ಆಡ್ವಾಣಿ ಆಗಮನ ತಡ: ಕುಗ್ಗದ ಉತ್ಸಾಹ
ರಾಣಿಬೆನ್ನೂರು: ಬಿಸಿಲ ತಾಪದಲ್ಲೇ ಜಯಘೋಷ, ಕೆಳೆಗಿಳಿಯಲು ತಡಕಾಡಿದ ಕಾಪ್ಟರ್, 2 ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾದರೂ ಕುಂದದ ಜನರ ಉತ್ಸಾಹ, ಆಸೆಯಿಂದ ನಗರಕ್ಕೆ ಬಂದ ಮಾಜಿ ಉಪಪ್ರಧಾನಿ ಲಾಲ್ಕೃಷ್ಣ ಆಡ್ವಾಣಿಗೆ ಸಾವಿರಾರು ಜನರಿಂದ ಅದ್ಧೂರಿ ಸ್ವಾಗತ, ಇದು ನಗರದ ಬಿ.ಟಿ. ಪಾಟೀಲ ಮೈದಾನದಲ್ಲಿ ಭಾನುವಾರ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದ ಝಲಕ್.
ಪೂರ್ವ ನಿಗದಿಯಂತೆ ಮಧ್ಯಾಹ್ನ 3.30ಕ್ಕೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮ ಬರೋಬ್ಬರಿ ಸಂಜೆ 5.55 ಪ್ರಾರಂಭವಾಯಿತು. ಅಲ್ಲಿಯವರೆಗೂ ಜನರು, ಮಾಧ್ಯಮದವರು ಹಾಗೂ ರಕ್ಷಣಾ ಸಿಬ್ಬಂದಿ ಮಾತ್ರ ಬಿಸಿಲಲ್ಲೇ ಕಳೆಯಬೇಕಾಯಿತು. ನಗರದ ಹೊರವಲಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಬಿಸಿಲಿನಲ್ಲೇ ಬಸ್ ನಿಲ್ದಾಣದಿಂದ ವೇದಿಕೆಯವರೆಗೂ ಜನರು ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.
ಆಕಾಶದಲ್ಲಿ ಹಾರಾಟ: ನಗರದಿಂದ 20 ಕಿ.ಮೀ. ದೂರದಲ್ಲಿರುವ ಕುಮಾರಪಟ್ಟಣಂನಲ್ಲಿ ಹೆಲಿಕಾಪ್ಟರ್ ಇಳಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಾಲಕನಿಗೆ ನಿಲುಗಡೆ ಸ್ಥಳದಿಂದ ನಿರ್ದಿಷ್ಟ ಸೂಚನೆ ಸಿಗದೇ ಇರುವ ಹಿನ್ನೆಲೆಯಲ್ಲಿ ಸುಮಾರು 15 ನಿಮಿಷಗಳಿಗೂ ಹೆಚ್ಚು ಕಾಲ ಹೆಲಿಕಾಪ್ಟರ್ ಆಕಾಶದಲ್ಲಿಯೇ ಸುತ್ತು ಹಾಕುವಂತಾಯಿತು. ಇದು ಕೆಲಕಾಲ ನೆರೆದ ಕಾರ್ಯಕರ್ತರನ್ನು ಆತಂಕಗೊಳ್ಳುವಂತೆ ಮಾಡಿತ್ತು. ಬಾನೆತ್ತರದಲ್ಲಿ ಹಾರಾಡುತ್ತಿದ್ದ ಕಾಪ್ಟರ್ ಯಾವಾಗ ಭೂಸ್ಪರ್ಶ ಮಾಡಲಿದೆ ಎಂದು ಜನತೆ ತದೇಕ ಚಿತ್ತದಿಂದ ಆಕಾಶದ ಕಡೆ ಮುಖ ಮಾಡಿ ನೋಡುವಂತಾಯಿತು.
