ಕಮಲ ಅರಳುವುದು ಕನಸಿನ ಮಾತು
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 20
ಇಷ್ಟು ದಿನ ಪದೇ ಪದೇ ಉಲ್ಬಣಿಸುತ್ತಿದ್ದ ಭಿನ್ನಮತದಿಂದ ಬಾಡಿ ಹೋಗಿದ್ದ ಕಮಲದ ದಳಗಳು ಈಗ ಬಿ.ಎಸ್. ಯಡಿಯೂರಪ್ಪನವರು ಇಲ್ಲದಿರುವುದರಿಂದ ಸಂಪೂರ್ಣ ಉದುರಿ ಹೋಗಿವೆ. ಕಳೆಗುಂದಿದ ಕಮಲಕ್ಕೆ ಮತ್ತೆ ಮೊದಲಿನ ಸೌಂದರ್ಯ ಬರುವುದು ಕನಸಿನ ಮಾತು ಎಂದು ಹಾವೇರಿ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ್ ಹೇಳಿದರು.
ಕನ್ನಡಪ್ರಭಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ನೆಹರೂ ಓಲೇಕಾರ್ ಮಾತನಾಡಿ, ಮಾತಿನುದ್ದಕ್ಕೂ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಯನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದ ಯಡಿಯೂರಪ್ಪನವರ ಸಾಧನೆಗಳನ್ನು ಬಿಜೆಪಿ ನಾಯಕರು ಸಹಿಸಲಿಲ್ಲ. ಬಿಜೆಪಿ ಮನೆ ಕಟ್ಟಿದ ಯಜಮಾನನಿಗೆ ಮೋಸ ಮಾಡಿದರು. ಹಲವು ನಾಯಕರು ಶಕುನಿ ಕೆಲಸ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದರು ಎಂದು ಓಲೇಕಾರ್ ಆರೋಪಿಸಿದರು.
ಸಂದರ್ಶನದ ಆಯ್ದ ಭಾಗ: ಅಭಿವೃದ್ಧಿ ರಾಜ್ಯದಲ್ಲಿ ಮರೆತು ಹೋಗಿತ್ತು. ಅಭಿವೃದ್ಧಿ ಅಂದರೆ ಏನು, ಬಡವರ ಶ್ರೇಯೋಭಿವೃದ್ಧಿ ಮಾಡುವುದರಲ್ಲಿ ಅಡಗಿದೆ. ಒಬ್ಬ ಜನನಾಯಕನ ಪಾತ್ರ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟವರು ಮಾಜಿ ಸಿಎಂ ಬಿಎಸ್ವೈ. ಇಂತಹ ಜನನಾಯಕನನ್ನೇ ಬಿಜೆಪಿ ತಾನು ಗಟ್ಟಿಯಾಗಲು ಬಳಸಿಕೊಂಡು ಬಳಿಕ ಹೊರಹಾಕಿದೆ. 40 ವರ್ಷ ಹಗಲು-ರಾತ್ರಿ, ಚಳಿ- ಮಳೆ ಲೆಕ್ಕಿಸದೇ ಪಕ್ಷ ಸಂಘಟನೆ ಮಾಡಿದ ನಾಯಕನಿಗೆ ಬಿಜೆಪಿ ಮೋಸ ಮಾಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೆಜೆಪಿ ಅಲೆ ಜೋರಾಗಿ ಬೀಸುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪನವರ ಅಭಿವೃದ್ಧಿ ಯೋಜನೆಗಳು ಜನಮನ ಗೆದ್ದಿವೆ. ರಾಜ್ಯದ ಜನತೆ ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪನವರನ್ನು ನೋಡಲು ಕಾತುರರಾಗಿದ್ದಾರೆ. ಬಿಎಸ್ವೈ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಆ ಮೂಲಕ ಕಲ್ಯಾಣ ಕರ್ನಾಟಕದ ಕನಸು ನನಸಾಗುತ್ತದೆ ಎಂದು ನೆಹರೂ ಓಲೇಕಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮೂವರು ಶಕುನಿಗಳು: ಬಿಎಸ್ವೈ ನೇತೃತ್ವದ ಸರ್ಕಾರ ದೇಶದಲ್ಲೇ ಮಾದರಿ ರಾಜ್ಯವಾಗುವತ್ತ ದಾಪುಗಾಲಿಟ್ಟಿತ್ತು. ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನು ಮಾಡಿ ಬೃಹತ್ ಕಂಪನಿಗಳು ಕರ್ನಾಟಕದತ್ತ ಮುಖ ಮಾಡುವಂತೆ ಮಾಡಿದ್ದು ಯಡಿಯೂರಪ್ಪನವರ ಸಾಧನೆ. ಅಲ್ಲದೇ ಮಹಿಳೆಯರ, ದೀನದಲಿತರ, ವಿದ್ಯಾರ್ಥಿಗಳ, ಯುವಕರ ಸಂಕಷ್ಟಗಳಿಗೆ ಪರಿಹಾರ ನೀಡುವಂತಹ ಯೋಜನೆಗಳನ್ನು ಬಿಎಸ್ವೈ ನೀಡಿದ್ದು ಅವರ ಪ್ರಭಾವ ಉತ್ತುಂಗಕ್ಕೆ ಏರುವಂತೆ ಮಾಡಿದವು. ರಾಜ್ಯದ ಜನರ ಪ್ರೀತಿ, ವಿಶ್ವಾಸ ಯಡಿಯೂರಪ್ಪನವರ ಮೇಲೆ ಹೆಚ್ಚಾಗಿರುವುದನ್ನು ಸಹಿಸದ ಬಿಜೆಪಿಯ ಮೂವರು ಶಕುನಿ(ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅನಂತಕುಮಾರ, ಸಿಎಂ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ) ಕೆಲಸವನ್ನು ಮಾಡಿದರು. ತಮ್ಮ ಸ್ವ-ಹಿತಾಸಕ್ತಿಗೆ ಅಭಿವೃದ್ಧಿ ಹರಿಕಾರರಾಗಿರುವ ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು.
ಬಿಜೆಪಿ ಶೂನ್ಯ: ತಮ್ಮ ಲಾಭಕ್ಕಾಗಿ ಬಿಜೆಪಿಯಿಂದ ಬಿಎಸ್ವೈ ಹೋರಹೋಗುವಂತೆ ಮಾಡಿದ ಬಿಜೆಪಿ ನಾಯಕರಿಗೆ ಮೇ 8ರ ಚುನಾವಣಾ ಫಲಿತಾಂಶವೇ ತಕ್ಕ ಪಾಠವಾಗಲಿದೆ. ಬಿಎಸ್ವೈ ಇಲ್ಲದ ಬಿಜೆಪಿ ಶೂನ್ಯ. ಅಭಿವೃದ್ಧಿ ನೇತಾರ ಇಲ್ಲದೇ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕಾಗಿದ್ದ ಉಪ ಮುಖ್ಯಮಂತ್ರಿ ಈಶ್ವರಪ್ಪನವರು ಫಲಿತಾಂಶಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದರು ಎಂದು ಗೇಲಿ ಮಾಡಿದರು.
