ಹಾವೇರಿ

ಹಾನಗಲ್: 9 ಅಭ್ಯರ್ಥಿಗಳಿಂದ ನಾಮಪತ್ರ

Published On :

ಹಾನಗಲ್: ಹಾನಗಲ್ಲ ವಿಧಾಸಭೆ ಕ್ಷೇತ್ರದ ಚುನಾವಣೆಗೆ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿಜೆಪಿ, ಕೆಜೆಪಿ, ಕಾಂಗ್ರೆಸ್, ಬಿಎಸ್‌ಆರ್, ಜೆಡಿಎಸ್, ಬಿಎಸ್‌ಪಿ ಹಾಗೂ ಪಕ್ಷೇತರರು ನಾಮಪತ್ರ ಸಲ್ಲಿಸುವ ಮೂಲಕ ಯಾರು ಯಾವ ಪಕ್ಷಕ್ಕೆ ಎಂಬ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ಮಾಜಿ ಸಚಿವ ಸಿ.ಎಂ. ಉದಾಸಿ ತಿಂಗಳು ಮೊದಲೇ ಕೆಜೆಪಿ ಅಭ್ಯರ್ಥಿಯಾಗಿ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಉದಾಸಿ ಅವರ ನೇರ ಪ್ರತಿಸ್ಪರ್ಧಿ ಎಂದೇ ಪರಿಗಣಿತವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಗೊಂದಲ ಹಾಗೂ ವಿಳಂಬ, ಇತರ ಪಕ್ಷಗಳ ಅಭ್ಯರ್ಥಿಗಳ ಘೋಷಣೆ ಕೊನೆ ಘಳಿಗೆಯವರೆಗೂ ಕಾದಿದ್ದು ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಅಂತಹ ಭಾರಿ ಗಿಮಿಕ್ ನಡೆಯದೇ ಮನೋಹರ ತಹಸೀಲ್ದಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದರು.
ಉದಾಸಿ ಅವರಿಂದ ಈ ಚುನಾವಣೆ ಹೊತ್ತಿಗೆ ಸಿಡಿದು ನಿಂತ ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಹಾದಿಮನಿ ಬಿಜೆಪಿ ಅಭ್ಯರ್ಥಿಯಾದರು. ಆದರೆ, ಕಾಂಗ್ರೆಸ್ ಅಭ್ಯರ್ಥಿಯಾಗುವರೆಂಬ ಸುದ್ದಿ ಬೆನ್ನತ್ತಿದ್ದ ಹಾನಗಲ್ಲ ತಾಲೂಕಿನ ಮತದಾರರಿಗೆ ಮೋಹನಕುಮಾರ ಜೆಡಿಎಸ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ ಖ್ವಾಜಾಮೊಹದ್ದೀನ ಅಣ್ಣೀಗೇರಿ ಅವರು ಕೂಡ ಜೆಡಿಎಸ್ ಅಭ್ಯರ್ಥಿ ಎಂದೇ ನಾಮಪತ್ರ ಸಲ್ಲಿಸಿದ್ದರಾದರೂ 'ಬಿ' ಫಾರಂ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಉಳಿದಿದ್ದಾರೆ. ಬಿಎಸ್ಸಾರ್ ಅಭ್ಯರ್ಥಿಯಾಗಿ ಸೋಮಶೇಖರ ಕೋತಂಬರಿ, ಬಹುಜನ ಸಮಾಜವಾದಿ ಪಕ್ಷದಿಂದ ಲಮಾಣಿ ವಾಚಪ್ಪ ಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ.
