ಹಾವೇರಿ

ಕ್ಷೇತ್ರದ ಅಭಿವೃದ್ಧಿ ಹರಿಕಾರ

Published On :

ಶಿಗ್ಗಾಂವಿ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ಚುನಾವಣೆ ತುರುಸಿನಿಂದ ಕೂಡಿದ್ದು, ಕಣದಲ್ಲಿರುವ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವಾರು ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಬಸವರಾಜ ಬೊಮ್ಮಾಯಿ, ಕೆಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವರೆಂಬ ನಿರೀಕ್ಷೆ ಇತ್ತು. ಆದರೆ ಅಂತಿಮ ಘಳಿಗೆಯಲ್ಲಿ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿಯೇ ಕಣಕ್ಕಿಳಿದರು.
ಬೊಮ್ಮಾಯಿ ಮಾಡಿದ್ದೇನು: ದೇಶದಲ್ಲಿ ಪ್ರಥಮ ಅನುಷ್ಠಾನ ಯೋಜನೆಗೆ ಭಾಜನವಾದ ಶಿಗ್ಗಾಂವಿ ತುಂತುರು ನೀರಾವರಿ ಯೋಜನೆ ಸಮರ್ಪಣೆಯಿಂದ ಶಿಗ್ಗಾಂವಿ-ಸವಣೂರು ಮತ್ತು ಹಾನಗಲ್ಲ ತಾಲೂಕಿನ ಸುಮಾರು 25ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಜಾರಿಗೊಂಡಿದೆ. ಎರಡನೇ ಹಂತದ ಯೋಜನೆಯಾಗಿ ನೀರಾವರಿ ಸೌಲಭ್ಯವನ್ನು ಸವಣೂರಿಗೂ ವಿಸ್ತರಿಸುವ ಪ್ರಸ್ತಾಪಕ್ಕೆ ಕೊನೆಯ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ವರದಾ-ಧರ್ಮಾ ನದಿಗಳಿಗೆ ಮಳೆಗಾಲದಲ್ಲಿ ಸೇರುವ ನೀರನ್ನು ಕೃಷಿ ಭೂಮಿಗೆ ಹರಿಸಿ ನೀರಾವರಿಗೊಳಪಡಿಸುವುದು ಈ ಯೋಜನೆಯ ಉದ್ದೇಶ. ನದಿಗಳು ಸೇರುವ ಸ್ಥಳದ ಕೆಳಗಡೆ ಸುಮಾರು 400 ಮೀ. ದೂರದಲ್ಲಿ ಹಲಸೂರ ಗ್ರಾಮದ ಬಳಿ 'ಡೈವರ್ಶನ್ ವಿಯರ್‌' 1.50 ಟಿಎಂಸಿ ನೀರು ಸಂಗ್ರಹಗಾರ ಸ್ಥಾಪಿಸಲಾಗುತ್ತಿದೆ. 'ಡೈವರ್ಶನ್ ವಿಯರ್‌'ನಲ್ಲಿ ಸಂಗ್ರಹವಾದ 1.35 ಟಿಎಂಸಿ ನೀರನ್ನು ಮಾತ್ರ ಏತ ನೀರಾವರಿಗೆ ಬಳಸಿಕೊಳ್ಳಲಾಗುತ್ತದೆ.
ಸಂಗ್ರಹ ನೀರನ್ನು ಇಂಟಿಕ್ ಕೆನಾಲ್ ಜಾಕ್‌ವೆಲ್ ಕಂ ಪಂಪ್‌ಹೌಸ್‌ನಿಂದ ಡೆಲಿವರಿ ಚೇಂಬರ್ಸ್ ಮೂಲಕ ಹೊಲಗಳಲ್ಲಿ ಸ್ಥಾಪಿತಗೊಂಡ ಸಂಪುಗಳಿಗೆ ನೀರು ಪೂರೈಕೆಯಾಗುತ್ತದೆ. ಸಂಪ್‌ನಲ್ಲಿ ಸಂಗ್ರಹಗೊಂಡ 1.35 ಟಿಎಂಸಿ ನೀರಿನಿಂದ ಹೊಲಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮಳೆ ಬಾರದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಐದು ಸಣ್ಣ ಕೆರೆಗಳಿಗೂ ನೀರು ಹರಿಸಲಾಗುತ್ತದೆ. ಬೆಳೆಗಳಿಗೆ ನೀರು ಒದಗಿಸುವ ಉದ್ದೇಶಿತ ಈ ಯೋಜನೆಯಡಿ 0.15 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಯೋಜನೆ ನಿರ್ವಹಣೆ: ವರದಾ ನದಿ ಪಾತ್ರದಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹದ ನೀರನ್ನು ಉಪಯೋಗಿಸಿಕೊಳ್ಳಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ವರದಾ ನದಿಯಿಂದ ನೀರನ್ನು 6.135 ಕೈಮೆಕ್ಸ್ ಬಿಡುಗಡೆ ಪ್ರಮಾಣದಲ್ಲಿ 2,000 ಮಿ.ಮೀ.-1,200 ಮಿ.ಮೀ. ವ್ಯಾಸದ 11.6 ಕಿ.ಮೀ. ಉದ್ದದ ರೈಸಿಂಗ್ ಮೇನ್ ಮೂಲಕ 6 ಡೆಲಿವರಿ ಚೇಂಬರ್ ಸ್ಥಾಪಿಸಲಾಗಿದೆ.
ಯೋಜನೆ ಲಾಭ ಪಡೆವ ಗ್ರಾಮಗಳು:ಶಿಗ್ಗಾಂವಿ ತಾಲೂಕಿನ ಕುಂದೂರು, ಹಳೇ ಬಂಕಾಪೂರ, ಬಾಡ, ಚಿಕ್ಕನೆಲ್ಲೂರ, ಬಂಕಾಪೂರ, ಮೂಕಬಸರೀಕಟ್ಟಿ, ಕಲ್ಯಾಣ, ಚಾಕಾಪುರ, ಮುನವಳ್ಳಿ, ಸದಾಶಿವಪೇಟೆ, ಹೊಟ್ಟೂರ, ಗುಡ್ಡದ ಚನ್ನಾಪುರ, ನಾರಾಯಣಪೂರ, ಬಿಸನಳ್ಳಿ, ಸವಣೂರ ತಾಲೂಕಿನ ಕುಣಿಮೆಳ್ಳಿಹಳ್ಳಿ, ಹಲಸೂರ, ತವರುಮೆಳ್ಳಿಹಳ್ಳಿ, ಬರದೂರು ಸೇರಿ 30 ಗ್ರಾಮಗಳಲ್ಲಿನ 9,900 ಹೆಕ್ಟರ್ ಪ್ರದೇಶದ ಕೃಷಿ ಭೂಮಿ ನೀರಾವರಿಗೊಳಪಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.