ಕಾಂಗ್ರೆಸ್ ಗೆಲ್ಲಿಸುತ್ತೇನೆ
ಬ್ಯಾಡಗಿ: ಮಾತೃ ಪಕ್ಷ ಕಾಂಗ್ರೆಸ್ಗೆ ಎಂದಿಗೂ ದ್ರೋಹ ಮಾಡಲಾರೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾಂಗ್ರೆಸ್ಸೇ ಅಡ್ಡಿ ಎಂಬ ಮಾತನ್ನು ಸುಳ್ಳು ಮಾಡುತ್ತೇನೆ ಎಂದು ಮುಖಂಡ ಎಸ್.ಆರ್. ಪಾಟೀಲ ಹೇಳಿದರು. ಬುಧವಾರ ತಮ್ಮ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣನವರ ಜತೆ ನಡೆಸಿದ ಜಂಟಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 10 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಭ್ರಷ್ಟರ ಕೈಗೆ ಅಧಿಕಾರವನ್ನು ಕೊಡಬೇಕಾಯಿತು. ಅಭಿವೃದ್ಧಿ ಹೆಸರಿನಲ್ಲಿ ರಾಜ್ಯದ ನೆಲ-ಜಲ-ಸಂಪತ್ತನ್ನು ಲೂಟಿ ಮಾಡಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಸಾಮಾಜಿಕ ನ್ಯಾಯದಡಿ ಅಧಿಕಾರ ನಡೆಸುವ ಕಾಂಗ್ರೆಸ್ ಅನಿವಾರ್ಯವಾಗಿದೆ ಎಂದರು.
ಬೇಷರತ್ ಬೆಂಬಲ: ಕಾರ್ಯಕರ್ತರ ಹಾಗೂ ಅಭಿಮಾನಿಗಳ ಒತ್ತಡಕ್ಕೆ ಮಣಿದು ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದು ಸತ್ಯ. ಆದರೆ, ಕಳೆದ ಬಾರಿ ಕಾಂಗ್ರೆಸ್ ಸೋಲಿಗೆ ನನ್ನನ್ನೇ ಹೊಣೆಗಾರನನ್ನಾಗಿ ಮಾಡಲಾಗಿತ್ತು. ಅದೂ ಸಹ ನನ್ನ ಮನಸ್ಸಿಗೆ ನೋವಾಗಿತ್ತು. ಇದೀಗ ನಿರ್ಧಾರ ಬದಲಾಯಿಸಿದ್ದು, ನೋವನ್ನು ಮರೆತು ಪಕ್ಷದ ಅಧೀಕೃತ ಅಭ್ಯರ್ಥಿ ಬಸವರಾಜ ಶಿವಣ್ಣನವರ ಅವರ ಗೆಲುವಿಗೆ ಬೇಷರತ್ತಾಗಿ ಶ್ರಮಿಸಲಿದ್ದೇನೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಜಿ ಶಾಸಕ ಸುರೇಶಗೌಡ ಪಾಟೀಲ ನನ್ನ ಹತ್ತಿರದ ಸಂಬಂಧಿ ಎಂದ ಮಾತ್ರಕ್ಕೆ ನಮ್ಮಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದೇನೆ ಎಂಬ ಮಾತುಗಳಲ್ಲಿ ಹುರುಳಿಲ್ಲ. ಇದು ಸತ್ಯಕ್ಕೆ ದೂರವಾದ್ದರಿಂದ ವಿಷಯಗಳಿಗೆ ಪ್ರತಿಕ್ರಯಿಸಲಾರೆ ಎಂದರು.