ಉಳಿದಂತೆ ಪಕ್ಷೇತರರಾಗಿ ಉಡಚಪ್ಪ ಉದ್ದನಕಲ್, ಅಬ್ದುಲ್‌ವಹಾಬ ಭಂಡಾರಿ, ರಾಮಪ್ಪ ಯಳ್ಳೂರ, ಚನ್ನಬಸನಗೌಡ ಪಾಟೀಲ, ನಾರಾಯಣ ರಾಯ್ಕರ, ಶ್ರೀನಿವಾಸ ಸಂಕಪಾಳೆ, ಗುರುಮೂರ್ತಿ ತಟ್ಟಿ, ಸುರೇಶ ನಾಯ್ಕ ಉರ್ಫ್ ನೆಲ್ಲಿಬೀಡ, ಸಿದ್ದಪ್ಪ ಪೂಜಾರ, ಮಾಲತೇಶ ಜಾಡರ, ಶಿವಶಂಕ್ರಪ್ಪ ಬಾರ್ಕಿ ನಾಮಪತ್ರ ಸಲ್ಲಿಸಿದ್ದಾರೆ. ಈಗ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ರಂಗು ಮೂಡಿದೆಯಾದರೂ ಬಾಹ್ಯ ಅಬ್ಬರದ ಪ್ರಚಾರಕ್ಕೆ ಕಡಿವಾಣವಿದ್ದ ಕಾರಣ ಅಭ್ಯರ್ಥಿಗಳು ಶಾಂತ ಹಾಗೂ ಸದ್ದಿಲ್ಲದ ಪ್ರಚಾರಕ್ಕೆ ಮೊರೆ ಹೋಗಿರುವುದಂತೂ ಸತ್ಯ. ಮಾಜಿ ಸಚಿವ ಸಿ.ಎಂ. ಉದಾಸಿ ಹಾಗೂ ವಿಧಾನಸಭೆ ಮಾಜಿ ಉಪಾಧ್ಯಕ್ಷೆ ಮನೋಹರ ತಹಸೀಲ್ದಾರ್ ಇಲ್ಲಿ 8ನೇ ಚುನಾವಣೆಯಲ್ಲಿ ಸಾಂಪ್ರದಾಯಿಕ ಅಭ್ಯರ್ಥಿಗಳಾಗಿದ್ದಾರೆ. ಕಳೆದ ಏಳು ಚುನಾವಣೆಗಳಲ್ಲಿ ಉದಾಸಿ 5 ಬಾರಿ ಹಾಗೂ ಮನೋಹರ್ ತಹಸೀಲ್ದಾರ್ 3 ಬಾರಿ ಆಯ್ಕೆಯಾಗಿದ್ದಾರೆ. ಈ ಬಾರಿ ಮತ್ತೆ ಮತದಾರ ನಿರೀಕ್ಷಿಸಿದಂತೆ ಈ ಇಬ್ಬರೂ ಘಟಾನುಘಟಿಗಳು ಸಾಂಪ್ರದಾಯಿಕ ಎದುರಾಳಿಗಳಾಗಿದ್ದಾರೆ. ಈವರೆಗೂ ಬೇರೆ ಯಾರಿಗೂ ಇಲ್ಲಿ ಆಯ್ಕೆ ಅದೃಷ್ಟ ದೊರೆತಿಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಬಯಸಿ ಹಾನಗಲ್ಲ ತಾಲೂಕಿನಲ್ಲಿ ಗುರುತಿಸಿಕೊಂಡು ಈಗ ಜೆಡಿಎಸ್ ಅಭ್ಯರ್ಥಿಯಾಗಿರುವ ಮೋಹನಕುಮಾರ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ ಅವರ ನಿಕಟ ನಾಯಕರಾಗಿದ್ದ ಬಸವರಾಜ ಹಾದಿಮನಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಯಾಗಿರುವುದು ಕೂಡ ಗಮನಾರ್ಹ. ಈ ಎಲ್ಲದರ ನಡುವೆ ಬಹಳಷ್ಟು ಪಕ್ಷಗಳು ಈ ಬಾರಿ ಸ್ಪರ್ಧೆಗಿಳಿದಿರುವುದು ಕೂಡ ಗಮನಾರ್ಹ ಸಂಗತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.