ಹಾವೇರಿ

ಹಾನಗಲ್: ಹಳೆ ಹುಲಿಗಳ ಕಾಳಗ

Published On :

ಹಾನಗಲ್: ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಭ್ಯರ್ಥಿ ಯಾರು ಎಂಬುದನ್ನು ಕಾಂಗ್ರೆಸ್ ಭಾನುವಾರ ಆಖೈರುಗೊಳಿಸಿದ್ದು, ಇಬ್ಬರು ಘಟಾನುಘಟಿ ರಾಜಕೀಯ ಮುತ್ಸದಿಗಳ ಕಾದಾಟಕ್ಕೆ ಈ ಕ್ಷೇತ್ರ ಮತ್ತೊಮ್ಮೆ ಸಾಕ್ಷಿಯಾಗಲಿದೆ.
ರಾಜಕೀಯ ಎಲ್ಲ ವಿಧ್ಯೆಗಳನ್ನು ಕರಗತ ಮಾಡಿಕೊಂಡಿರುವ ಮಾಜಿ ಸಚಿವ, ಹಾಲಿ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ಹಾಗೂ ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ಮಧ್ಯೆ ನೇರ ಹಣಾಹಣಿ ನಡೆಯುವ ಎಲ್ಲ ಸಾಧ್ಯತೆಗಳು ಕಂಡು ಬರಲಾರಂಭಿಸಿವೆ.
ತಹಸೀಲ್ದಾರ್ 1978ರಲ್ಲಿ ಕಾಂಗ್ರೆಸ್‌ನಿಂದ ಈ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಗೊಂಡಿದ್ದರು. ನಂತರ, 89 ಹಾಗೂ 99ರ ಚುನಾವಣೆಯಲ್ಲಿಯೂ ಗೆಲವು ಸಾಧಿಸುವ ಮೂಲಕ ಹಾನಗಲ್ 'ಕೈ'ನಿಂದ ತಪ್ಪದಂತೆ ನೋಡಿಕೊಂಡಿದ್ದರು. ಈ ಎಲ್ಲ ಫಲಿತಾಂಶಗಳನ್ನು ಗಮನಿಸಿಯೇ ಹೈಕಮಾಂಡ್ ಮತ್ತೊಮ್ಮೆ ಅವಧಿಗೆ ಅವರಿಗೆ ಛಾನ್ಸ್ ನೀಡಿದೆ ಎಂಬ ಮಾತುಗಳು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿವೆ.
ಹಿಡಿತ ಸಾಧಿಸಿದ್ದರು: ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ 1983ರಲ್ಲಿ ಪ್ರಥಮ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಉದಾಸಿ, ನಂತರ, 85ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. 1994ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಉದಾಸಿ, ಕ್ಷೇತ್ರದಲ್ಲಿ ತಾವು ಹೊಂದಿರುವ ಹಿಡಿತ ಎಂತಹದ್ದು ಎಂಬುದನ್ನು ಸಾಬೀತುಪಡಿಸಿದ್ದರು.
ಬದಲಾದ ರಾಜಕೀಯ ಸನ್ನಿವೇಶದಿಂದಾಗಿ 2004 ಹಾಗೂ 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಆಖಾಡಾಕ್ಕೆ ಇಳಿದಿದ್ದ ಉದಾಸಿಗೆ ಮತದಾರ ಗೆಲವು ತಂದುಕೊಡುವ ಮೂಲಕ ತಮಗೆ ಪಕ್ಷಕ್ಕಿಂತಲೂ ಉದಾಸಿ ಅವರ ಮೇಲೆ ಹೊಂದಿರುವ ಅಭಿಮಾನ ಎಂತಹದ್ದು ಎಂಬುದನ್ನು ತೋರ್ಪಡಿಸಿದ್ದರು.
ಮೂರು ಬಾರಿ: ಹಾಲಿ ಕಾಂಗ್ರೆಸ್ ಅಭ್ಯರ್ಥಿಯೂ ಸಹ ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಎಂಬುದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕಾಂಗ್ರೆಸ್‌ನಿಂದಲೇ 1978, 89 ಹಾಗೂ 99 ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಹಸೀಲ್ದಾರ್ ಆಯ್ಕೆಯಾಗಿದ್ದರು.
ಹಾವು-ಏಣಿ: ಕೆಜೆಪಿ ಅಭ್ಯರ್ಥಿ ಉದಾಸಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ತಹಸೀಲ್ದಾರ್ ಮಧ್ಯೆ 1983ರ ಚುನಾವಣೆಯಿಂದಲೂ ಹಾವು-ಏಣಿ ನಡೆಯುತ್ತಲೇ ಬಂದಿದ್ದು ವಿಶೇಷ. 1978ರಲ್ಲಿ ನಡೆದ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ತಹಸೀಲ್ದಾರ್ ವಿರುದ್ಧ ಉದಾಸಿ ಸ್ಪರ್ಧಿಸಿರಲಿಲ್ಲ.