ಪಾಟೀಲ ನೇತೃತ್ವದಲ್ಲಿ ಎಲೆಕ್ಷನ್ ಬಸವರಾಜ ಶಿವಣ್ಣನವರ ಮಾತನಾಡಿ, ಮುಖಂಡ ಎಸ್.ಆರ್. ಪಾಟೀಲ ಅವರು ಸಾಕಷ್ಟು ಅನುಭವಿಕರಿದ್ದಾರೆ. ಪಾಟೀಲ್ ಮಾರ್ಗದರ್ಶನ ಕಾಂಗ್ರೆಸ್ ಪಕ್ಷಕ್ಕೆ ಅವಶ್ಯವಿದೆ. ಅವರ ನೇತೃತ್ವದಲ್ಲಿಯೇ ಚುನಾವಣೆ ಮುಂದಿನ ರೂಪುರೇಷೆಗಳನ್ನು ಹಾಕಿಕೊಳ್ಳಲು ನಿರ್ಧರಿಸಿದ್ದಾಗಿ ತಿಳಿಸಿದರು. ಎಸ್.ಆರ್. ಪಾಟೀಲ ಟಿಕೆಟ್ ವಂಚಿತರಾಗಲು ನಾನು ಕಾರಣನಲ್ಲ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿ ಸ್ಪರ್ಧಿಸುತ್ತಿದ್ದೇನೆ. ಆದರೆ, 6 ಜನ ಟಿಕೆಟ್ ಆಕಾಂಕ್ಷಿಗಳಿದ್ದರೂ ಕೊನೆ ಗಳಿಗೆ ಪಕ್ಷದ ವರಿಷ್ಠರು ಸ್ಪರ್ಧಿಸಲು ನನಗೆ ಅವಕಾಶ ಕಲ್ಪಿಸಿಕೊಟ್ಟರು ಯಾವೊಬ್ಬ ಕಾರ್ಯಕರ್ತರು ಈ ಕುರಿತು ಅನ್ಯತಾ ಭಾವಿಸದಂತೆ ಮನವಿ ಮಾಡಿದರು. ಪ್ರಸಕ್ತ ಚುನಾವಣೆಯಲ್ಲಿ ನನ್ನ ಗೆಲುವನ್ನು ಕಾಂಗ್ರೆಸ್ ಪಕ್ಷದ ಗೆಲುವೆಂದು ಭಾವಿಸಿಕೊಳ್ಳುತ್ತೇನೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಸಕ್ತದ ಎಲ್ಲ ಬೆಳವಣಿಗೆಗಳು ನಾಟಕೀಯ ಎಂದು ಭಾವಿಸದಂತೆ ಮನವಿ ಮಾಡಿದರಲ್ಲದೇ, ಇಂದಿನಿಂದಲೇ ಜೊತೆಗೂಡಿ ಪ್ರಚಾರಕ್ಕೆ ತೆರಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಮೇಶ್ ಬೇಟಗೇರಿ, ದಾನಪ್ಪ ಚೂರಿ, ನಾಗಪ್ಪ ಬಣಕಾರ, ಮಹಾಂತೇಶ್ ವಸ್ತ್ರದ, ಬಿ.ಪಿ.ಚನ್ನಗೌಡ್ರ ರಾಜಣ್ಣ ಹೊಂಬರಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹಿರೇಕೆರೂರು ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಬಿ.ಎಚ್. ಬನ್ನಿಕೋಡ ಸ್ಪರ್ಧೆ
ಹಿರೇಕೆರೂರು: ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಬುಧವಾರ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಐದು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪಟ್ಟಣಕ್ಕೆ ಆಗಮಿಸಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮನ್ನು ಘೋಷಿಸಿ, ಪಕ್ಷದ ಸಂಘಟನೆಗೆ ಸೂಚಿಸಿದ್ದರು. ಹೀಗಾಗಿ, 118 ಗ್ರಾಮಗಳಲ್ಲಿ ಸಂಚರಿಸಿ, ಪಕ್ಷವನ್ನು ಸಂಘಟಿಸಿದ್ದೆ. ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಠಿಕಾಣಿ ಹೂಡಿ ಟಿಕೆಟ್ ನೀಡುವಂತೆ ಒತ್ತಾಯಿಸಿದರೂ ಭರವಸೆ ನೀಡುತ್ತಾ ವಿಳಂಬ ಧೋರಣೆ ಅನುಸರಿಸಿದರು. ಬೇರೆ ಪಕ್ಷಕ್ಕೆ ಹೋಗದಂತೆ ಹಾಗೂ ಪಕ್ಷೇತರನಾಗಿಯೂ ನಾಮಪತ್ರ ಸಲ್ಲಿಸದಂತೆ ಒಳ ಸಂಚು ರೂಪಿಸಲಾಗಿತ್ತು. ತಮ್ಮ ಜನಪ್ರಿಯತೆ ಸಹಿಸದೆ ತಾಲೂಕಿನ ಕಾಂಗ್ರೆಸ್, ಕೆಜೆಪಿ ಮುಖಂಡರು ಜೆಡಿಎಸ್ನ ಸಂಸದೀಯ ಮಂಡಳಿ ಮುಖ್ಯಸ್ಥರ ಜತೆ ಒಳಒಪ್ಪಂದ ಮಾಡಿಕೊಂಡು ಸಂಚು ರೂಪಿಸಿ ಟಿಕೆಟ್ ತಪ್ಪಿಸಿದರು ಎಂದು ಆರೋಪಿಸಿದರು.
ಕಾರ್ಯಕರ್ತರ, ಅಭಿಮಾನಿಗಳ ಒತ್ತಡಕ್ಕೆ ಮಣಿದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ತಾಲೂಕಿನಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆ. ಚುನಾವಣೆ ಖರ್ಚಿಗೆ ಕಾರ್ಯಕರ್ತರೇ ರು. 22,600 ನೀಡಿದ್ದಾರೆ. ಕೆಲವರು ರು. 1.89 ಲಕ್ಷ ವಂತಿಗೆ ನೀಡುವುದಾಗಿ ಹೇಳಿದ್ದಾರೆ ಎಂದರು. ಕಾರ್ಯಕರ್ತರು, ಮುಖಂಡರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

