್ಗೊಳ್ಳುವರು ಎಂದರು. ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ನಗರ ಘಟಕದ ಅಧ್ಯಕ್ಷ ಗಂಗಣ್ಣ ಎಲಿ, ಪುರಸಭೆ ಸದಸ್ಯರಾದ ಮುನಾಫ್ಸಾಬ್ ಎರೆಶೀಮಿ, ಪ್ರಶಾಂತ್ ಯಾದವಾಡ, ಮುಕ್ತಿಯಾರ್ ಮುಲ್ಲಾ ಇದ್ದರು.
ಮಹಿಳೆ ಆತ್ಮಹತ್ಯೆ
ಮುಂಡಗೋಡ: ಮಹಿಳೆಯೋರ್ವಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಸುಜಾತಾ ಬಾಬಣ್ಣ ಚನ್ನಾಪುರ (30) ಸಾವಿಗೆ ಶರಣಾದ ಮಹಿಳೆ. ಈಕೆಯನ್ನು 13 ವರ್ಷದ ಹಿಂದೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಹುನಗುಂದ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಗಂಡನ ಮನೆಯಲ್ಲಿ ಆಸ್ತಿ, ಕೌಟುಂಬಿಕ ವಿಷಯದಲ್ಲಿ ಜಗಳವಾಗಿದ್ದು, ಮನನೊಂದು ಒಂದು ವಾರದ ಈಚೆ ತವರು ಮನೆಗೆ ಬಂದಿದ್ದಳು. ಇಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತೀವ್ರ ಸುಟ್ಟು ಚಿಂತಾಜನಕ ಸ್ಥಿತಿಯಲ್ಲಿದ್ದ ಈಕೆಗೆ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