ನಂಬಿಕೆ ದ್ರೋಹಕ್ಕೆ ತಕ್ಕ ಶಾಸ್ತಿ: ಮಾಜಿ ಸಿಎಂ ಯಡಿಯೂರಪ್ಪ ಯಾವ ನಾಯಕರನ್ನು ನಂಬಿ ಕರ್ನಾಟಕ ಜನತಾ ಪಕ್ಷ ಕಟ್ಟಲಿಲ್ಲ. ಅವರಿಗೆ ರಾಜ್ಯದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರ ಬೆಂಬಲವಿದೆ. ಬಿಎಸ್ವೈ ನಂಬಿದ್ದ ಕೆಲವರು ಅವರ ನಂಬಿಕೆಗೆ ದ್ರೋಹ ಬಗೆದರು. ಆದರೆ, ಈ ಚುನಾವಣೆಯಲ್ಲಿ ನಂಬಿಕೆ ದ್ರೋಹ ಮಾಡಿವರಿಗೆ ಜನತೆಯೇ ತಕ್ಕಪಾಠ ಕಲಿಸಲಿದ್ದಾರೆ. ಜನತೆ ಮನದಾಳದಲ್ಲಿ ಬಿಎಸ್ವೈ ಬಗ್ಗೆ ಪ್ರೀತಿ, ಅವರ ಅಭಿವೃದ್ಧಿ ಕಾರ್ಯಗಳು ಮಾಸದಂತೆ ಉಳಿದಿವೆ. ಹಾಗಾಗಿ ಯಡಿಯೂರಪ್ಪನವರಿಗೆ ಕೈ ಕೊಟ್ಟವರಿಗೆ ಜನ ಪಾಠ ಕಲಿಸುತ್ತಾರೆಂದರು.
ಹಾವೇರಿ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳೇ ನನ್ನ ಪ್ರಣಾಳಿಕೆ. ಹಾವೇರಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಮಾಡಿದ್ದೇನೆ. ಪ್ರಸಕ್ತ ಚುನಾವಣೆಯಲ್ಲಿ ನನ್ನದೇ ಗೆಲವೆಂದು ಖಂಡತುಂಡವಾಗಿ ನುಡಿದರು. ಬಿಎಸ್ವೈ ಸಹಕಾರದಿಂದ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ವಸತಿಗಾಗಿ ರು. 45 ಕೋಟಿ ಅನುದಾನದಿಂದ ಬಡವರಿಗೆ ಮನೆಗಳು ಸಿಗುವಂತೆ ಮಾಡಿದ್ದು, ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಅನುದಾನ ಒದಗಿಸಲಾಗಿದೆ. ತಾಲೂಕಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರೊದಗಿಸುವ ಮೂಲಕ ನಗರ, ಗ್ರಾಮಗಳನ್ನು ನೀರಿನ ಸಮಸ್ಯೆ ಪರಿಹರಿಸುವ ಕಾರ್ಯ ನಡೆಯುತ್ತಿದೆ. ಉತ್ತಮ ರಸ್ತೆಗಳನ್ನು ಮಾಡುವ ಮೂಲಕ ಸಾರ್ವಜನಿಕರ ಸಂಚಾರ ಸುಗಮಗೊಳಿಸಲಾಗಿದೆ. 2008ರ ಚುನಾವಣೆಯಲ್ಲಿ 18 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿದ್ದೆ. ಪ್ರಸಕ್ತ 36 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುತ್ತೇನೆ.
- ನೆಹರು ಓಲೇಕಾರ
ಹಾವೇರಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ
ಭ್ರಮೆಯಲ್ಲಿ ಕಾಂಗ್ರೆಸ್
ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಕಾಂಗ್ರೆಸ್ ಭ್ರಮೆಯಲ್ಲಿದೆ. ಆದರೆ, ರಾಜ್ಯದ ಮತದಾರರಿಗೆ ಯಡಿಯೂರಪ್ಪ ಮಾಡಿದ ಸಾಧನೆ, ಅಭಿವೃದ್ಧಿಗಳು ಮಾತ್ರ ಕಾಣುತ್ತಿವೆ. ದೇಶದಲ್ಲೇ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು 1ನೇ ಸ್ಥಾನಕ್ಕೆ ಕೆಜೆಪಿ ಸರ್ಕಾರ ಬಿಎಸ್ವೈ ನೇತೃತ್ವದಲ್ಲಿ ತರುತ್ತಾರೆ. ಕಾಂಗ್ರೆಸ್ ನಾಯಕರಿಗೆ ಚುನಾವಣಾ ಫಲಿತಾಂಶ ನಿರಾಸೆ ಉಂಟು ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

