ಹಾವೇರಿ

ಬಿಜೆಪಿ ಬೆಲೆ ತೆರಬೇಕಾಗುತ್ತದೆ

Published On :

ಬ್ಯಾಡಗಿ: ಬಿ.ಎಸ್. ಯಡಿಯೂರಪ್ಪಗೆ ಅಧಿಕಾರ ನೀಡಿದರೆ ಮುಂದಿನ 20 ವರ್ಷ ರಾಜಕೀಯ ಸನ್ಯಾಸ ಸ್ವೀಕರಿಸಬೇಕಾಗುತ್ತದೆ ಎಂಬ ಭಯದಿಂದ ವಿಪಕ್ಷಗಳ ಜತೆ ಕೈಜೋಡಿಸಿದ ಬಿಜೆಪಿ ಮುಖಂಡರು ಅವರನ್ನು ಪದಚ್ಯುತರನ್ನಾಗಿಸಿದರು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೇಳಿದರು.
ಶುಕ್ರವಾರ ಬನ್ನಿಹಟ್ಟಿ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಅಭಿವೃದ್ಧಿ ಎಂದರೆ ಏನು ಎಂಬುದನ್ನು ಬಿಎಸ್ವೈ ತೋರಿಸಿಕೊಟ್ಟಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯವನ್ನು ದೇಶದಲ್ಲೇ ಎರಡನೇ ಸ್ಥಾನಕ್ಕೆ ಎತ್ತರಿಸಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ. ಯಡಿಯೂರಪ್ಪ ಒಂದು ಶಕ್ತಿ. ಅವರನ್ನು ಹತ್ತಿಕ್ಕಲು ಕೆಲವರು ಕುತಂತ್ರ ಮಾಡಿದರು. ಅವರ ಸಾಮರ್ಥ್ಯ ಫಲಿತಾಂಶದ ಬಳಿಕ ತಿಳಿಯಲಿದೆ ಎಂದರು.
ದೂರದೃಷ್ಟಿಯ ಅಭಿವೃದ್ಧಿ ಕನಸನ್ನು ಹೊತ್ತ ಅವರ ಏಳಿಗೆಯನ್ನು ಸಹಿಸದ ಕೆಲ ನಾಯಕರು ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಪಲಾಯನ ಬಿಎಸ್ವೈ ಜಾಯಮಾನವಲ್ಲ. ಹೀಗಾಗಿ, ಕರ್ನಾಟಕ ಜನತಾ ಪಕ್ಷ ಸ್ಥಾಪಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅವರನ್ನು ಬೆಂಬಲಿಸುವ ಮೂಲಕ ಮತ್ತೆ ಅಧಿಕಾರ ನೀಡಲು ಮತದಾರರೇ ನಿರ್ಣಯಿಸಿದ್ದಾರೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ಭೂಚೇತನ, ಬಡ್ಡಿರಹಿತ ಸಾಲ, ರೈತರಿಗೆ ಸಬ್ಸಿಡಿ ಬೀಜ- ಗೊಬ್ಬರದಂತಹ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ ಯಡಿಯೂರಪ್ಪ ಈ ರಾಜ್ಯದ ಕಂಡ ಧೀಮಂತ ನಾಯಕ. ಎಲ್ಲ ವರ್ಗಗಳ ಏಳ್ಗೆಗೂ ಸಹಕರಿಸಿದ್ದಾರೆ. ಹೀಗಾಗಿ, ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಕ್ಷೇತ್ರದಲ್ಲಿ ಮಾಜಿ ಶಾಸಕರು ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಸಜ್ಜನರ ಗೆಲವಿಗೆ ಶ್ರೀರಕ್ಷೆ ಆಗಲಿದೆ ಎಂದರು.
ತಾಪಂ ಸದಸ್ಯ ನಾಗರಾಜ ಬಳ್ಳಾರಿ, ಬುಡ್ಡನಗೌಡ್ರ, ಗಂಗಣ್ಣ ಎಲಿ, ಶಿವಕುಮಾರ ಬಸನಗೌಡ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.