ಪ್ಯಾಡ್ನಲ್ಲಿ ಆಡ್ವಾಣಿ: ಸಂಯಮ ಕಾಯ್ದುಕೊಂಡ ಮತದಾರ, ಆಡ್ವಾಣಿಯವರ ಕಾರ್ಯಕ್ರಮವೆಂದ ಮೇಲೆ ಜಿಲ್ಲಾ ಬಿಜೆಪಿ ಬಹಳ ಅದ್ಧೂರಿಯಾಗಿಯೇ ಕಾರ್ಯಕ್ರಮ ಆಯೋಜಿಸಿತ್ತು. ಜನರು ಕುಳಿತುಕೊಳ್ಳಲು ಸಾವಿರಾರು ಕುರ್ಚಿಗಳನ್ನು ಸಂಘಟಿಕರು ಹಾಕಿಸಿದ್ದರು. ಉರಿ ಬಿಸಿಲಿನ ಮದ್ಯೆಯೂ ಜನನಾಯಕ ಆಡ್ವಾಣಿ, ಬೊಮ್ಮಾಯಿ ಹಾಗೂ ಪ್ರಹ್ಲಾದ ಜೋಶಿ ಅವರ ಭಾಷಣಗಳನ್ನು ಆಲಿಸಲು ಚಾತಕ ಪಕ್ಷಿಯಂತೆ ಕಾರ್ಯಕರ್ತರು ಕಾಯ್ದುಕುಳಿತಿದ್ದು ವಿಶೇಷವಾಗಿತ್ತು.
ಸಾಲದ ಕುರ್ಚಿಗಳು: ಕಾರ್ಯಕ್ರಮ ಆರಂಭಕ್ಕೂ ಮೊದಲು ನಗರದ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದ ಗಿಡ ಮರಗಳ ಆಸರೆಯನ್ನು ಪಡೆದಿದ್ದ ಕಾರ್ಯಕರ್ತರು ಆಡ್ವಾಣಿ ಆಗಮಿಸುತ್ತಿದ್ದಂತೆಯೇ ಮುಗಿಲು ಮುಟ್ಟುವ ಜಯಘೋಷ ಕೂಗುತ್ತಾ ಕಾರ್ಯಕ್ರಮದ ಸ್ಥಳಕ್ಕೆ ದೌಡಾಯಿಸಿದರು. ಇದರಿಂದಾಗಿ ಹಾಕಿದ್ದ ಕುರ್ಚಿಗಳೆಲ್ಲ ತುಂಬಿ ಸಾವಿರಾರು ಜನರು ನಿಂತುಕೊಂಡೇ ಭಾಷಣ ಆಲಿಸಿದರು.
ನೀತಿ ಸಂಹಿತೆ ಕಿರಿಕಿರಿ: ರಾಷ್ಟ್ರಮಟ್ಟದ ನಾಯಕ ಪ್ರಚಾರಕ್ಕೆಂದು ಆಗಮಿಸಿದ್ದರೂ ನಗರದ ವ್ಯಾಪ್ತಿಯಲ್ಲಿ ಎಲ್ಲಿಯೂ ಬ್ಯಾನರ್ಗಳು ಕಂಡು ಬರಲಿಲ್ಲ. ಕನಿಷ್ಠಪಕ್ಷ ಉತ್ತಮ ವೇದಿಕೆಯನ್ನಾದರೂ ರೂಪಿಸಬೇಕೆಂದರು ನೀತಿ ಸಂಹಿತೆಯ ಕಟ್ಟೆಚ್ಚರದಿಂದಾಗಿ ಆಯೋಜಕರು ಸಣ್ಣ ವೇದಿಕೆಯನ್ನು ನಿರ್ಮಿಸಿದ್ದರು. ಅಲ್ಲದೇ ಯಾವುದೇ ರೀತಿಯ ಊಟ, ಉಪಾಹಾರದ ವ್ಯವಸ್ಥೆಯಿಲ್ಲದೇ ಹಸಿದ ಹೊಟ್ಟೆಯಲ್ಲೇ ಜನತೆ ನೆರೆದಿದ್ದು ಕಂಡು ಬಂದಿತು.
ಸಾದಾ ಮೈಕ್: ಆಡ್ವಾಣಿ ಭಾಷಣಕ್ಕೆಂದು ಬುಲೆಟ್ ಪ್ರೂಫ್ ಮೈಕ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅದನ್ನು ತಿರಸ್ಕರಿಸಿ ಜನರಿಗೆ ಕಾಣುವ ರೀತಿಯಲ್ಲಿ ನಿರೂಪಕರು ಬಳಸುತ್ತಿದ್ದ ಮೈಕ್ನ್ನು ಹಿಡಿದ ಆಡ್ವಾಣಿ ತಮ್ಮ ಭಾಷಣವನ್ನು ಆರಂಭಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾದರು.
-ಶಿವಾನಂದ ಮಲ್ಲನಗೌಡರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