1983ರಿಂದ 2008ರ ಚುನಾವಣೆಯವರೆಗೂ ಉದಾಸಿ ಹಾಗೂ ತಹಸೀಲ್ದಾರ್ ಪರಸ್ಪರ ಎದುರಾಳಿಗಳಾಗಿಯೇ ಕಣದಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ. ಉದಾಸಿ, ಆಯಾ ಸಂದರ್ಭದ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಪಕ್ಷ ಬದಲಿಸಿ ಕಣಕ್ಕಿಳಿದಿದ್ದರೂ ಮತದಾರರು ಅವರ ಕೈಬಿಡದಿರುವುದು ಕ್ಷೇತ್ರದ ಜನರೊಂದಿಗೆ ಅವರು ಹೊಂದಿರುವ ಬಾಂಧವ್ಯ ಎಂಥದ್ದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರೆ ಅತಿಶೋಕ್ತಿಯಾಗಲಿಕ್ಕಿಲ್ಲ.
ಐದು-ಮೂರು!: ಹಾನಗಲ್ ಕ್ಷೇತ್ರದ ಶಾಸಕರಾಗಿ ಉದಾಸಿ ಈವರೆಗೂ 5 ಬಾರಿ ಆಯ್ಕೆಯಾಗಿದ್ದರೆ, ತಹಸೀಲ್ದಾರ 3 ಬಾರಿ ಆಯ್ಕೆಯಾಗಿದ್ದಾರೆ. 1989 ಹಾಗೂ 99 ಚುನಾವಣೆಯಲ್ಲಿ ತಹಸೀಲ್ದಾರ್ ವಿರುದ್ಧ ಸ್ಪರ್ಧಿಸಿದ್ದ ಉದಾಸಿ ಸೋಲುಂಡಿದ್ದರು. ನಂತರದ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದರು ಎಂಬುದು ಉಲ್ಲೇಖನೀಯ.
ಕೆಜೆಪಿಗೆ ಪ್ಲಸ್: ಕ್ಷೇತ್ರದಿಂದ ಕೆಜೆಪಿಯಿಂದ ಸ್ಪರ್ಧಿಸಲಿರುವ ಅಭ್ಯರ್ಥಿ ಯಾರೆಂಬುದು 15-20 ದಿನಗಳ ಹಿಂದೆಯೇ ಮತದಾರರಿಗೆ ತಿಳಿದಿದ್ದು, ಕೆಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿ ಯಾರೆಂಬುದು ಚುನಾವಣೆ 15 ದಿನಗಳು ಬಾಕಿ ಉಳಿದಿರುವಾಗ ಘೋಷಿಸಿದೆ.
ಆದಾಗ್ಯೂ, ಕಾಂಗ್ರೆಸ್‌ನ ಅಭ್ಯರ್ಥಿ ತಹಸೀಲ್ದಾರ್, ಮಾಜಿ ಸಚಿವ ಉದಾಸಿ ಅವರಷ್ಟೇ ಕ್ಷೇತ್ರದ ಜನತೆಗೆ ಚಿರಪರಿಚಿತರಾಗಿದ್ದರಿಂದ ಈ ವಿಷಯ ಪಕ್ಷಕ್ಕೆ ಅಷ್ಟೊಂದು ನಷ್ಟವನ್ನುಂಟು ಮಾಡಲಿಕ್ಕಿಲ್ಲ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು.
ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ಇನ್ನೂ ತಮ್ಮ ಪಕ್ಷದ ಅಭ್ಯರ್ಥಿ ಯಾರು ಎಂಬ ಗುಟ್ಟವನ್ನು ಬಿಟ್ಟು ಕೊಟ್ಟಿಲ್ಲ. ಎಲ್ಲ ಸೂಕ್ಷ್ಮತೆಗಳನ್ನು ಗಮನಿಸಿದಾಗ ಹಾನಗಲ್ ಮತಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಕೆಜೆಪಿ ವರ್ಸಸ್ ಕಾಂಗ್ರೆಸ್ ಎಂಬಂತೆ ಗೋಚರವಾಗಲಾರಂಭಿಸಿದೆ.
ಕಳೆದ ಬಾರಿ ಬಿಜೆಪಿಯಿಂದ ಕ್ಷೇತ್ರವನ್ನು ತಮ್ಮ ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದ ಉದಾಸಿ, ಈ ಬಾರಿಯ ಚುನಾವಣೆಯಲ್ಲಿಯೂ ಗೆಲವು ಸಾಧಿಸುವರೇ ಎಂಬುದು ಇಡೀ ರಾಜ್ಯದ ಜನತೆಯನ್ನು ಕುತೂಹಲದಿಂದ ಎದುರು ನೋಡುವಂತಾಗಿದೆ.
ಕ್ಷೇತ್ರದಲ್ಲಿನ ಸದ್ಯದ ಪರಿಸ್ಥಿತಿ ಮೇಲೆ ಒಮ್ಮೆ ಕಣ್ಣಾಡಿಸಿದಾಗ ಬಿಜೆಪಿ ಹಾಗೂ ಜೆಡಿಎಸ್ ಆಟಕ್ಕುಂಟು ಲೆಕ್ಕಕಿಲ್ಲ ಎಂಬ ಸ್ಥಿತಿಯಲ್ಲಿವೆ. ಮತದಾರ ಪ್ರಭು ಪಕ್ಷಕ್ಕೆ ಮನ್ನಣೆ ನೀಡುವರೋ ಅಥವಾ ಅಭ್ಯರ್ಥಿ ವರ್ಚಸ್ಸಿಗೆ ಮಣೆ ಹಾಕುವರೋ ಎಂಬುದು ಕಾದುನೋಡಬೇಕಿದೆ.
- ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.